ಬಿಪಾಶಾ ಬಸು ನಾಯಕಿಯಾಗಿ ನಟಿಸುತ್ತಿರುವ 'ಲಮ್ಹಾ' ಚಿತ್ರಕ್ಕೆ ಶನಿ ಕಾಟ ಶುರುವಾಗಿದೆ. ಕಾಶ್ಮೀರದ ಪ್ರತ್ಯೇಕವಾದಿ ಸಂಘಟನೆ ದುಖ್ತರನ್ ಇ ಮಿಲ್ಲಾತ್ ಮುಖ್ಯಸ್ಥೆ ಆಸಿಯಾ ಆಂದ್ರಬೀ ಚಿತ್ರಕ್ಕೆ ಬೆದರಿಕೆ ಹಾಕಿದ್ದು, ನನ್ನ ಕಥೆಯನ್ನೇನಾದರೂ ಸಿನಿಮಾ ಮಾಡಿದರೆ ಜೋಕೆ ಎಂದು ಬೆದರಿಕೆ ಹಾಕಿದ್ದಾರೆ. ಜತೆಗೆ ಸೈಯದ್ ಆಲಿ ಶಾ ಗಿಲಾನಿ ಕೂಡ ಉರಿದು ಬಿದ್ದಿದ್ದಾರೆ. ಅವರ ಪಾತ್ರವನ್ನು ಅನುಪಮ್ ಖೇರ್ ಮಾಡುತ್ತಿದ್ದಾರೆಂದು ತಿಳಿದುಕೊಂಡು ಸಿಡಿದಿರುವ ಗಿಲಾನಿ ಸುಮ್ಮನಿರುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಸೆಕ್ಸೀ ನಟಿ ಬಿಪಾಶಾ ಬಸು ಆಸಿಯಾ ಆಂದ್ರಬೀ ಪಾತ್ರವನ್ನು ಮಾಡುತ್ತಿದ್ದಾಳೆ ಎಂಬುದನ್ನು ಯಾರ ಮೂಲಕವೋ ತಿಳಿದುಕೊಂಡ ಆಕೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. "ನನಗೆ ಭಾರತದ ಕಾನೂನಿನ ಬಗ್ಗೆ ನಂಬಿಕೆಯಿಲ್ಲ. ಆದರೆ ನನ್ನ ಕಥೆ ಅಥವಾ ಪಾತ್ರವನ್ನೇನಾದರೂ ಚಿತ್ರದಲ್ಲಿ ತುರುಕಿಸಿದಲ್ಲಿ ಸುಮ್ಮನಿರುವುದಿಲ್ಲ. ಈ ಸಂಬಂಧ ಯಾವುದೇ ಸಮರ್ಥನೆಗೆ ಅವಕಾಶವಿಲ್ಲ" ಎಂದು ಗುಡುಗಿದ್ದಾರೆ ಆಂದ್ರಬೀ.
ಸಣ್ಣಗೆ ನಡುಗಿದ 'ಲಮ್ಹಾ' ಚಿತ್ರದ ನಿರ್ದೇಶಕ ರಾಹುಲ್ ಧೋಲಾಕಿಯಾ ಈ ಸಂಬಂಧ ಸ್ಪಷ್ಟನೆಯನ್ನೂ ನೀಡಿದ್ದಾರೆ. ನಾವಿಲ್ಲಿ ಆಸಿಯಾ ಅಥವಾ ಗಿಲಾನಿಯವರ ಪಾತ್ರಗಳನ್ನು ಅಥವಾ ಕಥೆಯನ್ನು ಚಿತ್ರ ಮಾಡುತ್ತಿಲ್ಲ. ಈ ಚಿತ್ರಕ್ಕೂ ಪ್ರತ್ಯೇಕವಾದಿ ನಾಯಕರಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಜತೆಗೆ ನಮಗೆ ಇದುವರೆಗೆ ಯಾವುದೇ ಕಾನೂನು ಸಂಬಂಧದ ನೊಟೀಸ್ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ನಿರ್ದೇಶಕ ಧೋಲಾಕಿಯಾರವರು ಆಂದ್ರಬೀಯನ್ನು ಭೇಟಿ ಮಾಡಿದ್ದು ಹೌದಾದರೂ ಚಿತ್ರ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು ಆಂದ್ರಬೀ ತಿಳಿಸಿದ್ದಾರೆ. "ಕಾಶ್ಮೀರಿಗಳ ಮೇಲೆ ನಡೆಯುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವ ಬಗ್ಗೆ ಮಾತನಾಡಿದ್ದರು. ಆದರೆ ಕಾಶ್ಮೀರದ ವಿಚಾರಕ್ಕೆ ನೀವು ಇಳಿಯಬೇಡಿ ಎಂದು ಹೇಳಿದ್ದೆ. ಗುಜರಾತ್ ಗಲಭೆ ಬಗ್ಗೆಯೂ ಚಿತ್ರ ಮಾಡುವುದಾಗಿ ಅವರು ಹೇಳಿದ್ದರು. ಗುಜರಾತ್ ಭಾರತದ ರಾಜ್ಯ. ಆದರೆ ಜಮ್ಮು ಕಾಶ್ಮೀರ ಅಲ್ಲ ಎಂದು ನಾನು ಹೇಳಿದ್ದೆ" ಎಂದು ಆಂದ್ರಬೀ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನನ್ನ ಹಾಗೆಯೇ ವೇಷ ಭೂಷಣಗಳೊಂದಿಗೆ ಬಿಪಾಶಾ ಬಸು ನಟಿಸುತ್ತಿರುವುದರ ಬಗ್ಗೆ ಕೇಳಿ ಪಟ್ಟಿದ್ದೇನೆ. ಆ ರೀತಿ ಮಾಡಲು ಬಿಡಬಾರದೆಂದು ನಮ್ಮ ಜನ ನನಗೆ ಮಾಹಿತಿ ನೀಡಿದ್ದಾರೆ. ಬಿಪಾಶಾ ನನ್ನ ಪಾತ್ರ ಮಾಡುತ್ತಿರುವುದರ ಬಗ್ಗೆ ಮಾಧ್ಯಮ ವರದಿಗಳೂ ಬೆಳಕು ಚೆಲ್ಲಿವೆ. ಅದು ನಿಜವಾಗಿದ್ದರೆ ನಡೆಯಲು ನಾನು ಬಿಡುವುದಿಲ್ಲ" ಎಂದು ಆಂದ್ರಬೀ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಅನುಪಮ್ ಖೇರ್ ಹುರಿಯತ್ ಕಾನ್ಫರೆನ್ಸ್ ನಾಯಕ ಸೈಯದ್ ಆಲಿ ಶಾ ಗಿಲಾನಿ ಪಾತ್ರವನ್ನು ಮಾಡುತ್ತಿರುವ ಬಗ್ಗೆ ಕೂಡ ಮಾಹಿತಿ ಪಡೆದಿರುವ ಪ್ರತ್ಯೇಕತಾವಾದಿ ನಾಯಕರು ಕಿಡಿ ಕಾರಿದ್ದಾರೆ. ನಮ್ಮ ಯಾವುದೇ ನಾಯಕರ ಅನುಮತಿಯಿಲ್ಲದೆ ಒಂದೋ ಒಂದು ದೃಶ್ಯ ಕೂಡ ಚಿತ್ರದಲ್ಲಿರಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
'ಲಮ್ಹಾ' ಚಿತ್ರದ ತಾರಾಗಣದಲ್ಲಿ ಸಂಜಯ್ ದತ್, ಬಿಪಾಶಾ ಬಸು, ಅನುಪಮ್ ಖೇರ್ ಮುಂತಾದವರಿದ್ದಾರೆ. ಇದೀಗ ಪ್ರತ್ಯೇಕವಾದಿಗಳಿಂದ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಚಿತ್ರ ಒಂದಿಷ್ಟು ಪ್ರಚಾರ ಗಿಟ್ಟಿಸಬಹುದಾದರೂ ಅದಕ್ಕಿಂತಲೂ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿವೆ. ನಿರ್ಮಾಪಕರು ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಮತ್ತು ಆಂದ್ರಬೀಗೆ ಹೇಗೆ ಸಮರ್ಥನೆ ನೀಡುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.