ಕರ್ನಾಟಕದ ಜನರದ್ದು ತರ್ಲೆ ಬುದ್ಧಿ, ಯಾವುದನ್ನೂ ನೆಟ್ಟಗೆ ಮಾಡಲು ಬಿಡಲ್ಲ ಎಂದು ಶನಿವಾರ ಖ್ಯಾತ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯ್ಲಿ, ಅವರು ಹೇಳಿದ್ದು ಬಿಜೆಪಿಯವರಿಗೆ ಇರಬಹುದು ಎಂದಿದ್ದಾರೆ.
ಮಂಗಳೂರಿನಲ್ಲಿ ಮಾತನಾಡುತ್ತಿದ್ದ ಮೊಯ್ಲಿಯವರು, ಹಿರಿಯ ಸಾಹಿತಿ ಎನಿಸಿಕೊಂಡವರು ಈ ರೀತಿಯಾಗಿ ಮಾತನಾಡಬಾರದಿತ್ತು. ಅವರು ಹೇಳಿದ್ದು ಬಹುಶಃ ಬಿಜೆಪಿಯವರಿಗೇ ಹೊರತು, ಕರ್ನಾಟಕದ ಜನತೆಗಲ್ಲ ಎಂದರು.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶಂಸಿಸಿರುವುದಕ್ಕೂ ಮೊಯ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಜಾತೀಯತೆ, ಮತೀಯತೆ ಯಾವತ್ತಿದ್ದರೂ ಸಾಹಿತ್ಯಕ್ಕೆ ವಿರುದ್ಧವಾದುದು. ಹಾಗಾಗಿ ನರಮೇಧ ನಡೆಸಿದ ಮೋದಿ ಹೊಗಳಿಕೆ ತಪ್ಪು, ಅದು ಸರಿಯಲ್ಲ ಎಂದರು.
ಅದೇ ಹೊತ್ತಿಗೆ ಭೈರಪ್ಪನವರು ನೀಡಿದ್ದ ಹೇಳಿಕೆಯನ್ನು ಪ್ರತಿಭಟಿಸಿ ಮೈಸೂರಿನ ಅವರ ನಿವಾಸದ ಎದುರು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿರುವುದು ಕೂಡ ವರದಿಯಾಗಿದೆ. ಕರ್ನಾಟಕದ ಜನತೆಯನ್ನು ತರ್ಲೆಗಳು ಎಂದಿರುವುದು ಸರಿಯಲ್ಲ ಎನ್ನುವುದು ಅವರ ವಾದ.
ಕೇಂದ್ರ ಇಲ್ದೇ ಇದ್ರೆ ರಾಜ್ಯ ದಿವಾಳಿ... ಇದಕ್ಕೂ ಮೊದಲು ಉಡುಪಿ ಸಮೀಪದ ಹೆಬ್ರಿಯಲ್ಲಿ ಮಾತನಾಡುತ್ತಿದ್ದ ಮೊಯ್ಲಿಯವರು, ಕರ್ನಾಟಕವು ಕೇಂದ್ರದ ಅನುದಾನವನ್ನು ಅವಲಂಬಿಸಿದೆ. ಒಂದು ವೇಳೆ ಕೇಂದ್ರವು ತನ್ನ ಅನುದಾನವನ್ನು ನಿಲ್ಲಿಸಿದರೆ ರಾಜ್ಯವು ದಿವಾಳಿಯೆದ್ದು ಹೋಗುತ್ತದೆ ಎಂದರು.
ರಾಜ್ಯದ ಯೋಜನೆಗಳಿಗೆ ಕೇಂದ್ರದ ಹಣವನ್ನು ಬಳಕೆ ಮಾಡಲಾಗುತ್ತಿದೆ. ಬಿಜೆಪಿ ಸರಕಾರವು ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿ ಕುಳಿತಿದೆ ಎಂದು ಆರೋಪಿಸಿದರು.
ಮಠಾಧೀಶರು ರಾಜಕೀಯ ಮಾತನಾಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿದ ಮೊಯ್ಲಿ, ಇದು ಅಧರ್ಮದ ಸಂಕೇತ. ಮಠಾಧೀಶರು ಕೂಡ ಅಧರ್ಮದ ದಾಳಿ ತುಳಿದಿರುವುದು ಇದರಿಂದ ಸ್ಪಷ್ಟವಾಗಿದೆ. ಇದು ಅನೈತಿಕವಾದುದಾಗಿದೆ ಎಂದು ಯಾವುದೇ ಪಕ್ಷವನ್ನು ಹೆಸರಿಸದೆ ಅಭಿಪ್ರಾಯಪಟ್ಟರು.