ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಶಬರಿಮಲೆ ದುರಂತ; ಸಚಿವ ಕತ್ತಿ ನೇತೃತ್ವದ ತಂಡ ದೌಡು (Sabarimala stampede | Kerala | Karnataka | Tamil Nadu)
Bookmark and Share Feedback Print
 
ಶಬರಿಮಲೆ ಕಾಲ್ತುಳಿತ ದುರಂತಕ್ಕೆ ಕರ್ನಾಟಕದ 17ಕ್ಕೂ ಹೆಚ್ಚು ಭಕ್ತರು ಬಲಿಯಾಗಿರುವುದಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿರುವ ರಾಜ್ಯ ಸರಕಾರ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ. ಅಲ್ಲದೆ ಸಚಿವ ಉಮೇಶ್ ಕತ್ತಿ ಮತ್ತು ಶೋಭಾ ಕರಂದ್ಲಾಜೆ ನೇತೃತ್ವದ ಎರಡು ವಿಶೇಷ ತಂಡವೊಂದನ್ನು ಶಬರಿಮಲೆಗೆ ರವಾನಿಸಿದೆ.

ಶಬರಿಮಲೆಗೆ ತೆರಳಿರುವ ಕರ್ನಾಟಕ ಮೂಲದ ಸಾವಿರಾರು ಭಕ್ತರನ್ನು ಸುರಕ್ಷಿತವಾಗಿ ನಾಡಿಗೆ ಕರೆ ತರುವುದು, ಮೃತರ ಪಾರ್ಥೀವ ಶರೀರಗಳನ್ನು ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡುವುದು ಮುಂತಾದ ಸಹಕಾರ ಕೆಲಸಗಳಿಗೆ ನೆರವಾಗಲು ಸಚಿವರ ತಂಡಗಳು ಹೊರಟಿವೆ.

ಇದನ್ನೂ ಓದಿ: ಶಬರಿಮಲೆ ಕಾಲ್ತುಳಿತಕ್ಕೆ 100ಕ್ಕೂ ಹೆಚ್ಚು ಬಲಿ

ಬೆಳಗಾವಿ ಉಸ್ತುವಾರಿ ಸಚಿವ ಕತ್ತಿಯವರ ಈ ತಂಡದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ದಳದ ಕಾರ್ಯದರ್ಶಿ ಸೇರಿದಂತೆ ನಾಲ್ವರಿದ್ದಾರೆ. ಬೆಂಗಳೂರಿನಿಂದ ಹೊರಡುವ ವಿಶೇಷ ವಿಮಾನ ಬೆಳಗಾವಿಗೆ ತೆರಳಿ, ಅಲ್ಲಿಂದ ಸಚಿವರನ್ನು ಹತ್ತಿಸಿಕೊಂಡು ಕೊಚ್ಚಿಗೆ ಹೋಗಲಿದೆ. ಅಲ್ಲಿಂದ ಹೆಲಿಕಾಪ್ಟರಿನಲ್ಲಿ ಘಟನಾ ಸ್ಥಳಕ್ಕೆ ತೆರಳಲಿದೆ.

ಶೋಭಾ ಕರಂದ್ಲಾಜೆ ನೇತೃತ್ವದ ತಂಡವು ಬೆಂಗಳೂರಿನಿಂದ ನೇರವಾಗಿ ಕೊಚ್ಚಿಗೆ ತೆರಳಿದೆ. ಕರ್ನಾಟಕದ ಎಲ್ಲಾ ಭಕ್ತರಿಗೂ ಸಕಲ ರೀತಿಯ ನೆರವನ್ನು ನೀಡಲಾಗುತ್ತದೆ ಎಂದು ರಾಜ್ಯ ಸರಕಾರ ಹೇಳಿಕೊಂಡಿದೆ.

ಮುಖ್ಯಮಂತ್ರಿ ವಿಷಾದ, ಪರಿಹಾರ ಘೋಷಣೆ...
ಶಬರಿಮಲೆ ಅಯ್ಯಪ್ಪ ಪುಣ್ಯಕ್ಷೇತ್ರದಲ್ಲಿ ನಡೆದಿರುವ ಕಾಲ್ತುಳಿತ ದುರಂತಕ್ಕೆ ಭಾರೀ ಸಂಖ್ಯೆಯ, ಅದರಲ್ಲೂ ಕರ್ನಾಟಕದ ಹಲವು ಭಕ್ತರು ಬಲಿಯಾಗಿರುವುದಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಹಾರ ಘೋಷಿಸಿದ್ದಾರೆ.

ಮೃತ ಕರ್ನಾಟಕ ಮೂಲದ ಭಕ್ತರ ಕುಟುಂಬಕ್ಕೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಾಳುಗಳ ಕುಟುಂಬಕ್ಕೆ ತಲಾ 25 ಸಾವಿರ ರೂಪಾಯಿಗಳ ಪರಿಹಾರ ನೀಡಲು ತಕ್ಷಣವೇ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.

ಅಲ್ಲದೆ ಸದ್ಯದಲ್ಲೇ ಶಬರಿಮಲೆಗೆ ಭೇಟಿ ನೀಡಿ, ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲನೆ ನಡೆಸಲಿರುವುದಾಗಿ ಸಿಎಂ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರದಿಂದಲೂ ಪರಿಹಾರ...
ಶಬರಿಮಲೆ ಘಟನೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಕೇಂದ್ರ ಸರಕಾರ ಹೇಳಿದೆ. ಈ ನಡುವೆ ಪ್ರಧಾನ ಮಂತ್ರಿಯವರು ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ