ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಬಾಲಿವುಡ್ಡಿನಲ್ಲಿ ಹೆಚ್ಚುತ್ತಿರುವ ಬಿಚ್ಚುವ ಕೆಚ್ಚೆದೆ ಧೀರರು! (Pankh | Jail | New York | Neil Nitin Mukesh | John Abraham)
ಸುದ್ದಿ/ಗಾಸಿಪ್
Feedback Print Bookmark and Share
 
Maradona Rebello
IFM
ಬಾಲಿವುಡ್ ಈಗ ಸಿಕ್ಕಾಪಟ್ಟೆ ಬೋಲ್ಡ್ ಆಗುತ್ತಿದೆ. ಚಲನಚಿತ್ರ ಎಂಬುದೊಂದು ಕ್ರಿಯೇಟಿವ್ ಮಾಧ್ಯಮವಾದ್ದರಿಂದ ದಿನದಿಂದ ದಿನಕ್ಕೆ ಬಾಲಿವುಡ್ ಹೆಚ್ಚು 'ತೆರೆದು'ಕೊಳ್ಳುತ್ತಿದೆ. ಸಾಪ್ರದಾಯಿಕವಾಗಿಯೇ ವಿಶ್ವದಲ್ಲಿ ಚೌಕಟ್ಟಿನೊಳಗೆ ಕೂತಿದ್ದ ಬಾಲಿವುಡ್ ನಿಧಾನವಾಗಿ ತನ್ನ ಮಗ್ಗುಲು ಬದಲಾಯಿಸುತ್ತಿದೆ. ಹಾಲಿವುಡ್ಡಿನ ಕಾಮನ್ ದೃಶ್ಯವಾದ ತುಟಿಗೆ ತುಟಿ ಸೇರಿಸಿ ಚುಂಬಿಸುವ ದೃಶ್ಯಗಳೂ ಈಗ ಬಾಲಿವುಡ್ಡಿನಲ್ಲೂ ಸಹಜವಾಗುತ್ತಿದೆ. ಜತೆಗೆ ಬೆತ್ತಲೆಯಾಗುವುದೂ ಕೂಡಾ!

ಭಾರತೀಯ ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬೆತ್ತಲೆಯಾಗುವ ದೃಶ್ಯವೇಕೆ, ತುಟಿಗೆ ತುಟಿ ಸೇರಿಸುವ ದೃಶ್ಯಗಳಿರುವ ಚಿತ್ರಗಳೂ ಮಾಧ್ಯಮಗಳಲ್ಲಿ ಮುಖ್ಯ ಸುದ್ದಿಗಳಾಗುತ್ತಿದ್ದರೂ, ಇದಕ್ಕೆ ಸಂಪ್ರದಾಯವಾದಿಗಳಿಂದ ವಿರೋಧ ಬಂದರೂ, ನೈಜ ವಿಷಯಗಳನ್ನಾಧರಿಸಿ ಹೊರಬರುವ ಕಮರ್ಶಿಯಲ್ ಕಲಾತ್ಮಕ ಚಿತ್ರಗಳಲ್ಲೂ ಈಗ ಬೆತ್ತಲೆ ದೃಶ್ಯ ನಿಧಾನವಾಗಿ ಸ್ಥಾನ ಪಡೆಯುವತ್ತ ಹೊರಟಿದೆ. ಇದಕ್ಕೆ ಇತ್ತೀಚೆಗೆ ಹೊರಬರುತ್ತಿರುವ ಹಲವು ಚಿತ್ರಗಳೇ ನೈಜ ಸಾಕ್ಷಿ.

ಬಾಲಿವುಡ್ ನಟೀಮಣಿಯರು ದಿನದಿಂದ ದಿನಕ್ಕೆ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗುತ್ತಿರುವಾಗ ನಟರು ಯಾಕೆ ಆಗಬಾರದು ಎಂಬ ಪ್ರಶ್ನೆ ಬಂದಿದೆಯೋ ಗೊತ್ತಿಲ್ಲ. ಒಟ್ಟಾರೆ, ನಿಜವಾದ್ದನ್ನು ನಿಜವಾದ ಹಾಗೆಯೇ ತೋರಿಸಲು ಸಿದ್ಧವಾಗುತ್ತಿರುವ ಬಾಲಿವುಡ್‌ನಲ್ಲಿ ಈಗ ಪುರುಷರು ಪ್ಯಾಂಟ್ ಗುಂಡಿ ಕಳಚುವ ಅಭ್ಯಾಸವೂ ಸಿಕ್ಕಾಪಟ್ಟೆ ಶುರುವಾಗಿದೆ.

John Abraham
IFM
ತನ್ನ ಮೊದಲ ಚಿತ್ರದಲ್ಲೇ ಅದ್ಭುತ ಪ್ರತಿಭೆ ಪ್ರದರ್ಶಿಸಿದ ಜತೆಗೆ, ತನ್ನ ಮೋಡಿ ಮಾಡುವ ಸೌಂದರ್ಯವನ್ನೂ ಪ್ರದರ್ಶಿಸಿದ ಕಪೂರ್ ಕುಡಿ ರಣಬೀರ್ ಕಪೂರ್ ಸಂಜಯ್ ಲೀಲಾ ಭನ್ಸಾಲಿಯವರ ಸಾವರಿಯಾದಲ್ಲಿ ಮುದ್ದುಮುದ್ದಾಗಿ ಟವೆಲ್ ಬಿಚ್ಚಿದ್ದು ದೊಡ್ಡ ಸುದ್ದಿಯಾಗಿತ್ತು. ಅದಾದ ನಂತರ ಇದೀಗ ಮೊನ್ನೆಯಷ್ಟೇ ಬಿಡುಗಡೆ ಕಂಡ ಕಬೀರ್ ಖಾನ್ ಅವರ ನ್ಯೂಯಾರ್ಕ್ ಚಿತ್ರದಲ್ಲಿ ಜಾನ್ ಅಬ್ರಹಾಂ ಎಂಬ ಸೆಕ್ಸೀ ಪುರುಷ ಬೆತ್ತಲಾದ. ಭಯೋತ್ಪಾದನೆ ಮಾಡಿದವರೆಂದು ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಹಿಂಸಿಸುವ ಪರಮಾವಧಿಯಲ್ಲಿ ಜಾನ್ ಬೆತ್ತಲೆ ದೃಶ್ಯಗಳಿವೆ. ದೋಸ್ತಾನಾದಲ್ಲೇ ಕಡಿಮೆ ಬಟ್ಟೆ ಧರಿಸಿ ಹಾಟ್ ನಟಿಯರಿಗೆ ಸವಾಲೊಡ್ಡಿದ್ದ ಜಾನ್ ನ್ಯೂಯಾರ್ಕ್‌ನಲ್ಲಿ ಇನ್ನೂ ಹೆಚ್ಚಿನ ಧೈರ್ಯ ತೋರಿಸಿದರು.

ಹೋಗಲಿ ಬಿಡಿ. ಇಷ್ಟೇ ಅಲ್ಲ. ಸದ್ಯಕ್ಕೆ ಇನ್ನೂ ಹಲವು ನಟರು ಇದೇ ಹಾದಿಯಲ್ಲಿದ್ದಾರೆ. ಬಾಲಿವುಡ್ಡಿನ ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ ಮೊಮ್ಮಗ ನೀಲ್ ನಿತಿನ್ ಮುಖೇಶ್ ಕೂಡಾ ಮಧುರ್ ಭಂಡಾರ್ಕರ್ ಅವರ ಮುಂದಿನ ಚಿತ್ರ ಜೈಲ್‌ನಲ್ಲಿ ಸಂಪೂರ್ಣ ಬೆತ್ತಲಾಗಿದ್ದಾರೆ. ಈ ವಿಷಯವಂತೂ ಬಾಲಿವುಡ್ ಸುದ್ದಿಗಳ ಪೈಕಿ ಹೆಡ್‌ಲೈನೇ ಆಯಿತು. ಕಾರಣ ಈ ಚಿತ್ರದಲ್ಲಿ ನೀಲ್ ಧೈರ್ಯವಾಗಿ ಮುಂಭಾಗದ ಬೆತ್ತಲೆ ಪೋಸ್ ಕೊಟ್ಟಿದ್ದಾರಂತೆ. ಈವರೆಗೆ ಯಾವ ಬಾಲಿವುಡ್ ಚಿತ್ರದಲ್ಲೂ ಹೀಗೆ ಯಾರೂ ಬೆತ್ತಲಾಗಿಲ್ಲವಂತೆ.

ಜೈಲ್ ಜತೆಜತೆಗೇ ಸುದ್ದಿಯಾದ ಇನ್ನೊಬ್ಬ ಪುರುಷ ಮೆರಡೋನಾ ರೆಬೆಲೋ. ಮೊನ್ನೆ ಮೊನ್ನೆಯಷ್ಟೆ ಬಾಲಿವುಡ್ಡಿಗೆ ಕಾಲಿಟ್ಟ ರೆಬೆಲೋ ಇವರೆಲ್ಲರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಮೊದಲ ಚಿತ್ರ ಪಂಖ್‌ನಲ್ಲಿ ಬೆತ್ತಲಾಗಿದ್ದಾನಂತೆ. ಬರ್ತ್‌ಡೇ ಬಟ್ಟೆಯನ್ನು ಸಂಪೂರ್ಣ ಕಳಚಿಹಾಕುವ ದೃಶ್ಯ ಇದರಲ್ಲಿದೆಯಂತೆ. ಅಷ್ಟೇ ಅಲ್ಲ, ಪುರುಷರಿಬ್ಬರು ಪರಸ್ಪರ ತುಟಿಗೆ ತುಟಿ ಸೇರಿಸಿ ಚುಂಬಿಸುವ ದೃಶ್ಯವೂ ಪಂಖ್‌ನಲ್ಲಿದೆ. ಈ ಚಿತ್ರದಲ್ಲಿ ಬಹುಚರ್ಚಿತ ಸಲಿಂಗಕಾಮ ವಸ್ತುವೂ ಇದೆ. ಚಿತ್ರದ ನಾಯಕಿ ಹಾಟ್ ತಾರೆ ಬಿಪಾಶಾ ಬಸು.

ಮೊದಲ ಚಿತ್ರದಲ್ಲೇ ಬೆತ್ತಲಾದ ಬಗ್ಗೆ ಮೆರಡೋನಾ ರೆಬೆಲೋ ಹೇಳೋದು ಹೀಗೆ. ಪಂಖ್ ಚಿತ್ರ ಸಲಿಂಗಕಾಮದ ಕುರಿತಾದ ಚಿತ್ರವಲ್ಲ. ಚಿತ್ರದಲ್ಲಿ ಸಲಿಂಗಕಾಮವೂ ಬಂದು ಹೋಗುತ್ತದೆ ಅಷ್ಟೆ. ಜತೆಗೆ ಚುಂಬಿಸುವ ದೃಶ್ಯವೂ ಕೆಲವೇ ಸೆಕೆಂಡುಗಳಲ್ಲಿ ಮುಗಿದುಹೋಗುತ್ತದೆ. ಆದರೆ ಇಂತಹ ದೃಶ್ಯವೊಂದರಲ್ಲಿ ಪಾಲ್ಗೊಳ್ಳಲು ನಾನು ಒಂದು ತಿಂಗಳಿಡೀ ಮಾನಸಿಕವಾಗಿ, ಬೌದ್ಧಿಕವಾಗಿ ಸಿದ್ಧಗೊಳ್ಳಬೇಕಾಯಿತು. ಆದರೆ ಚಿತ್ರ ಬಿಡುಗಡೆಯಾದ ಮೇಲೆ ಈ ದೃಶ್ಯಕ್ಕೆ ಮನೆಯಲ್ಲಿ ಅಪ್ಪ, ಅಮ್ಮ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ ಎಂದು ಹಿಂಜರಿಕೆಯಿಂದಲೇ ಹೇಳುತ್ತಾರೆ.

ನ್ಯೂಯಾರ್ಕ್ ಚಿತ್ರದ ನಿರ್ದೇಶಕ ಕಬೀರ್ ಖಾನ್ ಹೇಳುವಂತೆ, ಚಿತ್ರಕ್ಕೆ ಅಗತ್ಯವಿದ್ದಲ್ಲಿ ಇಂತಹ ದೃಶ್ಯಗಳನ್ನು ಚಿತ್ರೀಕರಿಸಲೇಬೇಕು. ಆದರೆ ಅದನ್ನು ಕಲಾತ್ಮಕವಾಗಿ ಮಾಡುವುದು ನಿರ್ದೇಶಕರ ಕೈಯಲ್ಲಿದೆ ಎನ್ನುತ್ತಾರೆ. ಜತೆಗೆ ಈ ದೃಶ್ಯಕ್ಕಾಗಿ ನಟನನ್ನು ಒಪ್ಪಿಸುವುದೂ ಅಂತಹ ದೊಡ್ಡ ಕೆಲಸವೇನಾಗಲಿಲ್ಲ ಎಂದೂ ಹೇಳುತ್ತಾರೆ.

Neil Nitin Mukesh
IFM
ಬೆತ್ತಲೆಯಾಗುವುದು ಮುಜುಗರದ ವಿಷಯವೇನಲ್ಲ. ಆದರೆ ಎಲ್ಲಿ ಬೆತ್ತಲಾಗುತ್ತೇವೆ ಎಂಬುದರ ಮೇಲೆ ಮುಜುಗರ ಅವಲಂಬಿತವಾಗುತ್ತದೆ. ಬೆತ್ತಲಾಗಲು ನನಗೆ ಮುಜುಗರವೇನಿಲ್ಲ ಎಂದು ಧೈರ್ಯದಿಂದ ಹೇಳುತ್ತಾರೆ ನ್ಯೂಯಾರ್ಕ್‌ನಲ್ಲಿ ಬೆತ್ತಲಾದ ಜಾನ್ ಅಬ್ರಹಾಂ. ಇನ್ನು ಹೇಳಿ ಕೇಳಿ ಮಧುರ್ ಭಂಡಾರ್ಕರ್ ನೈಜ ಜೀವನವನ್ನೇ ತೆರೆಯ ಮೇಲೆ ತೋರಿಸುವ ನಿರ್ದೇಶಕರೆಂದೇ ಹೆಸರು ಪಡೆದವರು. ಪೇಜ್ ತ್ರೀ, ಫ್ಯಾಷನ್‌ನಂಹ ಚಿತ್ರ ನೀಡಿದ ಮಧುರ್ ಈಗ ಜೈಲ್ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ. ನಾಯಕ ಸದ್ಯ ಬೆಳಕಿಗೆ ಬರುತ್ತಿರುವ ಪ್ರತಿಭಾವಂತ ನಟ ನೀಲ್ ನಿತಿನ್ ಮುಖೇಶ್. ಈ ಚಿತ್ರದಲ್ಲಿ ಪುರುಷನೊಬ್ಬನನ್ನು ಹೇಗೆ ಹಿಂಸಿಸಲಾಗುತ್ತದೆ ಎಂಬುದನ್ನು ತೋರಿಸಲಾಗಿದೆಯಂತೆ. ಈ ಬಗ್ಗೆ ನೀಲ್ ನಿತಿನ್ ಹೇಳೋದು ಹೀಗೆ. ನಿರ್ದೇಶಕರ ಕೈಯಲ್ಲಿ ಕಥೆ ಕೇಳಿದ ಮೇಲೆ ನನಗೆ ಈ ಚಿತ್ರದಲ್ಲಿ ನೈಜತೆಯ ಪ್ರದರ್ಶನ ಅಗತ್ಯವಿದೆ ಎಂದೆನಿಸಿತು. ಎಷ್ಟು ನೈಜತೆ ಸಾಧ್ಯವೋ ಅಷ್ಟನ್ನು ತೆರೆಯ ಮೇಲೆ ತರುವುದು ಈ ಚಿತ್ರದ ಉದ್ದೇಶ. ಹಾಗಾಗಿ ನಾನು ಬೆತ್ತಲಾಗಲೇಬೇಕಾಯಿತು. ಮೊದಲು ಮುಜಗರವಾದರೂ, ನಂತರ ದೃಶ್ಯದ ಬಗ್ಗೆ ನಾಚಿಕೆಯಾಗಲಿಲ್ಲ. ದೃಶ್ಯವನ್ನೂ ಮಧುರ್ ತುಂಬ ಚೆನ್ನಾಗಿ ಕಲಾತ್ಮಕವಾಗಿ ಸೆರೆಹಿಡಿದುದು ನನಗೆ ಖುಷಿಯಾಗಿದೆ ಎನ್ನುತ್ತಾರೆ.

ಪಂಖ್ ಚಿತ್ರದ ನಿರ್ದೇಶಕ ಸುದೀಪ್ತೋ ಚಟ್ಟೋಪಾಧ್ಯಾಯ್ ಹೇಳುವಂತೆ, ಹೀಗೆ ಎಲ್ಲ ನಟರನ್ನೂ ಇಂತಹ ದೃಶ್ಯಗಳಿಗೆ ಒಪ್ಪಿಸುವುದು ಕಷ್ಟ. ಯಾಕೆಂದರೆ ಶಾರುಖ್ ಖಾನ್ ಅವರನ್ನು ಹೀಗೆ ಕಲ್ಪಿಸಲು ಸಾಧ್ಯವಿಲ್ಲ. ಅವರೊಬ್ಬ ಕೌಟುಂಬಿಕ ಚಿತ್ರಗಳ ಮೂಲಕ ಮನೆಮಾತಾದವರು. ಅವರ ಅಭಿಮಾನಿ ವರ್ಗವೂ ಅಂತಹುದೇ. ಹಾಗಾಗಿ ಅವರನ್ನು ಹೀಗೆ ಬಳಸಿಕೊಳ್ಳಲು ಸಾದ್ಯವಿಲ್ಲ. ಆದರೆ, ಜಾನ್, ನೀಲ್ ಅಂಥವರು ಇಂತಹುದಕ್ಕೂ ಸೈ. ಯಾಕೆಂದರೆ ಅವರು ತುಂಬ ಮುಂದೆ ನಡೆದುಬಂದಿದ್ದಾರೆ ಎನ್ನುತ್ತಾರೆ.

ಹಾಲಿವುಡ್ ಚಿತ್ರಗಳಲ್ಲಿ ಇಂತಹ ವಿಷಯ ಚರ್ಚಿತವಾಗುವುದಿಲ್ಲ. ಅಲ್ಲಿ ಇಂತಹ ನೈಜತೆಗಳು ಬಹಳ ಹಿಂದಿನಿಂದಲೂ ಇದ್ದವು. ಅವರಿಗೆ ಬೆತ್ತಲೆಯಾಗಿ ನಟಿಸಿದರೆ ಅದು ದೊಡ್ಡ ವಿಷಯವಾಗುವುದಿಲ್ಲ. ಯಾಕೆಂದರೆ ಅಲ್ಲಿನ ಸಾಂಸ್ಕೃತಿಕ ಚೌಕಟ್ಟೇ ಹಾಗೆ. ಆದರೆ ಭಾರತೀಯ ಚಿತ್ರರಂಗ ಹಾಗಲ್ಲ. ಇಲ್ಲಿ ಬಿಚ್ಚಿದ್ದು ದೊಡ್ಡ ವಿಷಯವಾಗುತ್ತದೆ. ಪ್ರೇಕ್ಷಕರೂ ಅದನ್ನು ಸಹಜವಾಗಿ ಸ್ವೀಕರಿಸುವ ಮಟ್ಟಕ್ಕೆ ಬೆಳೆದಿಲ್ಲ. ಆದರೂ, ಈಗಿನ ಹೊಸ ಪೀಳಿಗೆಯ ನಟರನ್ನು ಇಟ್ಟುಕೊಂಡು ಇಂತಹ ಹೊಸ ಮಾರ್ಗದ್ಲಲೂ ಹೋಗಲು ಬಾಲಿವುಡ್ ಪ್ರಯತ್ನಿಸುತ್ತಿದೆ. ಹಾಗಾಗಿ ಬಾಲಿವುಡ್‌ ಕೂಡಾ ಬೋಲ್ಡ್ ಆಗಲೂ ಸಾಧ್ಯವಿದೆ ಎಂದು ಈಚಿನ ದಿನಗಳಲ್ಲಿ ವಿಶ್ವಕ್ಕೆ ತೋರಿಸಿಕೊಡುವ ಪ್ರಯತ್ನ ಇದೆಂದೇ ಹೇಳಬಹುದು ಎನ್ನುತ್ತಾರೆ ಚಟ್ಟೋಪಾಧ್ಯಾಯ.

ಎಷ್ಟೇ ಕಡಿಮೆ ಬಟ್ಟೆ ಧರಿಸಲು ಒಪ್ಪಿದರೂ ಭಾರತೀಯ ಸಾಂಪ್ರದಾಯಿಕ ಮನೋಸ್ಥಿತಿ ಭಾರತೀಯ ನಟ ನಟಿಯರಲ್ಲಿ ಇದ್ದೇ ಇದೆ. ಬೆತ್ತಲೆ ದೃಶ್ಯಗಳಿಗೆ ಮಾನಸಿಕವಾಗಿ ತನ್ನನ್ನು ತಾನು ಸಿದ್ಧಪಡಿಸಲು ಹಲವು ತಿಂಗಳು ತೆಗೆದುಕೊಳ್ಳುವ ನಟನಟಿಯರು ಇದಕ್ಕೆ ಸಾಕ್ಷಿ. ಮೊನ್ನೆ ಮೊನ್ನೆ, ಚಿತ್ರಕ್ಕೆ ಅಗತ್ಯವಿದ್ದರೆ ಬೆತ್ತಲೆಯಾಗಿ ಚಿತ್ರದಲ್ಲಿ ಪೋಸ್ ಕೊಡುತ್ತೀರಾ ಎಂದಿದ್ದಕ್ಕೆ ಕೋಪ ನೆತ್ತಿಗೇರಿ ಪತ್ರಿಕಾಗೋಷ್ಠಿಯಿಂದ ಎದ್ದು ಹೋದ ಕರೀನಾ ಕಪೂರ್ ಕೂಡಾ ಇದಕ್ಕೆ ಜ್ವಲಂತ ಸಾಕ್ಷಿ. ಆದರೂ, ಒಟ್ಟಾರೆ ಬಾಲಿವುಡ್ ದಿನೇ ದಿನೇ ಬೋಲ್ಡ್ ಆಗುತ್ತಿರುವುದಂತೂ ಸತ್ಯ. ಏನಂತೀರಾ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್, ರಣಬೀರ್ ಕಪೂರ್, ನೀಲ್ ನಿತಿನ್ ಮುಖೇಶ್, ಜಾನ್ ಅಬ್ರಹಾಂ