ರಾಸಲೀಲೆ; ಸಿಐಡಿ ಎಸ್ಪಿ ವಿರುದ್ದ 'ನಿತ್ಯಾ' ಭಕ್ತೆ ಮೊಕದ್ದಮೆ
ಬೆಂಗಳೂರು, ಗುರುವಾರ, 6 ಜನವರಿ 2011( 11:26 IST )
ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದ್ದು, ಇದೀಗ ರಾಸಲೀಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಎಸ್ಪಿ ಕೆ.ಎನ್.ಯೋಗಪ್ಪ ರಾಮನಗರ ಕೋರ್ಟ್‌ನಲ್ಲಿ ಲೆನಿನ್ ಪರವಾಗಿ ಹೇಳಿಕೆ ನೀಡಿರುವ ಅವರ ವಿರುದ್ಧ ಸ್ವಾಮಿಯ ಭಕ್ತೆ ಅಂಜುಲಾ ಜಾಕ್‌ಸನ್ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿದ್ದಾರೆ.
ಲೆನಿನ್ ಹಾಗೂ ಸ್ವಾಮಿಯ ನಡುವಿನ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಇರುವಾಗ, ಅವರು ಲೆನಿನ್ ಪರವಾಗಿ ಹೇಳಿಕೆ ನೀಡಿ ಕೋರ್ಟ್ ಕಲಾಪದ ಮಧ್ಯೆ ಪ್ರವೇಶ ಮಾಡಿದ್ದಾರೆ ಎನ್ನುವುದು ಅಂಜುಲಾ ದೂರಿನಲ್ಲಿ ಆರೋಪಿಸಿದ್ದಾರೆ.
ನಿತ್ಯಾನಂದನ ಜತೆಗಿನ ರಾಸಲೀಲೆ ಪ್ರಕರಣದ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಿ ಲೆನಿನ್ ಸೇರಿದಂತೆ ಮೂವರ ವಿರುದ್ಧ ದೂರು ದಾಖಲು ಮಾಡಿದ್ದು, ಅದು ಅಲ್ಲಿಯ ಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ಲೆನಿನ್ ತನ್ನ ಖಾಸಗಿ ಬದುಕನ್ನು ರಂಜನೀಯವಾಗಿ ಚಿತ್ರೀಕರಿಸಿ ತೇಜೋವಧೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಂಜಿತಾ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ, ನನಗೆ ಜೀವ ಬೆದರಿಕೆ ಹಾಕಿ ಅಶ್ಲೀಲ ಚಿತ್ರೀಕರಣ ಹಾಗೂ ಅವಮಾನ ಪ್ರಕರಣದಡಿ ಲೆನಿನ್ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದರು.
ಆದರೆ ಪ್ರಕರಣದ ಕುರಿತಂತೆ ಯೋಗಪ್ಪ ಅವರು, ಲೆನಿನ್ ಪರವಾಗಿ ಸ್ವ ಇಚ್ಛೆಯಿಂದ ಹೇಳಿಕೆ ನೀಡಿ, ಅವರು ಒಳ್ಳೆಯವರು, ರಂಜಿತಾ ಆರೋಪದಲ್ಲಿ ಹುರುಳಿಲ್ಲ ಎಂದಿದ್ದರು. ಆ ನಿಟ್ಟಿನಲ್ಲಿ ಯೋಗಪ್ಪ ಅವರ ಹೇಳಿಕೆಯನ್ನು ಅಂಜುಲಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.