ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಕಿಂಗ್ ಖಾನ್ ಹೆಸರು ಶಾರುಖ್ ಅಲ್ಲ, ಅಭಿನವ್!
ಸಂದರ್ಶನ
Feedback Print Bookmark and Share
 
IFM
ಬಾಲಿವುಡ್ ಬಾದ್‌ಶಾಹ್, ಕಿಂಗ್ ಎಂದೇ ಪ್ರಸಿದ್ಧಿಯ ಉತ್ತುಂಗಕ್ಕೇರಿದ ಶಾರುಖ್ ಖಾನ್ ಹೆಸರು 'ಅಭಿನವ್' ಅಂತೆ. ಹೀಗಂತ ಹೇಳಿದ್ದು ಆತನ ಖಾಸಾ ಪತ್ನಿ, ಮುದ್ದಿನ ಮಡದಿ ಗೌರಿ ಖಾನ್! ಮುಸ್ಲಿ ಒಬ್ಬನನ್ನು ಹಿಂದೂವಾಗಿರುವ ತಾನು ಮದುವೆಯಾಗಲು ಪಟ್ಟ ಕಷ್ಟದ ಜತೆಗೆ, ಗೌರಿಯ ಅಪ್ಪ- ಅಮ್ಮನ ಪಾಲಿಗೆ ಕಿಂಗ್ ಖಾನ್ 'ಅಭಿನವ್' ಆಗಬೇಕಾಯಿತು. ಕೇವಲ ಇಷ್ಟೇ ಅಲ್ಲ. ತಮ್ಮ ಹಾಗೂ ಶಾರುಖ್ ಪ್ರೇಮ ಪ್ರೇಮ ಅಂಕುರಿಸಿದ ಹಾಗೂ ಮುಂಬೈಯ ಕಷ್ಟದ ದಿನಗಳನ್ನು, ಅಸಂಖ್ಯಾತ ಚಿತ್ರಪ್ರೇಮಿಗಳ ಮನಸೂರೆಗೊಂಡು ಅವರ ರಾಜನಾದ ಕಿಂಗ್ ಖಾನ್ ಶಾರುಖ್‌ನ 'ಪಟ್ಟದರಸಿ' ಗೌರಿ ಖಾನ್ ತಮ್ಮ ಹಳೆಯ ಇಂಟರೆಸ್ಟಿಂಗ್ ಕಥಾನಕವನ್ನು ತೆರೆದಿಟ್ಟಿದ್ದಾರೆ.

ಗೌರಿ ಖಾನ್ ಒಬ್ಬ ಒಳಾಂಗಣ ವಿನ್ಯಾಸಕಿ. ಜತೆಗೆ ಸದ್ಗೃಹಿಣಿ, ಇಬ್ಬರು ಮಕ್ಕಳ ಮುದ್ದಿನ ಅಮ್ಮ. ಅಷ್ಟೇ ಅಲ್ಲ, ಚಿತ್ರ ನಿರ್ಮಾಪಕಿ ಕೂಡಾ. ಬಾಲಿವುಡ್‌ನ ಬಹುತೇಕ ನಟ-ನಟಿಯರು ತಮ್ಮ ಚಿತ್ರರಂಗದ ಜೀವನದೊಂದಿಗೆ ಖಾಸಗಿ ಜೀವನವನ್ನು ಸುಗಮವಾಗಿ ನಡೆಸಲು ಕಷ್ಟವಾಗಿ, ವಿಚ್ಛೇದನಕ್ಕೋ, ಮೂರ್ನಾಲ್ಕು ಮದುವೆಯಿಂದಲೋ, ಅಥವಾ ಇನ್ನಾವುದೋ ವಿವಾಹ ಬಾಹಿರ ಸಂಬಂಧಗಳಿಂದಲೋ ಗಾಸಿಪ್ಪಿಗೆ ತುತ್ತಾಗುತ್ತಲೇ ಇದ್ದರೂ, ಶಾರುಖ್- ಗೌರಿಯರದು ಸುಖೀ ದಾಂಪತ್ಯ.

ಶಾರುಖ್ ಬೆಳೆಯಲು ಆತನ ಬೆನ್ನೆಲುಬಾಗಿ ನಿಂತಿರುವುದು ಆತನ ಪತ್ನಿ ಗೌರಿ ಖಾನ್ ಎಂಬುದು ಜಗಜ್ಜಾಹೀರು. ಹಾಗಾದರೆ ಶಾರುಖ್ ಯಶಸ್ಸಿನ ಹಿಂದಿರುವ ಮಹಿಳೆ ಗೌರಿಯೇ ಎಂದು ಪ್ರಶ್ನಿಸಿದರೆ ಆಕೆ ''ಖಂಡಿತ, ಅಲ್ಲಪ್ಪಾ. ನಾನು ಆತನ ಬೆನ್ನೆಲುಬಲ್ಲ. ಆತನೇ ಕಷ್ಟಪಟ್ಟು ಮೇಲೆ ಬಂದ. ಶಾರುಖ್ ಜತೆಗೆ ದೆಹಲಿಯಿಂದ ಬಾಂಬೆಗೆ ಬರಲು ನನಗೆ ಇಷ್ಟವೇ ಇರಲಿಲ್ಲ. ಶಾರುಖ್ ಸ್ಟಾರ್ ಆದಾಗಲೂ ಮೊದಲೆಲ್ಲ ನನಗೆ ನಂಬಲು ಆಗುತ್ತಲೇ ಇರಲಿಲ್ಲ. ಇದು ನನ್ನ ಪಾಲಿಗೆ ದೊಡ್ಡ ಶಾಕ್ ಆಗಿತ್ತು. ಆದರೆ, ಈ ಮಟ್ಟಕ್ಕೆ ಮೇಲೆ ಬರಲು ಶಾರುಖ್ ಪಾತ್ರ ಬಹಳ ದೊಡ್ಡದು. ಅವನು ತುಂಬ ಹಾರ್ಡ್ ವರ್ಕರ್.''

''ಆಗಿನ ದಿನಗಳೂ ತುಂಬ ಕಷ್ಟದ್ದಾಗಿತ್ತು. ಶಾರುಖ್‌ನ ಫಿಲ್ಮ್ ಉತ್ತಮವಾಗಿ ಹೊರಬರಲು ನನಗೆ ಇಷ್ಟವೇ ಇರಲಿಲ್ಲ. ಆತನ ಚಿತ್ರ ಫ್ಲಾಪ್ ಆದರೆ ಚೆನ್ನಾಗಿತ್ತು, ಅಂತ ನಾನು ಎಷ್ಟೋ ಬಾರಿ ಯೋಚಿಸಿದ್ದೆ. ಫ್ಲಾಪ್ ಆದರೆ ಮತ್ತೆ ದೆಹಲಿಗೆ ಹೋಗಬಹುದಲ್ಲ ಅನ್ನೋದೇ ಇದಕ್ಕೆ ಕಾರಣ. ಯಾಕೆಂದರೆ ಆಗ ನನಗೆ ಬಾಂಬೆ ತೀರಾ ಹೊಸದು. ಜತೆಗೆ ನನಗಾಗ ಕೇವಲ 21 ವಯಸ್ಸು. ಅಷ್ಟು ಸಣ್ಣ ವಯಸ್ಸಿಗೆ ಹೊಸ ಜಗತ್ತನ್ನು ನೋಡುತ್ತಿದ್ದೆ. ಹೀಗಾಗಿ ಫ್ಲಾಪ್ ಆದರೆ ಮತ್ತೆ ದೆಹಲಿ ವಾಪಾಸಾಗೋಣ ಶಾರುಖ್ ಜತೆಗೆ ಅಂತಲೇ ಯೋಚಿಸುತ್ತಿದ್ದೆ.''

''ಆದರೆ, ಶಾರುಖ್ ತುಂಬ ಮಹತ್ವಾಕಾಂಕ್ಷಿ. ಬಾಲ್ಯದಿಂದಲೂ ಹಾಗೆಯೇ ಆತ. ಸ್ಕೂಲ್, ಕಾಲೇಜು ದಿನಗಳಲ್ಲೂ ಎಲ್ಲದರಲ್ಲೂ ಮುಂದಿದ್ದ ಶಾರುಖ್ ತನ್ನ ಮಹತ್ವಾಕಾಂಕ್ಷೆಗಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ. ಆತ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಫುಟ್ಬಾಲ್, ಹಾಕಿ, ನಾಟಕ ಹೀಗೆ ಎಲ್ಲ ವಲಯದಲ್ಲೂ ಕ್ರಿಯಾಶೀಲ. ಜತೆಗೆ ಆತ ಆಗ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿತ್ತು. ಈಗಲೂ ಹಾಗೆಯೇ. ನಾನು ಅವನನ್ನು ಗಂಡನಾಗಿ ಪಡೆದುದಕ್ಕೆ ಖುಷಿಯಿದೆ. ನಾನು ಒಬ್ಬ ಒಳ್ಳೆಯ ಹಾಗೂ ಸರಿಯಾದ ವ್ಯಕ್ತಿಯನ್ನೇ ಜೀವ ಸಂಗಾತಿಯಾಗಿ ಆಯ್ಕೆ ಮಾಡಿದ್ದೇನೆ ಎಂದು ನನಗನಿಸುತ್ತಿದೆ.''

''ಹದಿಹರೆಯದಲ್ಲೇ ನಾನು ಶಾರುಖ್ ಭೇಟಿಯಾಗಿದ್ದು. ವಿದ್ಯಾರ್ಥಿ ಜೀವನದಲ್ಲೇ ನನಗೆ ಶಾರುಖ್‌ಗೆ ಲವ್ ಇತ್ತು. ಆ ದಿನಗಳಲ್ಲಿ ನಾನು ಇಷ್ಟಪಟ್ಟ ಏಕೈಕ ಪುರುಷ ಶಾರುಖ್. ಅದೇ ಈಗಲೂ'' ಎನ್ನುತ್ತಾರೆ ಗೌರಿ.

IFM
ಹಳೆಯ ದಿನಗಳನ್ನು ನೆನಪಿಸುವ ಗೌರಿ, ''ಹಿಂದೆ ಶಾರುಖ್‌ನನ್ನು ಮದುವೆಯಾಗಲು ತುಂಬ ಕಷ್ಟಪಟ್ಟಿದ್ದೆ. ನನ್ನ ಮನೆಯಲ್ಲಿ ಅಪ್ಪ ಅಮ್ಮನಿಗೆ ಶಾರುಖ್‌ನನ್ನು ಮದುವೆಯಾಗಲು ಇಷ್ಟವೇ ಇರಲಿಲ್ಲ. ಪ್ರಮುಖವಾಗಿ ನಮ್ಮಿಬ್ಬರದೂ ಆಗ ಸಣ್ಣ ವಯಸ್ಸು. ಜತೆಗೆ ಆ ಸಣ್ಣ ವಯಸ್ಸಿನಲ್ಲಿ ಸಿನಿಮಾ ರಂಗದಲ್ಲಿ ನಟನಾಗಲು ಬಯಸುವ ವ್ಯಕ್ತಿಯನ್ನು ನಾನು ಇಷ್ಟಪಟ್ಟಿದ್ದೆ. ಜತೆಗೆ ಆತ ನಮ್ಮ ಧರ್ಮಕ್ಕೆ ಸೇರಿದವನಾಗಿರಲಿಲ್ಲ. ನಾನು ಹಿಂದೂ- ಆತ ಮುಸ್ಲಿಂ. ಇವೆಲ್ಲ ಕಾರಣಗಳಿಗೆ ನನ್ನ ಅಪ್ಪ- ಅಮ್ಮ, ನಾನು ಶಾರುಖ್ ಮದುವೆಯಾದರೆ ಮಾನಸಿಕವಾಗಿ ಸಾಕಷ್ಟು ಕಷ್ಟ ಅನುಭವಿಸಬೇಕಾಗುತ್ತದೆ, ಜತೆಗೆ ಅಷ್ಟೊಂದು ಮಾನಸಿಕವಾಗಿ ಬೆಳೆದಿಲ್ಲ ಎಂದು ತಿಳಿದಿದ್ದರು. ಹೀಗಾಗಿ ಅವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ನನ್ನ ಏಕೈಕ ಆಯ್ಕೆ ಶಾರುಖ್ ಆಗಿತ್ತು. ಹೀಗಾಗಿ ನನ್ನ ಕುಟುಂಬದ ಜನರಿಗೆ ಶಾರುಖ್ ಮುಸ್ಲಿಂ ಆಗಿರದೆ ಹಿಂದುವಾಗಲಿ ಎಂದು ಆತನ ಹೆಸರನ್ನು 'ಅಭಿನವ್' ಎಂದು ಬದಲಾಯಿಸಿದೆವು. ಆದರೆ ಅದು ತುಂಬ ಬಾಲಿಶ ನಡತೆ ಹಾಗೂ ಸಿಲ್ಲಿ ಅಂತ ನನಗೆ ಗೊತ್ತಿದೆ'' ಎನ್ನುತ್ತಾರೆ ಗೌರಿ.

''ದೆಹಲಿಯಲ್ಲಿದ್ದ ನನಗೆ ಎಲ್ಲವನ್ನು ತೊರೆದು ಬಾಂಬೆಗೆ ಬರಲು ತುಂಬ ಕಷ್ಟವಾಯಿತು. ಆರಂಭದ ದಿನಗಳಲ್ಲಿ ಬಾಂಬೆ ಜೀವನ ನನಗೆ ಬಹಳ ಕಷ್ಟವೆನಿಸಿತು. ಅದೊಂದು ಭಯಂಕರ ಅನುಭವ. ಆದರೂ ನಾನು ಶಾರುಖ್ ಜತೆಗೆ ಎಲ್ಲವನ್ನೂ ಎಂಜಾಯ್ ಮಾಡುತ್ತಿದ್ದೆ. ಹೊಸ ಮನೆ, ಹೊಸ ಪ್ರಪಂಚ, ಹೊಸ ಜೀವನ, ಜತೆಗೆ ಹೊಸ ಸ್ಥಳ. ಆದರೆ, ನಾವಿಬ್ಬರೂ ಆ ದಿನಗಳಲ್ಲಿ ಆಗಾಗ ದೆಹಲಿ ಹೋಗಿಬರುತ್ತಿದ್ದೆವು.''

''ಬಾಂಬೆಗೆ ಬಂದಾಗ ಮೊದಲು ಅಜೀಜ್ ಮಿರ್ಜಾ ಎಂಬವರ ಮನೆಯಲ್ಲಿ ಆರು ತಿಂಗಳ ಕಾಲ ಇದ್ದೆವು. ಅವರು ತುಂಬ ಒಳ್ಳೆಯವರು. ನಂತರ ನಾವೊಂದು ಬಾಡಿಗೆ ಫ್ಲಾಟ್‌ಗೆ ಶಿಫ್ಟ್ ಆದೆವು. ಆದರೆ ಆ ಮನೆಯಲ್ಲಿ ಏನೂ ಇರಲಿಲ್ಲ. ಒಮ್ಮೆ ಆ ಮನೆಗೆ ದೆಹಲಿಯಿಂದ ನನ್ನ ಅಮ್ಮ ಬಂದರು. ಅಮ್ಮನಿಗೆ ನನ್ನ ಸ್ಥಿತಿ ನೋಡಿ ಶಾಕ್ ಆಯಿತು. ಯಾಕೆಂದರೆ ಮನೆಯಲ್ಲಿ ಮಲಗಲು ನಮ್ಮ ಬಳಿ ಹಾಸಿಗೆ ಇರಲಿಲ್ಲ, ಸೋಫಾ ಇರಲಿಲ್ಲ, ಒಂದು ಕುರ್ಚಿಯೂ ಇರಲಿಲ್ಲ. ಕೇವಲ ಅಡುಗೆಮನೆಯೇ ನಮ್ಮ ಮನೆಯಾಗಿತ್ತು. ಅಮ್ಮ ಇದನ್ನೆಲ್ಲ ನೋಡಿ ಪ್ರಶ್ನೆಗಳ ಮಳೆಯನ್ನೇ ಸುರಿಸಿದರು. 'ಯಾಕೆ ಮನೆಯಲ್ಲಿ ಸೋಫಾ ಇಲ್ಲ, ಯಾಕೆ ಮಲಗಲು ಬೆಡ್ ಇಲ್ಲ?' ಎಂದೆಲ್ಲ ಕೇಳಿದಳು. ಆಗ ನಾನು ಅಡುಗೆ ಮನೆಯ ನೆಲವನ್ನೇ ತೋರಿಸಿ, 'ಇದೇ ನಮ್ಮ ಬೆಡ್' ಅಂದೆ'' ಎಂದು ನಗುತ್ತಾರೆ ಗೌರಿ.

ಅಂದಹಾಗೆ ''ಮನೆಯಲ್ಲೇ ಮಕ್ಕಳೊಂದಿಗೆ ಶಾರುಖ್ ಜತೆಗೆ ಕಾಲ ಕಳೆಯುವುದೆಂದರೆ ನನಗೆ ತುಂಬ ಇಷ್ಟ. ಅದು ನನ್ನ ಜೀವನದ ಅತ್ಯಂತ ಖುಷಿಯ ಕ್ಷಣಗಳು'' ಎನ್ನುತ್ತಾರೆ ಗೌರಿ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್ ಕಿಂಗ್, ಶಾರುಖ್ ಖಾನ್, ಗೌರಿ ಖಾನ್, ಅಭಿನವ್