ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜೀನಾಮೆ ಕೊಡ್ಬೇಕಿದ್ರೆ ರೆಡ್ಡಿಗಳನ್ನು ಕಿತ್ತೆಸೆಯಿರಿ: ಸಿಎಂ ಷರತ್ತು?
(Yaddyurappa | BJP Government | Karnataka Crisis | CM | Chief Minister)
ರಾಜೀನಾಮೆ ಕೊಡ್ಬೇಕಿದ್ರೆ ರೆಡ್ಡಿಗಳನ್ನು ಕಿತ್ತೆಸೆಯಿರಿ: ಸಿಎಂ ಷರತ್ತು?
ಬೆಂಗಳೂರು, ಸೋಮವಾರ, 22 ನವೆಂಬರ್ 2010( 11:28 IST )
ಭೂಹಗರಣಗಳ ಆರೋಪ ಮತ್ತು ಬಿಜೆಪಿಯೊಳಗಿನ ಒಳಜಗಳವು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿಗೆ ಕುತ್ತಾಗಿದ್ದು, ಪಟ್ಟ ಹೋಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ, ರಾಜೀನಾಮೆ ನೀಡಲು ಮುಖ್ಯಮಂತ್ರಿ ಯಡಿಯೂರಪ್ಪ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ತನ್ನ ಪದಚ್ಯುತಿಗೆ ಭ್ರಷ್ಟಾಚಾರವೇ ಮಾನದಂಡವಾಗುತ್ತದೆಯಾದರೆ, ಅಕ್ರಮ ಗಣಿಗಾರಿಕೆ ನಿರತವಾಗಿರುವ ರೆಡ್ಡಿ ಸಹೋದರರು ಸಂಪುಟದಲ್ಲಿರಬಾರದು, ರಾಜ್ಯ ಬಿಜೆಪಿಯಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವ ಅನಂತ್ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ದೂರವಿಟ್ಟರೆ ರಾಜೀನಾಮೆಗೆ ತನ್ನದೇನೂ ಅಭ್ಯಂತರವಿಲ್ಲ ಎಂಬುದೇ ಸಿಎಂ ಷರತ್ತುಗಳು.
ಈ ನಡುವೆ, ಮುಖ್ಯಮಂತ್ರಿ ರಾಜೀನಾಮೆ ಕೋರುವ ಕುರಿತು ಹೈಕಮಾಂಡ್ ಇನ್ನೂ ಯಾವುದೇ ಸೂಚನೆ ನೀಡಿಲ್ಲ ಎಂದು ಬೆಳಿಗ್ಗೆ ಹತ್ತೂಕಾಲು ಸುಮಾರಿಗೆ ಸಚಿವ ವಿ.ಎಸ್.ಆಚಾರ್ಯ ಅವರು ದೆಹಲಿಯಲ್ಲಿ ತಿಳಿಸಿದ್ದು, ಅಂತಿಮ ಸುತ್ತಿನ ಮಾತುಕತೆ ನಡೆಯಲಿದೆ ಎಂದಿದ್ದಾರೆ. ಆದರೆ ಸಿಎಂ ತಲೆದಂಡವಾಗುವುದಿಲ್ಲ, ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದೂ ತಿಳಿಸಿದ್ದಾರೆ. ಇದೇ ಮಾತನ್ನು ಗೃಹ ಸಚಿವ ಆರ್.ಆಶೋಕ್ ಸಹಾ ದೆಹಲಿಯಲ್ಲಿ ಹೇಳಿದ್ದು, ನಾಳೆಯೊಳಗೆ ಎಲ್ಲವೂ ಸರಿಯಾಗಲಿದೆ ಎಂದಿದ್ದಾರೆ.
ಪುಟ್ಟಪರ್ತಿಯಲ್ಲಿ ಶ್ರೀ ಸತ್ಯ ಸಾಯಿ ಬಾಬಾ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಡಿಯೂರಪ್ಪ ಅವರು ಪುಟ್ಟಪರ್ತಿಗೆ ತೆರಳಿದ್ದು, ಸಂಜೆ 4.30ರ ವೇಳೆಗೆ ದೆಹಲಿಗೆ ತೆರಳಲಿದ್ದಾರೆ ಮತ್ತು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
ಸಿಎಂ ತಲೆದಂಡಕ್ಕೆ ತೀರ್ಮಾನವಾಗಿದೆ, ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬ ಗೊಂದಲ ಭರಿತ ವರದಿಗಳ ನಡುವೆಯೇ, ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಮತ್ತು ಅದಿರು ರಫ್ತು ನಿಷೇಧಿಸಿ ತಮಗೂ ಲಾಭ ಬಾರದಂತೆ ಮಾಡಿರುವ ಯಡಿಯೂರಪ್ಪ ಅವರನ್ನು ಕಿತ್ತು ಹಾಕಲು ಜನಾರ್ದನ ರೆಡ್ಡಿ ಮತ್ತು ಗಣಿ ಬ್ರದರ್ಸ್ ಮಾಡಿರುವ ಪಿತೂರಿ ಇಲ್ಲಿ ವರದಿಯಾಗಿದ್ದು, ರೆಡ್ಡಿಗಳಿಗೆ ತಕ್ಕ ಪಾಠ ಕಲಿಸಿಯೇ ನಿರ್ಗಮಿಸಲು ಯಡಿಯೂರಪ್ಪ ಪಣ ತೊಟ್ಟಂತಿದೆ.
ಯಡಿಯೂರಪ್ಪ ಅವರ ಷರತ್ತನ್ನು ಈಗಾಗಲೇ ಕೇಂದ್ರದಲ್ಲಿಯೂ ಯಡಿಯೂರಪ್ಪ ಪರ ಮತ್ತು ವಿರೋಧ ಎಂಬ ಎರಡು ಬಣಗಳಿರುವ ಬಿಜೆಪಿ ಹೈಕಮಾಂಡ್ ಹೇಗೆ ಒಪ್ಪುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿರುವ ವಿಷಯ.