ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಸೆಕ್ಸೀ ಸುಂದರಿ ಬಿಪಾಶಾ ಬಸು ಬಿಚ್ಚಿಟ್ಟದ್ದು ಹೀಗೆ...
ಸಂದರ್ಶನ
Feedback Print Bookmark and Share
 
IFM
ಪ್ರತಿಭೆ, ಸೌಂದರ್ಯ ಹಾಗೂ ಅತ್ಯುತ್ತಮ ಫಿಗರ್ ಇವೆಲ್ಲವೂ ಒಬ್ಬರಿಗೇ ಬರುವುದಿಲ್ಲವಂತೆ. ಆದರೆ, ಬಿಪಾಶಾಗೆ ಬಂದಿದೆ ಎಂಬುದು ಬಾಲಿವುಡ್ ಪಂಡಿತರ ಲೆಕ್ಕಾಚಾರ. ಅದೇನೇ ಇರಲಿ. ಈ ಮೂರರನ್ನೂ ಒಟ್ಟಾಗಿ ಪಡೆಯಲು ಬಿಪಾಶಾ ಸುಮ್ಮನೆ ಬಿಮ್ಮಗೆ ಮನೆಯಲ್ಲಿ ಕೂತಿಲ್ಲ. ಸಾಕಷ್ಟು ಶ್ರಮ ಪಟ್ಟಿದ್ದಾರಂತೆ. ತನ್ನ ದೇಹಸೌಂದರ್ಯ, ಉತ್ತಮ ಫಿಗರ್ ಪಡೆಯಲು ಬಿಪಾಶಾ ಪ್ರಯತ್ನ ಎಡೆಬಿಡದೆ ಐದು ವರ್ಷಗಳಿಂದ ಸಾಗಿದೆಯಂತೆ.

"ಒಂದೆರಡು ತಿಂಗಳಲ್ಲಿ ಎಲ್ಲ ಪಡೆಯಲಾಗುವುದಿಲ್ಲ. ಎಲ್ಲದಕ್ಕೂ ಪ್ರಯತ್ನ ಬೇಕು. ತೂಕ ಇಳಿಸುವ ವ್ಯಾಯಾಮ, ಯೋಗ, ಕಾರ್ಡಿಯೋ ಎಲ್ಲವನ್ನೂ ನಿಯಮಿತವಾಗಿ ಮಾಡುತ್ತೇನೆ. ಕೆಲವೊಮ್ಮೆ ಚಿತ್ರಗಳಿಗೆ ತುಂಬ ಬಳುಕುವ ಕರ್ವ್ ಆಗಿರುವ ದೇಹ ಬೇಕಾಗುತ್ತದೆ. ಇನ್ನೂ ಕೆಲವಕ್ಕೆ ಅಥ್ಲೆಟಿಕ್ ದೇಹ ಬೇಕಾಗುತ್ತದೆ. ಪಾತ್ರಕ್ಕೆ ತಕ್ಕ ಹಾಗೆ ದೇಹವನ್ನು ನಟನಟಿಯರು ಬದಲಾಯಿಸುತ್ತಲೇ ಇರಬೇಕು." ಎನ್ನುತ್ತಾರೆ ಈ ಗ್ಲಾಮರ್ ಬೆಡಗಿ.

ಅಂದಹಾಗೆ, ಬಿಪಾಶಾ ಯಾವಾಗಲೂ ಸ್ಟೈಲಿಶ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರಂತೆ. ಇತ್ತೀಚಿನ ದಿನಗಳಲ್ಲಿ ಚಿತ್ರಗಳಿಗೂ ಗ್ಲಾಮರಸ್ ಆಗಿರುವುದು ಹೆಚ್ಚು ಬೇಕಾಗುತ್ತದಂತೆ. ಆಕೆಯ ಇಷ್ಟವೂ ಅದೇ.

ಅದೇನೇ ಇರಲಿ, ವಿಚಿತ್ರವೆಂದರೆ, ಬಿಪಾಶಾಗೆ ಆಕೆಗೆ ಚಿತ್ರ ರಿಲೀಸ್ ಆಗುವಾಗ ಅಂಥ ದೊಡ್ಡ ಆಸಕ್ತಿ ಇರುವುದಿಲ್ಲವಂತೆ. "ನನ್ನ ಸಿನಿಮಾ ರಿಲೀಸ್ ಆಗುವತ್ತ ನಾನು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ನಟಿಸುತ್ತೇನೆ. ಹಾಗೆಯೇ ಬಿಡುತ್ತೇನೆ. ಅಷ್ಟೆ. ಜನ ನನ್ನನ್ನು ಇಷ್ಟಪಡದಿದ್ದರೂ ನನಗೇನೂ ಬೇಸರವಾಗುವುದಿಲ್ಲ. ನನ್ನ ವೈಯಕ್ತಿಕ ಸಂತೋಷಕ್ಕೆ ಸಿನಿಮಾಗಳಲ್ಲಿ ಮಾಡುತ್ತೇನೆ ಅಷ್ಟೆ. ಅದರ ಪರಿಣಾಮಗಳ ಬಗ್ಗೆ ಯೋಚನೆಯಿಲ್ಲ ನನಗೆ." ಎಂದು ಹುಬ್ಬು ಹಾರಿಸುತ್ತಾಳೆ.

IFM
"ಈಗಲೂ ಅಷ್ಟೆ ಹೊಸ ಚಿತ್ರ 'ಆ ದೇಖೇ ಝರಾ' ತುಂಬ ಡಿಫರೆಂಟ್ ಚಿತ್ರಕಥೆಯುಳ್ಳದ್ದು. ಅದ್ಕಕಾಗಿ ನನಗೆ ತುಂಬ ಸಂತೋಷವಿದೆ. ಜತೆಗೆ ಆ ಚಿತ್ರದಲ್ಲಿ ನಿರ್ದೇಶಕರಿಂದ ಹಿಡಿದು ನಾಯಕ ನಟರವರೆಗೆ ಎಲ್ಲರೂ ಹೊಸಬರು. ನನಗೆ ಯಾವಾಗಲೂ ಬೇರೆ ಬೇರೆ ನಟರ ಜತೆ ನಟಿಸಲು ಇಷ್ಟ. 'ಆ ದೇಖೇ ಝರಾ'ದ ನೀಲ್ ನಿತಿನ್ ಜತೆಗೂ ನಟಿಸಲು ನನಗೆ ತುಂಬ ಇಷ್ಟ" ಎನ್ನುತ್ತಾ ನಗುತ್ತಾರೆ ಬಿಪ್ಸ್.

"ಪ್ರಾಮಾಣಿಕವಾಗಿ ಹೇಳೋದಾದರೆ, ನಾನು ನನ್ನ ಕೆರಿಯರ್ ಬಗ್ಗೆ ಹೆಚ್ಚು ಚಿಂತಿಸಿಲ್ಲ. ಇಷ್ಟವಾದುದನ್ನು ಮಾಡುತ್ತಾ ಹೋಗುತ್ತೇನೆ. ಈಗ ಇದೇ ನನ್ನ ಪ್ರೊಫೆಷನ್ ಆಗಿದೆ. ಕೆಲಸವನ್ನು ಇಷ್ಟಪಡುತ್ತೇನೆ. ಅದೇ ದಾರಿ ತೋರಿಸಿದೆ. ಅದು ತೋರಿಸಿದ ದಾರಿಯಲ್ಲಿ ನಾನು ಹೋಗುತ್ತಿದ್ದೇನೆ ಅಷ್ಟೆ." ಎಂದು ಮೆಚ್ಯೂರ್ಡ್ ಆಗಿ ಮಾತನಾಡುತ್ತಾರೆ.

"ಮೊದಲ ಸಿನಿಮಾ 'ಅಜ್‌ನಬಿ' ಹಾಗೂ ನಂತರದ 'ರಾಝ್'ನ್ನು ಜನರು ಇಷ್ಟಪಟ್ಟರು. ಆದರೆ 'ಜಿಸ್ಮ್' ಸಿನಿಮ ಮಾಡುವಾಗ ಹಲವರು ಆ ರೋಲ್ ಮಾಡಬೇಡ ಎಂದರು. ಆದರೆ ನನಗೆ ಮಾಡಬೇಕೆನಸಿತು. ಮಾಡಿದೆ. ನಂತರ 'ನೋ ಎಂಟ್ರಿ', 'ಕಾರ್ಪೋರೇಟ್', 'ಧೂಮ್ 2', 'ರೇಸ್', 'ಬಚ್ನಾ ಎ ಹಸಿನೋ'... ಪ್ರತಿಯೊಂದು ಸಿನಿಮಾವೂ ನಾನು ಇಷ್ಟಪಟ್ಟು ಮಾಡಿದ್ದು. ಅವೆಲ್ಲವೂ ನನ್ನ ಜೀವನದ ಅತ್ಯಂತ ಖುಷಿಯ ಕ್ಷಣಗಳು. ಅವೆಲ್ಲವನ್ನೂ ನಾನು ತುಂಬ ಎಂಜಾಯ್ ಮಾಡಿದ್ದೇನೆ. ಸಣ್ಣ ಪಾತ್ರವಾದರೂ ಸರಿ. ನನಗೆ ಇಷ್ಟವಾದರೆ ನಾನು ಮಾಡುತ್ತೇನೆ. ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡರೂ ಜನ ನನ್ನನ್ನು ಇಷ್ಟಪಟ್ಟಿದ್ದಾರೆ. ಅದಕ್ಕೆ ನಾನು ಧನ್ಯವಾದ ಹೇಳಲೇಬೇಕು."

ಇಷ್ಟೆಲ್ಲ ಹೇಳಿದರೂ ಬಿಪಾಶಾ ತನ್ನ ಇನಿಯ ಜಾನ್ ಬಗ್ಗೆ ತುಟಿಪಿಟಿಕ್ಕೆನ್ನುವುದಿಲ್ಲ. ಸರಿ, ಮದುವೆ- ಗಿದುವೆ ಏನಾದರೂ ಸುದ್ದಿಯಿದೆಯೇ ಎಂದಾಗ ಈ ಪ್ರಶ್ನೆ ನಿರೀಕ್ಷಿತವೆಂಬಂತೆ ಸೆಕ್ಸೀ ಸುಂದರಿ ಬಿಪಾಶಾ ಒಂದು ರೊಮ್ಯಾಂಟಿಕ್ ಲುಕ್ ಕೊಟ್ಟು ಜಾನ್ ಬಗ್ಗೆ ಪಟಪಟನೆ ಮಾತಾಡುತ್ತಾಳೆ.

ಎಂಟು ವರ್ಷಗಳಿಂದ ಜಾನ್ ಅಬ್ರಹಾಂ ಜತೆಗೆ ಉತ್ತಮ ಸಂಬಂಧ ಹೊಂದಿದ್ದೇನೆ. ನನ್ನ ಲವ್ ಎಂಟು ವರ್ಷಗಳ ದೀರ್ಘ ಇತಿಹಾಸ ಹೊಂದಿದೆ. ನಾವಿಬ್ಬರೂ ನಮ್ಮನ್ನು ತುಂಬ ಅರ್ಥೈಸಿಕೊಂಡಿದ್ದೇವೆ. ಜಾನ್ ಜತೆಗಿನ ಪ್ರತಿಯೊಂದು ಕ್ಷಣಗಳನ್ನು ನಾನು ಅಮೃತದಂತೆ ಸವಿಯುತ್ತೇನೆ. ನಾನೀಗ ಏಕಾಂಗಿಯಾಗಿರಬಹುದು. ಆದರೆ, ನನ್ನ ಮನಸ್ಸಿನಲ್ಲಿ ಯಾವಾಗಲೂ ಜಾನ್ ಇರುತ್ತಾನೆ. ಮದುವೆಯಾದ ಮೇಲೆ... ಅಂತ ಅರ್ಧಕ್ಕೇ ನಿಲ್ಲಿಸುತ್ತಾಳೆ. ಆದರೆ ಮದುವೆ ಯಾವಾಗ ಅಂದರೆ ಸುತಾರಾಂ ಬಾಯಿ ಬಿಚ್ಚುವುದಿಲ್ಲ. ಎಲ್ಲ ಬಾಲಿವುಡ್ ನಟೀಮಣಿಯರಂತೆ, ಈಗ ಸದ್ಯಕ್ಕೆ ಪುರುಸೊತ್ತಿಲ್ಲ ಎನ್ನಬೇಕೇ!
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಿಪಾಶಾ ಬಸು, ಜಾನ್ ಅಬ್ರಹಾಂ, ಆ ದೇಖೇ ಝರಾ, ಅಜ್ನಬಿ