ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪ್ರಜಾಪ್ರಭುತ್ವದ ಕೊಲೆಗೈದ ರಾಜ್ಯಪಾಲ: ಸಿಎಂ ಕಿಡಿಕಿಡಿ
(Karnataka Governor | HR Bhardwaj | Prosecution of CM | BS Yeddyurappa)
ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ದಿಢೀರನೇ ಅನುಮತಿ ನೀಡಿರುವುದರ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಇದು 'ಹಾಡುಹಗಲೇ ಪ್ರಜಾಸತ್ತೆಯ ಕಗ್ಗೊಲೆ' ಎಂದು ತಿಳಿಸಿದ್ದು, ಈ ಅನುಮತಿಯ ಆದೇಶ ಪತ್ರವನ್ನು ತನಗೂ ನೀಡದೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ರಾಜ್ಯಪಾಲರ ವಿರುದ್ಧ ತೀವ್ರವಾಗಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಕೇಸು ದಾಖಲಿಸಲು ರಾಜ್ಯಪಾಲರ ಅನುಮತಿ
ಯಾವುದೇ ರೀತಿಯ ಪ್ರಾಥಮಿಕ ತನಿಖೆಯಿಲ್ಲದೆ ಅಥವಾ ಖಾಸಗಿ ವ್ಯಕ್ತಿಗಳ್ಯಾರೋ ನೀಡಿದ ದೂರಿಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿರುವ ತನ್ನ ಅಭಿಪ್ರಾಯವನ್ನೂ ಕೇಳದೆ ರಾಜ್ಯಪಾಲರು ಈ ನಿರ್ಧಾರ ತೆಗೆದುಕೊಂಡಿರುವುದು ದುರದೃಷ್ಟಕರವಾಗಿದ್ದು, ಅಸಾಂವಿಧಾನಿಕ ಮತ್ತು ರಾಜಕೀಯ ಪ್ರೇರಿತ ಕ್ರಮ ಎಂದು ಹೇಳಿದ್ದಾರೆ.
ರಾಜ್ಯಪಾಲರು ತಮ್ಮ ಕಚೇರಿಯ ಮೂಲಕ ರಾಜಕೀಯ ಅಜೆಂಡಾವನ್ನೂ ಮುನ್ನಡೆಸುತ್ತಿದ್ದು, ಆರಂಭದಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಏಜೆಂಟರಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ.
ನೇರವಾಗಿ ಜನಾದೇಶ ಪಡೆದು ಪ್ರತಿಪಕ್ಷಗಳು ಸಾಧಿಸಲು ವಿಫಲವಾಗಿರುವುದನ್ನು ರಾಜ್ಯಪಾಲರು ಮತ್ತು ರಾಜಭವನದ ಮೂಲಕ ಮಾಡಿಸುತ್ತಿವೆ. ಇದರಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ತೀರ್ಮಾನಿಸುವುದನ್ನು ರಾಜ್ಯದ ಜನತೆಗೇ ಬಿಟ್ಟಿದ್ದೇನೆ. ದೇಶದ ಕಾನೂನು ವ್ಯವಸ್ಥೆ ಮೇಲೆ ಅಪಾರ ನಂಬಿಕೆ ಇದೆ, ತಾನು ನಿರ್ದೋಷಿ ಎಂದು ಸಾಬೀತಾಗುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರದಿಂದ ಸುಪಾರಿ: ಸಿ.ಟಿ.ರವಿ ಕಿಡಿ ಈ ಮಧ್ಯೆ, ಆರಂಭದಿಂದಲೂ ರಾಜ್ಯ ಸರಕಾರದ ವಿರುದ್ಧ ಸಮರ ಸಾರಿರುವ ರಾಜ್ಯಪಾಲರು ಈಗ ಸರಕಾರ ಅಸ್ಥಿರಗೊಳಿಸಲು ಕೇಂದ್ರದಿಂದ ಸುಪಾರಿ ತೆಗೆದುಕೊಂಡ ಬಂದಿರುವ ರೀತಿಯಲ್ಲಿ ವರ್ತಿಸಿದ್ದಾರೆ, ಇದರಲ್ಲೇನೂ ಆಶ್ಚರ್ಯವಿಲ್ಲ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಕಿಡಿ ಕಟಕಿಯಾಡಿದ್ದಾರೆ.