ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » 'ಯಾಹೂ': ಜೆನಿಲಿಯಾ ಇನ್, ಜಿಯಾ ಔಟ್! (Jiah | Genelia | Yahoo | Ken Ghosh | Shahid Kapur)
ಸುದ್ದಿ/ಗಾಸಿಪ್
Feedback Print Bookmark and Share
 
IFM
ಜಾನೇ ತೂ...ಮೂಲಕ ರಾತ್ರಿ ಬೆಳಗಾಗುವುದರೊಳಗೆ ಜೆನಿಲಿಯಾ ಡಿಸೋಜಾ ಎಂದ ದಕ್ಷಿಣದ ನಟಿ ಬಾಲಿವುಡ್ ನಿರ್ದೇಶಕರ, ನಿರ್ಮಾಪಕ ಕಣ್ತೆರಿಸಿದ್ದೇ ತಡ, ಪ್ರೀತಿ ಝಿಂಟಾ, ರಾಣಿ ಮುಖರ್ಜಿಯಂತಹ ದಿಗ್ಗಜ ನಟೀಮಣಿಯರಿಂದ ಹಿಡಿದು ನಿನ್ನೆ ಮೊನ್ನೆ ಬಾಲಿವುಡ್ಡಿಗೆ ಬಂದ ನಟೀಮಣಿಯರ ತನಕ ಎಲ್ಲರ ನಿದ್ದೆಯಂತೂ ಕೆಟ್ಟಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಒಂದೆಡೆ ರಾಶಿ ರಾಶಿ ಚಿತ್ರಗಳನ್ನು ಬಾಚುವ ಜತೆಗೆ ಖ್ಯಾತ ಜಾಹಿರಾತುಗಳಲ್ಲೂ ಈಕೆಗೇ ಈಗ ಮುಖವಾಣಿ.

ಪಾಪ. ರಾಮ್ ಗೋಪಾಲ ವರ್ಮಾರ ವಿವಾದಿತ ಚಿತ್ರ 'ನಿಶಬ್ದ್' ಮೂಲಕ ಬಾಲಿವುಡ್ಡಿಗೆ ಕಾಲಿಟ್ಟು ಭಾರೀ ಸುದ್ದಿಯನ್ನೇ ಮಾಡಿದ್ದ ಜಿಯಾ ಖಾನ್ ಗ್ರಹಚಾರ ಮಾತ್ರ ನೆಟ್ಟಗಿಲ್ಲ ಅನಿಸುತ್ತೆ. 'ಘಜ್ನಿ'ಯಲ್ಲಿ ನಟಿಸಿದ್ದರೂ ಆಸಿನ್ ಮಿಂಚಿದ ಭರದಲ್ಲಿ ಜಿಯಾ ಕಳೆದುಹೋದಳು. ಆದರೂ ಜಿಯಾಳ ದುರದೃಷ್ಟದ ಮೇರೆ ಎಲ್ಲೆ ಮೀರಿದೆ. ಅದಕ್ಕೆ ತಾಜಾ ಉದಾಹರಣೆ, ಯಾಹೂ' ಚಿತ್ರದ ಅರ್ಧ ಶೂಟಿಂಗ್ ಮುಗಿದ ಮೇಲೆ ಈಕೆಯನ್ನು ಚಿತ್ರತಂಡದಿಂದ ಹೊರಹಾಕಿದ್ದು! ಜತೆಗೆ ಆಕೆಯ ಸ್ಥಾನಕ್ಕೆ ಜೆನಿಲಿಯಾಳನ್ನು ತಂದು ಕೂರಿಸಿದ್ದು.

ಬಾಲಿವುಡ್ ನಿರ್ದೇಶಕ ಕೆನ್ ಘೋಷ್ ತನ್ನ 'ಯಾಹೂ' ಚಿತ್ರಕ್ಕೆ ಮಾದಕ ಕನ್ಯೆ ಜಿಯಾ ಖಾನ್‌ಳನ್ನು ಬದಲಾಯಿಸಿ ಅಲ್ಲಿಗೆ ಹುಡುಗಾಟದ ಹುಡುಗಿ, ಬಬ್ಲಿ ಜೆನಿಲಿಯಾಳನ್ನು ಹಾಕುವ ಮೂಲಕ ಜಿಯಾಗೆ ಇದ್ದ ಅವಕಾಶವೂ ಕೈ ಚೆಲ್ಲಿದೆ. ಅರ್ಧ ಶೂಟಿಂಗ್ ಕೂಡಾ ಮುಗಿದಾಗಿತ್ತು 'ಯಾಹೂ'ಗೆ, ಶಾಹಿದ್ ಜತೆಗೆ ಕೆಲವು ಕಷ್ಟದ ನೃತ್ಯದ ಸೀನ್‌ಗಳನ್ನೂ ಜಿಯಾ ಹಗಲಿರುಳು ಕಷ್ಟಪಟ್ಟು ಕುಣಿತ ಕಲಿತು ನಟಿಸಿದ್ದಳು. ಆದರೆ ಈಗ ಜಿಯಾಳನ್ನು ಹಿಂಬಾಗಿಲಿನಿಂದ ಮನೆಗೆ ಕಳುಹಿಸಿ ಜೆನಿಲಿಯಾಗೆ ಬಲಗಾಲಿಟ್ಟು ಒಳಗೆ ಬಾ ಅಂದಿದ್ದಾರೆ ಕೆನ್ ಘೋಷ್.

ಈಗ ಶಾಹಿದ್ ಹಾಗೂ ಜೆನಿಲಿಯಾಗೆ ಹೊಸತಾಗಿ ಶೂಟಿಂಗ್ ಆರಂಭ. ಇಷ್ಟಲ್ಲ ನಡೆದ ಮೇಲೆ ಈಗ ಕೆನ್ ಘೋಷ್ ಜಿಯಾಳನ್ನು ಹೊರಗೆ ಹಾಕಲು ಕೊಟ್ಟ ಕಾರಣ ಏನೆಂದರೆ, ''ಜಿಯಾ ಆ ಚಿತ್ರದ ಪಾತ್ರಕ್ಕೆ ತುಸು ಹೆಚ್ಚು ಹಾಟ್‌ ಹಾಗೂ ಸೆಕ್ಸೀಯಾಗಿ ಕಾಣುತ್ತಾಳೆ. ಚಿತ್ರಕ್ಕೆ ಜೆನಿಲಿಯಾನಂತಹ ಹುಡುಗಿ ಬೇಕಿತ್ತು. ಅಲ್ಲದೆ ಶಾಹಿದ್ ಜತೆಗೆ ಜಿಯಾಗಿಂತಲೂ ಜೆನಿಲಿಯಾ ಇನ್ನೂ ಹೆಚ್ಚಾಗಿ ಮ್ಯಾಚ್ ಆಗುತ್ತಾರೆ. ಅದಕ್ಕಾಗಿ ವಿಧಿಯಿಲ್ಲದೆ ಹೀಗೆ ಮಾಡಬೇಕಾಯಿತು. ಜಿಯಾ ಒಳ್ಳೆಯ ನಟಿ. ಈವರೆಗೆ ನಡೆದ ಶೂಟಿಂಗ್‌ನಲ್ಲಿ ಚೆನ್ನಾಗಿಯೇ ನಟಿಸಿದ್ದಾಳೆ. ಅವಳಿಗೆ ನನ್ನ ಮುಂದಿನ ಚಿತ್ರಗಳಲ್ಲಿ ಖಂಡಿತ ಅವಕಾಶ ನೀಡುತ್ತೇನೆ.'' ಹೀಗಾಗಿ, ಜಿಯಾ ಕೈಯಲ್ಲಿ ಭರವಸೆಯ ಚಿತ್ರ ಇದ್ದದ್ದು ಒಂದೇ. ಅದೂ ಈಗ ಹೊರಟು ಹೋದಂತಾಗಿದೆ.

IFM
ಜೆನಿಲಿಯಾ ಈ ಚಿತ್ರಕ್ಕೆ ಹೇಗೆ ಬಂದಳು ಎಂದು ಕೇಳಿದರೆ ಕೆನ್ ಹೀಗೆ ವಿವರಿಸುತ್ತಾರೆ. ''ಮೊದಲು ಈ ಚಿತ್ರಕ್ಕೆ ಯಾಹೂ ಎಂಬ ಹೆಸರಿಟ್ಟಿದ್ದೆವು. ಜಿಯಾ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿ ಶೂಟಿಂಗ್ ಕೂಡಾ ನಡದಿತ್ತು. ಆಮೇಲೆ ಚಿತ್ರದ ದೃಷ್ಟಿಯಿಂದ ನಾಯಕಿ ಪಾತ್ರದಲ್ಲಿ ಕೆಲವು ಬದಲಾವಣೆ ಮಾಡಲಾಯಿತು. ಆಗ ಆ ಪಾತ್ರಕ್ಕೆ ಜಿಯಾಗಿಂತ ಜಿನಿಲಿಯ ಹೆಚ್ಚು ಸರಿಹೊಂದುತ್ತಾಳೆ ಅನಿಸಿತು. ಹಾಗಾಗಿ ಜೆನಿಲಿಯಾ ತರಬೇಕಾಯಿತು'' ಎಂದು ಸಮರ್ಥಿಸುತ್ತಾರೆ. ಆದರೆ, ಜಿಯಾ ಹಾಗೂ ಕೆನ್ ನಡುವೆ ಏನೋ ವಿರಸವಾಗಿದೆಯಂತಲ್ಲ ಎಂದರೆ ಕೆನ್ ಮಾತ್ರ ಏನೂ ಪ್ರತಿಕ್ರಿಯೆ ನೀಡುವುದಿಲ್ಲ.

ಕೆನ್ ಏನು ಹೇಳಿದರೂ ಜಿಯಾ ಮಾತ್ರ ತುಂಬ ಸಪ್ಪಗಾಗಿದ್ದಾಳಂತೆ. ಅದಕ್ಕೆ ಕೆನ್ ಹೇಳುತ್ತಾರೆ, ''ಜಿಯಾಗೆ ಖಂಡಿತ ಇದು ತುಂಬ ನೋವಿನ ಘಳಿಗೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಮಗೆ ಚಿತ್ರದ ಫಲಿತಾಂಶ ಮುಖ್ಯ, ಅದಕ್ಕಾಗಿ ಹೀಗೆ ಮಾಡದೆ ವಿಧಿಯಿಲ್ಲ. ಇದನ್ನು ಜಿಯಾ ಅರ್ಥಮಾಡಿಕೊಳ್ಳುತ್ತಾಳೆ ಅಂದುಕೊಂಡಿದ್ದೇನೆ'' ಎನ್ನುತ್ತಾರೆ.

ಹೀಗೆ ಅರ್ಧ ಶೂಟಿಂಗ್ ಮುಗಿಸಿದ ಮೇಲೆ ನಾಯಕಿಯನ್ನು ಬದಲಾಯಿಸಿದರೆ ಚಿತ್ರದ ಖರ್ಚುವೆಚ್ಚದ ದೃಷ್ಟಿಯಿಂದ ನಷ್ಟವಲ್ಲವೇ ಎಂದರೆ, ''ನಷ್ಟವೇನೂ ಇಲ್ಲ. ಕೇವಲ 10 ದಿನ ಶೂಟಿಂಗ್‌ನ ಖರ್ಚು ಮಾತ್ರ ಹೊರೆಯಾಗುತ್ತದೆ. ಚಿತ್ರದ ದೃಷ್ಟಿಯಿಂದ ಅದೇನೂ ದೊಡ್ಡ ಹೊರೆ ಅಲ್ಲವೇ ಅಲ್ಲ. ಇನ್ನೂ 28 ದಿನಗಳ ಶೂಟಿಂಗ್ ಮುಗಿಸಿದರೆ ಒಟ್ಟು ಶೂಟಿಂಗ್ ಮುಗಿದಂತೆ'' ಎಂದು ಸಮರ್ಥಿಸುತ್ತಾರೆ.

'ಹಳೆಯದರ ಬಗ್ಗೆ ಮಾತನಾಡೋದ್ಯಾಕೆ?' ಎಂದು ಜಾಣತನದಿಂದ ಹೇಳುವ ಕೆನ್, ಜೆನಿಲಿಯಾ ಬಂದಿರುವುದರಿಂದ ಚಿತ್ರಕ್ಕೆ ಇನ್ನೂ ಹೆಚ್ಚಿನ ವ್ಯಾಲ್ಯೂ ಬಂದಿದೆ ಎನ್ನುತ್ತಾರೆ. ''ಜೆನಿಲಿಯಾ ಚಿತ್ರಕ್ಕಾಗಿ ಕಠಿಣ ಪರಿಶ್ರಮದಿಂದ ತಯಾರಾಗುತ್ತಿದ್ದಾಳೆ. ಜೆನಿಲಿಯಾ ತುಂಬ ಚೆನ್ನಾಗಿ ನಟಿಸುತ್ತಿದ್ದಾಳೆ. ನನ್ನ ಕೆಲಸ ಸುಲಭವಾಗಿದೆ. ಎಂಟು ದಿನಗಳ ಶೂಟಿಂಗ್‌ನಲ್ಲೇ ಜೆನಿಲಿಯಾ ಬಗ್ಗೆ ನನಗೆ ಅಪಾರ ವಿಶ್ವಾಸ ಮೂಡಿದೆ. ಶಾಹಿದ್ ಜೆನಿಲಿಯಾ ಜೋಡಿ ಕೂಡಾ ತುಂಬ ಚೆನ್ನಾಗಿ ಕಾಣುತ್ತದೆ. ಚಿತ್ರದ ದೃಷ್ಟಿಯಿಂದ ಒಂದು ಅತ್ಯುತ್ತಮ ನಿರ್ಧಾರ ನಾನು ತೆಗೆದುಕೊಂಡೆ ಎಂದು ನನಗೆ ಅನಿಸಿದೆ'' ಎನ್ನುತ್ತಾರೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ.

ಆದರೆ ನಾಯಕಿ ಬದಲಾವಣೆಯಿಂದ ನಟಿಸಿದ ದೃಶ್ಯಗಳಲ್ಲೇ ನಟಿಸಲು ಶಾಹಿದ್‌ಗೆ ಬೇಸರವಿಲ್ಲವೇ ಎಂದುದಕ್ಕೆ ಕೆನ್ ಹೇಳುತ್ತಾರೆ. ''ಶಾಹಿದ್ ನಾಯಕನನ್ನಾಗಿಸಿ ಇಶ್ಕ್ ವಿಶ್ಕ್, ಫಿದಾ ಚಿತ್ರಗಳನ್ನು ಮಾಡಿದ್ದೇನೆ. ಶಾಹಿದ್ ಯಾವಾಗಲು ತಮ್ಮ ಸಹನಟಿಯರೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತಾರೆ'' ಎಂದು ನಗುತ್ತಾರೆ ಕೆನ್. ಆದರೆ ತೆರೆಮರೆಯಲ್ಲೇನು ನಡೆದಿದೆಯೋ... ದೇವನೇ ಬಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆನಿಲಿಯಾ, ಜಿಯಾ ಖಾನ್, ಕೆನ್ ಘೋಷ್, ಬಾಲಿವುಡ್ ಗಾಸಿಪ್