ಕಾಮಿ ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣ ಬಹಿರಂಗವಾಗುವ ಮುನ್ನ ಬ್ಲ್ಯಾಕ್‌ಮೇಲ್ ಮಾಡಲಾಗಿದ್ದು, ಅದಕ್ಕಾಗಿ ಆತ ಕೋಟ್ಯಂತರ ರೂಪಾಯಿ ಹಣ ಸಂದಾಯ ಮಾಡಿರುವ ಅಂಶ ಸಿಐಡಿ ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ.
'ತನ್ನ ಅನುಯಾಯಿಯೊಬ್ಬ (ರಂಜಿತಾ?)ರು ಪತ್ರಕರ್ತನಿಗೆ ಸುಮಾರು 10 ಕೋಟಿ ರೂಪಾಯಿ ಹಣ ಪಾವತಿ ಮಾಡಿದ್ದು, ತಾನು ರಾಸಲೀಲೆ ಸಿಡಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಲ್ಲ ಎಂದು ಭರವಸೆ ಕೂಡ ಕೊಟ್ಟಿದ್ದ' ಎಂದು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ ವೇಳೆ ನಿತ್ಯಾನಂದ ತಿಳಿಸಿದ್ದ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ರಾಸಲೀಲೆ ಪ್ರಕರಣ ಬಟಾಬಯಲಾಗುವ ಮುನ್ನ ಪತ್ರಕರ್ತ ತನ್ನ ವಕೀಲರ ಜತೆ ಆಗಮಿಸಿ ತನ್ನ ಭೇಟಿಯಾಗಿದ್ದ. ಆ ಸಂದರ್ಭದಲ್ಲಿ ಆತ ಕೆಲವು ವೀಡಿಯೋ ಕ್ಲಿಪ್ಸ್ ತಂದಿದ್ದ. ಅಲ್ಲದೇ 25 ಕೋಟಿ ರೂಪಾಯಿ ಕೊಡಬೇಕು, ಇಲ್ಲದಿದ್ದರೆ ಆ ಸಿಡಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿರುವುದಾಗಿಯೂ ನಿತ್ಯಾನಂದ ತಿಳಿಸಿದ್ದ.
ನಂತರ ಈ ಬಗ್ಗೆ ಪತ್ರಕರ್ತನ ಜತೆ ಚರ್ಚೆ ನಡೆಸಿ ಕೊನೆಗೆ ಹತ್ತು ಕೋಟಿ ರೂಪಾಯಿ ಹಣ ತನ್ನ ಶಿಷ್ಯರೊಬ್ಬರು ಸಂದಾಯ ಮಾಡಿರುವುದಾಗಿ ನಿತ್ಯಾನಂದ ಸಿಐಡಿ ಅಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದ.
PTI
ಹಾಗಾಗಿ ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಶಾಮೀಲಾಗಿದ್ದಾನೆ ಎಂಬುದನ್ನು ಈ ಹೇಳಿಕೆಯೇ ಸಾಬೀತುಪಡಿಸುತ್ತದೆ. ಒಂದು ಈತ ನಿರಪರಾಧಿ ಆಗಿದ್ದರೆ. ಪತ್ರಕರ್ತನಿಗೆ ಹಣ ಯಾಕೆ ಸಂದಾಯ ಮಾಡಬೇಕಿತ್ತು. ಬ್ಲ್ಯಾಕ್ ಮೇಲ್ ವಿರುದ್ಧ ದೂರು ಕೊಡಬಹುದಿತ್ತಲ್ಲವೇ ಎಂದು ಸಿಐಡಿ ತನಿಖಾ ತಂಡದ ಪೊಲೀಸ್ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
ಅಷ್ಟೇ ಅಲ್ಲ, ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಬ್ಲ್ಯಾಕ್ ಮೇಲ್ ಕರೆಗಳು, ಹಣದ ಬೇಡಿಕೆ ಇಟ್ಟಿರುವುದಾಗಿಯೂ ಇತ್ತೀಚೆಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಟಿ ರಂಜಿತಾ ಕೂಡ ಆರೋಪಿಸಿದ್ದಳು. ರಾಸಲೀಲೆ ಪ್ರಕರಣದ ನಂತರ ತಾನು ನಿತ್ಯಾನಂದ ಸ್ವಾಮಿ ಜತೆ ಯಾವುದೇ ಸಂಪರ್ಕ ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದಳು.
ಆದರೆ ರಂಜಿತಾಳನ್ನು ಸಿಐಡಿ ತನಿಖೆಗೆ ಒಳಪಡಿಸಿದ ಸಂದರ್ಭದಲ್ಲಿ ತನ್ನನ್ನು ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ಯಾವುದೇ ವಿವರಣೆ ಕೊಟ್ಟಿಲ್ಲವಾಗಿತ್ತು. ರಾಸಲೀಲೆ ವಿವಾದದ ನಂತರ ಮತ್ತು ಮೊದಲು ರಂಜಿತಾ ನಿರಂತರವಾಗಿ ತನ್ನ ಸಂಪರ್ಕದಲ್ಲಿ ಇದ್ದಿರುವುದಾಗಿ ಖುದ್ದು ನಿತ್ಯಾನಂದನೇ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿರುವುದಾಗಿ ಸಿಐಡಿ ತಿಳಿಸಿದೆ.
ಇದೀಗ ಅವರ ವಿರೋಧಾಭಾಸದ ಹೇಳಿಕೆ ಬಗ್ಗೆ ನಾವು ತನಿಖೆ ನಡೆಸುವುದಿಲ್ಲ. ತನಿಖೆ ಈಗಾಗಲೇ ಪೂರ್ಣಗೊಂಡಿರುವುದಾಗಿ ತಿಳಿಸಿರುವ ಸಿಐಡಿ ಅಧಿಕಾರಿ, ಆಶ್ರಮದಲ್ಲಿನ ಹಣದ ವಹಿವಾಟಿನ ಕುರಿತು ಆದಾಯ ತೆರಿಗೆ ಇಲಾಖೆ ಮುಂದಿನ ತನಿಖೆ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.