ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ಮುನ್ನೋಟ » 'ಹಾಕಿ' ಮೇಲೊಂದು ಬೆಳಕು - ಚಕ್ ದೇ ಇಂಡಿಯಾ
ಸಿನಿಮಾ ಮುನ್ನೋಟ
Feedback Print Bookmark and Share
 
ಚಕ್ ದೇ ಇಂಡಿಯಾ... ಇದು ಮನುಷ್ಯನ ಕೆಚ್ಚೆದೆಯ ಹೋರಾಟ ಮತ್ತು ಗುರಿ ಸಾಧಿಸುವ ಛಲದ ಸುತ್ತ ಸುತ್ತುವ ವಿನೂತನ ಚಲನಚಿತ್ರ. "ಅಬ್ ತಕ್ ಛಪ್ಪನ್" ಖ್ಯಾತಿಯ ಶಿಮಿತ್ ಅಮಿನ್ ನಿರ್ದೇಶನದ ಈ ಚಿತ್ರವು ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿ ಆಟಗಾರರ ಬದುಕಿನ ಮೇಲೂ ಬೆಳಕು ಚೆಲ್ಲುತ್ತದೆ.

ಯುವ ಮತ್ತು ಉತ್ಸಾಹಿ ಮಹಿಳೆಯರುಳ್ಳ ಹಾಕಿ ತಂಡ, ಅವರ ಸಾಧನೆಗಳು, ಮಹತ್ವಾಕಾಂಕ್ಷೆ, ಕೌಶಲ್ಯಗಳನ್ನು ವಿಶ್ವದ ಶ್ರೇಷ್ಠ ತಂಡದೆದುರು ಒರೆಗೆ ಹಚ್ಚಿ ದೇಶಕ್ಕೆ ಹೆಮ್ಮೆ ತರುವ ಪ್ರಯತ್ನ, ಈ ತಂಡವನ್ನು ಮೇಲೆತ್ತಲು ಶ್ರಮಿಸುವ ಒಬ್ಬ ಕೋಚ್ ತನ್ನ ಕಳೆದುಹೋದ ಗೌರವವನ್ನು ಮರಳಿ ಪಡೆಯುವ ಪ್ರಯತ್ನ... ಇದು ಚಿತ್ರದ ಕಥಾವಸ್ತು.
ಚಿತ್ರದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಆಗಿ ಪಾತ್ರ ನಿರ್ವಹಿಸುವ ಶಾರೂಖ್ ಖಾನ್ ನಾಯಕನಾಗಿ ನಟಿಸುತ್ತಿದ್ದಾರೆ.

ಹಾಕಿ ತಂಡವೊಂದರಿಂದ ಅವಮಾನಕಾರಿಯಾಗಿ ಹೊರ ದಬ್ಬಲ್ಪಟ್ಟ ಆಟಗಾರನು ಏಳು ವರ್ಷಗಳ ಬಳಿಕ ಕೋಚ್ ಆಗಿ ಹಾಕಿ ತಂಡ ಸೇರಿಕೊಳ್ಳುವುದು ಕಥೆಯ ತಿರುಳು. ವಿದ್ಯಾ ಮಾಲ್ವಾಡೆ ಹಾಕಿಯನ್ನೇ ಪ್ರೀತಿಸುವ ಉತ್ಸಾಹೀ ಸಿಖ್ ಯುವತಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಆಕೆಗೆ ಭಾರತೀಯ ಹಾಕಿ ತಂಡ ಸೇರಿಕೊಳ್ಳುವಾಸೆಯಿದ್ದರೂ, ಅವಳ ಸಂಪ್ರದಾಯವಾದಿ ತಂದೆ ತಾಯಿಗಳು ಅದನ್ನು ಬಲವಾಗಿ ವಿರೋಧಿಸುತ್ತಾರೆ.

ಮಹಿಳಾ ತಂಡದ ಕೋಚ್ ಆಗಿ ಶಾರೂಖ್ ಖಾನ್ ಅಧಿಕಾರಗ್ರಹಣ ಮಾಡುವಾಗ, ಎಲ್ಲವೂ ಗೋಜಲು ಸ್ಥಿತಿಯಲ್ಲಿರುತ್ತದೆ. ಆದರೆ ಆತ ಈ ಹುಡುಗಿಯರಿಗೆ ಉತ್ತಮ ತರಬೇತಿ ನೀಡುತ್ತಾನೆ ಮತ್ತು ತಂಡವು ವಿಶ್ವ ಕಪ್ ಹಾಕಿ ಕೂಟದಲ್ಲಿ ಪಾಲ್ಗೊಳ್ಳಲು ಮತ್ತು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸುತ್ತದೆ. ಹೀಗೆ ಸಾಗುತ್ತದೆ ಕಥೆ.

ಮೆಲ್ಬೋರ್ನ್, ಸಿಡ್ನಿ ಹಾಗೂ ಬ್ರಿಸ್ಬೇನ್ ಸೇರಿದಂತೆ ಆಸ್ಟ್ರೇಲಿಯಾದ ವಿವಿಧೆಡೆ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕ್ರೀಡಾಂಗಣಗಳಲ್ಲಿ ಚಿತ್ರೀಕರಣ ನಡೆಸಿದ ವೇಳೆಗೆ ಕ್ರೀಡಾಂಗಣದ ಆಸನಗಳಲ್ಲಿ ಕುಳಿತು ಚಿತ್ರೀಕರಣ ವೀಕ್ಷಿಸಲು ಜನತೆಗೆ ಚಿತ್ರದ ನಿರ್ಮಾಪಕರು ಅವಕಾಶನೀಡಿದ್ದು, ಇದರಿಂದಾಗಿ ಕ್ರೀಡಾಂಗಣ ತುಂಬಿತುಳುಕುತ್ತಿದ್ದು ಚಿತ್ರದ ದೃಶ್ಯಗಳಿಗೆ ಉತ್ತಮ ಕಳೆ ನೀಡಿದೆ.

ಚಕ್ ದೆ ಇಂಡಿಯಾ ಸಿನಿಮಾಗೆ ಸಲೀಂ ಸುಲೈಮಾನ್ ಸಂಗೀತ ನೀಡಿದ್ದಾರೆ. ಜೈದೀಪ್ ಸಾಹ್ನಿಯವರ ಸ್ಕ್ರೀನ್ ಪ್ಲೇ ಆದರೆ, ಮಂದಿರಾ ಶುಕ್ಲಾ ಅವರ ಕಾಸ್ಟ್ಯೂಮ್‌ಗಳು ಚಿತ್ರಕ್ಕೆ ಹೆಚ್ಚಿನ ಮೆರುಗು ನೀಡಿದೆ.

ಎಲ್ಲವೂ ಅಂದುಕೊಂಡಂತೆ ಸಾಗಿದರೆ, ಆಗಸ್ಟ್ ತಿಂಗಳಲ್ಲಿ ಚಲನಚಿತ್ರ ಬಿಡುಗಡೆ ಕಾಣಲಿದೆ.