ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಅಪ್ಪನಿಗೆ ನಾನು ನಟನಾಗಲು ಇಷ್ಟವಿರಲಿಲ್ಲ- ಅಮೀರ್ ಅಂತರಂಗ
ಸಂದರ್ಶನ
Feedback Print Bookmark and Share
 
IFM
ಬಾಲಿವುಡ್ ಖಾನ್‌ತ್ರಯರೆಂದೇ ಬಿಂಬಿಸಲ್ಪಟ್ಟವರಲ್ಲಿ ಒಬ್ಬನಾದ ಅಮೀರ್ ಖಾನ್ ಎಂಬ ಚಾಕೋಲೇಟ್ ಸುಂದರಾಂಗನಿಗೀಗ 44ರ ಹರೆಯ. ಈಗಲೂ ಚಿರಯವ್ವನಿಗನಂತೆ ಕಾಣುತ್ತಿರುವ ಅಮೀರ್ ಖಾನ್ ಪ್ರತಿಭಾವಂತ. ಬಾಲಿವುಡ್‌ನ ದಿ ಮೋಸ್ಟ್ ಪರ್‌ಫೆಕ್ಷನಿಸ್ಟ್ ಎಂದೇ ಕರೆಯಲ್ಪಡುವ ಅಮೀರ್ ಖಾನ್ ತನ್ನ ಅಂತರಂಗ ಬಿಚ್ಚಿದ್ದು ಹೀಗೆ...

ತನ್ನ ಘಜ್ನಿ ಚಿತ್ರದ ಬಗ್ಗೆ- ''ನಾನು ನನ್ನ ಚಿತ್ರ ಚೆನ್ನಾಗಿದೆಯೆಂದು ಅಂದುಕೊಳ್ಳಬಹುದು. ಆದರೆ ನಿಜವಾಗಿ ಚಿತ್ರದ ಯಶಸ್ಸು ತಿಳಿಯುವುದು ಪ್ರೇಕ್ಷಕರರೊಂದಿಗೆ ಥಿಯೇಟರ್‌ನಲ್ಲಿ ಕುಳಿತಾಗ. ಬಹಳ ಸಮಯದ ನಂತರ ಮಾಸ್ ಪ್ರೇಕ್ಷಕ ಬಳಗಕ್ಕೆ ಚಿತ್ರ ನೀಡಿದ್ದೇನೆ. ನನಗನಿಸುವ ಹಾಗೆ ನಾನು ಘಜ್ನಿ ಬಗ್ಗೆ ಸಂತೋಷವಾಗಿದ್ದೇನೆ.''

'ಘಜ್ನಿಯ ಸಕ್ಸಸ್‌ನಿಂದ ಶಾರುಖ್‌ನ ಕಿಂಗ್ ಖಾನ್ ಸ್ಥಾನಕ್ಕೆ ಅಮಿರ್ ಭಡ್ತಿ ಪಡೆದಿದ್ದಾನೆಯೇ' ಎಂಬ ಬಗ್ಗೆ- ''ನಾನು ನನಗೆ ಖುಷಿ ಕಂಡ ಕೆಲಸ ಮಾಡುತ್ತೇನೆ. ಅದರಲ್ಲಿ ನನ್ನ ಸಂತೋಷ ಕಾಣುತ್ತೇನೆ. ನನಗೆ ಶಾರುಖ್‌ ಖಾನ್ ಜಾಗದಲ್ಲಿ ಕೂರುವ ಬಯಕೆಯೂ ಇಲ್ಲ, ಉದ್ದೇಶವೂ ಇಲ್ಲ. ಮೊದಲೇ ನಾನು ಹೇಳಿದಂತೆ, ಕಿಂಗ್ ಸ್ಥಾನದಲ್ಲಿ ಆತನೇನೂ ಕೂರಲಿಲ್ಲ. ಕೂರುವ ಅರ್ಹತೆಯೂ ಆತನಿಗಿಲ್ಲ. ಆತನಿಗಷ್ಟೇ ಅಲ್ಲ, ಅಮಿತಾಬ್ ಬಚ್ಚನ್‌ ಬಿಟ್ಟರೆ ಬಾಲಿವುಡ್‌‌‌ನ ಕಿಂಗ್ ಬೇರೆ ಯಾರೂ ಅಲ್ಲ. ನನಗೆ ಅಮಿತಾಬ್ ಕೆಲಸಗಳು ಇಷ್ಟ. ಅವರೊಬ್ಬ ಅದ್ಭುತ ನಟ. ಅಂತಹ ಇನ್ನೊಬ್ಬ ನಟನನ್ನು ನಾವು ಕಾಣಲು ಸಾಧ್ಯವಿಲ್ಲ. ನನ್ನ ಪಾಲಿಗೆ ಅವರೇ ನಿಜವಾದ ಕಿಂಗ್.''

ಮೊದಲ ನಿರ್ದೇಶನದ ಬಗ್ಗೆ- ''ಮೊದಲ ಚಿತ್ರ 'ತಾರೇ ಜಮೀನ್ ಪರ್' ಚಿತ್ರ ಮಾಡುವಾಗ, ನಿಜಕ್ಕೂ ಪ್ರಾಮಾಣಿಕವಾಗಿ ಹೇಳುವುದಾದರೆ ನನಗೆ ಯೋಚಿಸುವುದಕ್ಕೂ ಸಮಯವಿರಲಿಲ್ಲ. ಸುಮ್ಮನೆ ಮಾಡುತ್ತಾ ಹೋದೆ. ನಾನು ಒಂದು ಚಿತ್ರ ನಿರ್ದೇಶಿಸಬೇಕೆಂದು ಹಲವು ಸಮಯದಿಂದ ಯೋಚಿಸಿದ್ದರೂ ಆಗಿರಲಿಲ್ಲ. ಬಹುಶಃ ಹಾಗೇ ಕೂರುತ್ತಿದ್ದರೆ, ನನಗೆ ಇನ್ನು ಹತ್ತು ವರ್ಷಗಳಾದರೂ ಚಿತ್ರ ನಿರ್ದೇಶಿಸಲು ಸಮಯವಾಗುತ್ತಿರಲಿಲ್ಲವೇನೋ. ಹಿಂತಿರುಗಿ ನೋಡದೆ ನಿರ್ದೇಶಿಸುತ್ತಾ ಹೋದೆ. ಆದರೆ ನನಗಿರುವ ಸಾಮರ್ಥ್ಯಕ್ಕೆ ತಕ್ಕನಾಗಿ ಮಾಡಲಿಲ್ಲ ಅಂತ ನನಗೀಗಲೂ ಅನಿಸುತ್ತದೆ. ಬಹುಶಃ ಅದಕ್ಕಿನ್ನೂ 10 ವರ್ಷ ಕಾಯಬೇಕೇನೋ. ಏನೇ ಇರಲಿ, 'ತಾರೇ..' ಚಿತ್ರದ ಯಶಸ್ಸಿನ ಬಗ್ಗೆ ಹಾಗೂ ಅದು ಜನರ ಮೇಲೆ ಪರಿಣಾಮ ಬೀರಿದ ಬಗ್ಗೆ ತುಂಬ ಖುಷಿಯಿದೆ.''

'ಸ್ಲಂ ಡಾಗ್' ಬಗ್ಗೆ- ''ನಾನು ಭಾರತೀಯರು ಇಂಗ್ಲೀಷ್ ಮಾತನಾಡುವುದನ್ನು ನೋಡುವುದಿಲ್ಲ. ಸ್ಲಂಡಾಗ್ ಮಕ್ಕಳು ಇಂಗ್ಲೀಷ್‌ನಲ್ಲಿ ಮಾತನಾಡುವುದು..! ಇದು ನನಗೆ ತುಂಬ ವಿಚಿತ್ರವೆನಿಸಿತು. ಹೀಗಾಗಿ ಸ್ಲಂಡಾಗ್ ನನಗೆ ಅಷ್ಟು ಪರಿಣಾಮ ಬೀರಲಿಲ್ಲ.''

IFM
ಬಾಲ್ಯದ ಬಗ್ಗೆ- ''ನಾನು ಬಾಲ್ಯದಲ್ಲಿ ಚಿಕ್ಕ ಚೊಕ್ಕ ಕುಟುಂಬ. ನಿಜವಾಗಿ ನೋಡಿದರೆ, ನನ್ನ ಅಪ್ಪ- ಅಮ್ಮನಿಗೆ ನಾನು ಚಿತ್ರರಂಗಕ್ಕೆ ಬರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ನನ್ನ ಅಪ್ಪ, ಮಾವ ಇಬ್ಬರೂ ಚಿತ್ರ ನಿರ್ಮಾಪಕರು. ಮಾವ ನಿರ್ದೇಶಕರು ಕೂಡಾ. ಆದರೆ ನಾನು ಇನ್ನೊಬ್ಬರ ಮಾತು ಕೇಳುವುದು ಸ್ವಲ್ಪ ಕಡಿಮೆ. ನನಗೆ ಮಾಡಬೇಕನಿಸಿದ್ದನ್ನು ಮಾಡುತ್ತೇನೆ. ನನ್ನ ಅಪ್ಪನ ಪಾಲಿಗೆ, ನಾನು ಬೇರೆ ಯಾವ ದಾರಿಯೂ ಕಾಣದೆ ವಿಧಿಯಿಲ್ಲದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಂತೆ. ಬಹುಶಃ ಅವರಿಗೆ ನನ್ನ ಮೇಲೆ ತುಂಬ ಕಾಳಜಿಯಿತ್ತು. ಪ್ರತಿಯೊಬ್ಬ ಅಪ್ಪ- ಅಮ್ಮನಿಗೂ ತಮ್ಮ ಮಕ್ಕಳ ಬಗ್ಗೆ ಕಾಳಜಿಯಿರುತ್ತದೆ. ಅವರಿಗೆ ಚಿತ್ರರಂಗ ಬಗ್ಗೆ ಗೊತ್ತಿದ್ದರಿಂದ ಅವರು ನನ್ನನ್ನು ತಡೆದರು. ಚಿತ್ರರಂಗ ಎಂತಹ ಪ್ರೊಫೆಷನ್ ಅಂದರೆ ಇಲ್ಲಿ ಗೆದ್ದವ ಆ ದಿನ ಮೇಲೇಳುತ್ತಾನೆ. ಆದರೆ, ಮಾರನೇ ದಿನವೇ ಆತ ಬಿದ್ದರೆ ಯಾರೂ ಆತನೆಡೆಗೆ ನೋಡುವುದಿಲ್ಲ. ತುಂಬ ವಿಚಿತ್ರ ಹಾಗೂ ಕಷ್ಟ. ಹೀಗಾಗಿಯೇ ಅಪ್ಪನಿಗೆ ನನ್ನ ಬಗ್ಗೆ ಅಂತಹ ಕಾಳಜಿಯಿತ್ತು. ಆದರೆ ನಾನು ನಿರ್ಧಾರ ಹಿಂತೆಗೆಯಲಿಲ್ಲ, ಅಷ್ಟೆ.''

80- 90ರ ದಶಕದ ನೆನಪು- ''ಆಗೆಲ್ಲ (1980-90) ನನಗೆ ಸತ್ತು ಹೋಗೋಣ ಅನಿಸುತ್ತಿತ್ತು. ತುಂಬ ಮುಜುಗರವಾಗುತ್ತಿತ್ತು. ಒಂದು ಚಿತ್ರ ಮಾಡಿ ಮುಗಿಸಿದ ತಕ್ಷಣ, ಛೇ ಇದು ಚೆನ್ನಾಗಿರಲಿಲ್ಲ. ನಾನು ಇದರಲ್ಲಿ ನಟಿಸಬಾರಿತ್ತು ಅಂತೆಲ್ಲ ಅನಿಸುತ್ತಿತ್ತು. ನಾನು ಹೀಗೆಯೇ ನಟನಾಗಿ ಬೆಳೆದೆ. ಈಗ ನಾನಿದನ್ನು ಮಾಡುತ್ತಿದ್ದರೆ ಇನ್ನೂ ಚೆನ್ನಾಗಿ ಮಾಡುತ್ತಿದ್ದೆನಲ್ಲ ಅಂತೆಲ್ಲ ಪಶ್ಚಾತಾಪಪಡುತ್ತಿದ್ದೆ.''

1965ರಲ್ಲಿ ಜನಿಸಿದ ಅಮೀರ್ ಖಾನ್ ತನ್ನ ಮಾವನ ಚಿತ್ರ 'ಯಾದೋಂಕಿ ಬರ್ಸಾತ್' ಚಿತ್ರದ ಮೂಲಕ ಬಾಲನಟನಾಗಿ 1973ರಲ್ಲಿ ಬಾಲಿವುಡ್ ಪ್ರವೇಶಿಸಿದರು. ನಂತರ 'ಮದ್‌ಹೋಶ್' ಚಿತ್ರ. ನಂತರ 'ಹೋಲಿ'. ತನ್ನ ಮಾವನ ಮಗನ ಚಿತ್ರ 'ಖಯಾಮತ್ ಸೇ ಖಯಾಮತ್ ತಕ್' (1988) ಚಿತ್ರದಲ್ಲಿ ಈ ಚಾಕೋಲೇಟ್ ಹೀರೋ ನಾಯಕನಟನಾಗಿ ನಟಿಸಿ ಭಾರತೀಯರ ಮನೆಮನದಲ್ಲಿ ಸ್ಥಾನ ಪಡೆದ. ನಂತರ ಹಿಂತಿರುಗಿ ನೋಡಲಿಲ್ಲ. 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಅಮಿರ್ ಖಾನ್ ಮಾಸ್ ಪ್ರೇಕ್ಷಕರಷ್ಟೇ ಅಲ್ಲ, ಉತ್ತಮ ಚಿತ್ರಗಳನ್ನು ತನ್ನದೇ ಅಮೀರ್ ಖಾನ್ ಪ್ರೊಡಕ್ಷನ್ಸ್‌ನಲ್ಲಿ ನಿರ್ಮಿಸುತ್ತಾರೆ.

ತಮ್ಮ 22ರ ಹರೆಯದಲ್ಲೇ 'ಖಯಾಮತ್ ಸೇ ಖಯಾಮತ್ ತಕ್' ಚಿತ್ರದ ಸಂದರ್ಭದಲ್ಲೇ ಅಮೀರ್ ಖಾನ್ ರೀನಾ ದತ್ತಾರನ್ನು ಮದುವೆಯಾದರು, ಆದರೆ ಇದು ಹೆತ್ತವರಿಗೆ ಗೊತ್ತಿರಲಿಲ್ಲ. ರೀನಾ ಮುಸ್ಲಿಂ ಅಲ್ಲ ಎಂಬ ಕಾರಣಕ್ಕೆ ಮನೆಯವರ ವಿರೋಧವಿತ್ತು. 'ಖಯಾಮತ್..' ಚಿತ್ರದ ಖ್ಯಾತ ಹಾಡು 'ಪಾಪಾ ಕೆಹೆತೇ ಹೇ' ಹಾಡಿನಲ್ಲಿ ಹಾಗೆ ಬಂದು ಹೋಗಿದ್ದಳು ರೀನಾ. ಹೀಗೆ ಅಂಕುರಿಸಿದ್ದ ಪ್ರೇಮ ಮದುವೆಗೆ ಕಾರಣವಾಯ್ತು. 15 ವರ್ಷದ ನಂತರ ಎರಡು ಮಕ್ಕಳ ತಂದೆಯಾದ ಮೇಲೆ ಲಗಾನ್ ಚಿತ್ರದ ಸಮಯದಲ್ಲಿ 2002ರಲ್ಲಿ ವಿಚ್ಛೇದನವಾಯ್ತು. ಲಗಾನ್ ಚಿತ್ರದ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದ ಕಿರಣ್ ರಾವ್ ಜತೆಗೆ ಅಮಿರ್ 2005ರಲ್ಲಿ ಎರಡನೇ ಮದುವೆಯಾದರು.

'ಗುಲಾಂ'ನ ಖ್ಯಾತ ಹಾಡು 'ಆತೀ ಕ್ಯಾ ಖಂಡಾಲ', 'ಮೇಲಾ'ದ 'ದೇಖೋ 2000 ಝಮಾನಾ ಆ ಗಯಾ', 'ಮಂಗಲ್ ಪಾಂಡೆ'ಯ 'ಹೋಲಿ ರೇ', 'ರಂಗ್ ದೇ ಬಸಂತಿ'ಯ 'ಲಲ್ಕಾರ್', 'ಫನಾ'ದ 'ಚಂದಾ ಚಮ್ಕೇ', 'ಮೇರೇ ಹಾಥ್ ಮೇ', 'ತಾರೇ ಝಮೀನ್ ಪರ್‌'ನ 'ಬಂ ಬಂ ಬೋಲೇ' ಹಾಡುಗಳನ್ನು ಹಾಡಿದ್ದು ಸ್ವತಃ ಅಮೀರ್ ಖಾನ್. ಹಲವು ಪ್ರಶಸ್ತಿಗಳನ್ನು ಪಡೆದಿರುವ ಅಮೀರ್ ಖಾನ್ ನಟನೆಯ ಲಗಾನ್ ಆಸ್ಕರ್‌ಗೆ ನಾಮನಿರ್ದೇಶನಗೊಂಡಿತ್ತು. ಆದರೆ ಆಸ್ಕರ್ ಎಟುಕಿರಲಿಲ್ಲ.

ಇಂತಿಪ್ಪ ಪರ್ಫೆಕ್ಷನಿಸ್ಟ್ ಅಮೀರ್‌ಖಾನ್ ಮೊನ್ನೆಯಷ್ಟೆ ತನ್ನ 44ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈಗ 'ತ್ರೀ ಈಡಿಯಟ್ಸ್' ಚಿತ್ರ ಮಾಡುತ್ತಿದ್ದು, ಅದಕ್ಕಾಗಿ ಅಮೀರ್ ತೂಕ ಇಳಿಸಿಕೊಳ್ಳುತ್ತಿದ್ದಾರೆ. ಎಷ್ಟರಮಟ್ಟಿಗೆ ತೂಕ ಇಳಿಸಲು ಪ್ರಯತ್ನಿಸುತ್ತಿದ್ದಾರೆಂದರೆ, ಸ್ವತಃ ಅವರ ಬರ್ತ್‌ಡೇ ಕೇಕ್ ಸಹ ಅವರು ಮೊನ್ನೆ ತಿನ್ನಲಿಲ್ಲವಂತೆ!
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೀರ್ ಖಾನ್, ತಾರೇ ಜಮೀನ್ ಪರ್, ಕಿರಣ್ ರಾವ್, ಘಜ್ನಿ