ಇದುವರೆಗೆ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಇನ್ನು ಮುಂದೆಯೂ ಮಾಡುವುದಿಲ್ಲ. ತಾಕತ್ತಿದ್ದರೆ ಕುಮಾರಸ್ವಾಮಿ ಅವರು ಧರ್ಮಸ್ಥಳ ಮಂಜುನಾಥನ ಎದುರು ಪ್ರಮಾಣ ಮಾಡಲು ಬರಲಿ ಎಂದು ಸವಾಲು ಹಾಕಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಭ್ರಷ್ಟಾಚಾರವೇನಾದರೂ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದ್ದಾರೆ.
ಧರ್ಮ ಸಿಂಗ್ ಕೊಟ್ಟ ಸೈಟು, ಪುತ್ತೂರಿನ ಸೈಟು, ನನ್ನ ಕಂಪನಿ ಹೆಸರಲ್ಲಿರುವ 166 ಎಕ್ರೆ ಬಿಟ್ಟು, ಒಂದಿಂಚು ಭೂಮಿಯೇನಾದ್ರೂ ನನ್ನ ಹೆಸರಲ್ಲಿದ್ದರೆ, ನಾನು ರಾಜಕೀಯ ಸನ್ಯಾಸ ಮಾಡ್ತೀನಿ. ಯಾರು ಬೇಕಾದರೂ ಈ ಸವಾಲು ಸ್ವೀಕರಿಸಿ ನೋಡೋಣ ಎಂದವರು ಮರಳಿ ಸವಾಲು ಹಾಕಿದರು. ಇದೇ ಸವಾಲಿನ ಪತ್ರವನ್ನು ಜೆಡಿಎಸ್ ರಾಜ್ಯಾಧ್ಯಕ್ಷ, ಹಾಲಿ ಸಂಸದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಳುಹಿಸಿರುವುದಾಗಿ ಅವರು ಹೇಳಿದರು.
ನನ್ನ ಮೇಲೆ ಪ್ರತ್ಯಕ್ಷವಿರಲಿ, ಪರೋಕ್ಷವಾಗಿಯಾಗಲೀ, ಅನ್ಯ ಪಕ್ಷದವರಾಗಲೀ, ನಮ್ಮ ಪಕ್ಷದವರೇ ಆಗಲೀ, ನನ್ನ ವಿರುದ್ಧ ಆರೋಪ ಮಾಡುತ್ತಿರುವವರು ನನ್ನ ಸವಾಲು ಸ್ವೀಕರಿಸಲು ಮುಂದೆ ಬರಲಿ ಎಂದು ಅವರು ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.
ನಾನು ಎಲ್ಲವನ್ನೂ ಕಾನೂನುಬದ್ಧವಾಗಿಯೇ ಮಾಡಿದ್ದೇನೆ. ಎಲ್ಲ ದಾಖಲೆಗಳನ್ನು ಲೋಕಾಯುಕ್ತರ ಎದುರು ಇಟ್ಟಿದ್ದೇನೆ. ಯಾವುದೇ ತಪ್ಪು ಮಾಡಿಲ್ಲವಾದುದರಿಂದ ಚಿಂತೆ ಮಾಡುವ ಅಗತ್ಯವೇ ಇಲ್ಲ ಎಂದು ಶೋಭಾ ಆತ್ಮವಿಶ್ವಾಸದಿಂದ ನುಡಿದರು.
ಕೊನೆಯಲ್ಲಿ, ಭೂಹಗರಣ ಕುರಿತ ಆರೋಪಗಳಿಂದ ರೋಸಿ ಹೋಗಿ ದುಃಖ ತಳೆದುಕೊಳ್ಳಲಾರದೆ ಪತ್ರಿಕಾಗೋಷ್ಠಿಯಿಂದ ನಿರ್ಗಮಿಸಿದರು,