ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » '8 x 10 ತಸ್ವೀರ್': ಕಳಚಿಬಿದ್ದ ಪ್ರೇಕ್ಷಕರ ಆಶಾಗೋಪುರ (Nagesh Kukunoor enters a new zone with 8 x 10 TASVEER)
ಸಿನಿಮಾ ವಿಮರ್ಶೆ
Feedback Print Bookmark and Share
 
IFM
8 x 10 ತಸ್ವೀರ್ ಚಿತ್ರ ಹುಟ್ಟುಹಾಕಿದ್ದ ನಿರೀಕ್ಷೆ ಚಿತ್ರ ಬಿಡುಗಡೆಯಾಗುವ ಮೂಲಕ ಭಗ್ನಗೊಂಡಿದೆ. ಇದೊಂದು ಬಾಲಿವುಡ್ ಸಸ್ಪೆನ್ಸ್ ಥ್ರಿಲ್ಲರ್. ಅಕ್ಷಯ್ ಕುಮಾರ್, ಆಯೇಷಾ ಟಕಿಯಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಾಗೇಶ್ ಕುಕನೂರ್ ಅವರ ನಿರ್ದೇಶನದ ಈ ಚಿತ್ರದ ಬಗ್ಗೆ ಹಲವರ ನಿರೀಕ್ಷೆಯಿತ್ತು. ಕಥಾವಸ್ತು ಸರಿಯಾದ್ದೇ ಆದರೂ ಚಿತ್ರ ಮಾತ್ರ ಯಾಕೋ ಸ್ವೀಕಾರ ಯೋಗ್ಯವಾಗಿ ಕಾಣುತ್ತಿಲ್ಲ. ಚಿತ್ರ ಮುಗಿಸಿ ಹೊರಬಂದ ಮೇಲೂ ಪ್ರಶ್ನೆಗಳು ಮನದಲ್ಲಿ ಹಾಗೆಯೇ ಉಳಿದುಬಿಡುತ್ತದೆ.

ಚಿತ್ರದ ಕಾನ್ಸೆಪ್ಟ್ ತುಂಬ ಇಂಟರೆಸ್ಟಿಂಗ್ ಆಗಿದೆಯಂತೂ ನಿಜ. ಚಿತ್ರ ನೋಡಲು ಆರಂಭವಾಗುತ್ತಿದ್ದಂತೆ ಕ್ಷಣ ಕ್ಷಣಕ್ಕೂ ಕುತೂಹಲ ಆಳವಾಗುತ್ತಾ ಸಾಗುತ್ತದೆ. ಆದರೆ ನಿರ್ದೇಶಕರ ಮಾತ್ರ ಚಿತ್ರವನ್ನು ಸುಮ್ಮನೆ ಉದ್ದ ಎಳೆಯುತ್ತಾ ಸಾಗಿದ್ದಾರೆ. ಹೀಗಾಗಿ ಚಿತ್ರದ ಕೊನೆಯಲ್ಲಿ ಕುತೂಹಲವೇ ಉಳಿಯುವುದಿಲ್ಲ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಹೇಗಿರಬೇಕೆಂದರೆ, ಕ್ಷಣಕ್ಷಣಕ್ಕೂ ಕುತೂಹಲ ಹುಟ್ಟಿಸಿ ತನ್ನ ಕೊನೆಯ ತನಕವೂ ಸೀಟಿನ ತುದಿಯಲ್ಲಿ ಕೂರಿಸುವಂತೆ ಮಾಡಬೇಕು. ಜತೆಗೆ ಕೊನೆಯಲ್ಲಿ ಪ್ರೇಕ್ಷಕನಲ್ಲಿ ಪ್ರಶ್ನೆಗಳನ್ನು ಉಳಿಸಬಾರದು. ಆದರೆ 8 x 10 ತಸ್ವೀರ್ ಚಿತ್ರ ಹಾಗಾಗಿಲ್ಲ ಅನ್ನೋದೇ ಚಿತ್ರದ ಸೋಲಿಗೆ ಕಾರಣವಾಗಬಹುದು. ಇದು ಸುಮಾರು 20-25 ನಿಮಿಷಗಳ ಕಾಲ ಉಪಾಂತ್ಯ ಹಾಡುವುದು ಮಾತ್ರ ಸಹಿಸಲಾಗುವುದಿಲ್ಲ. ಕೊಲೆಗಾರ ತನ್ನ ಮುಖವಾಡ ತೆಗೆಯುವಾಗ ಪ್ರೇಕ್ಷಕನಿಗೆ ಶಾಕ್ ಬದಲು ಸರ್‌ಪ್ರೈಸ್ ಆಗುತ್ತದೆ. ಕಥೆ ಬರೆದ ಹಾಗೂ ನಿರ್ದೇಶಿಸಿದ ಕೂಕನೂರ್‌ಗೆ ಏನಾಗಿದೆ, ಇಷ್ಟೊಂದು ಬಾಲಿಶವಾಗಿ ಅಂತ್ಯ ಕೊಟ್ಟರಲ್ಲ ಅನಿಸುತ್ತದೆ.

IFM
ಕಥೆ ಹೀಗೆ ಸಾಗುತ್ತದೆ. ಇಲ್ಲಿ ಜೈ(ಅಕ್ಷಯ್ ಕುಮಾರ್‌)ಗೆ ಅತೀಂದ್ರೀಯ ಶಕ್ತಿಯಿರುತ್ತದೆ. ಜೈ ಭಾರತದವನಾದರೂ ಕೆನಡಾದಲ್ಲಿ ಫಾರೆಸ್ಟ್ ರೇಂಜರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಜೈ ಅಪ್ಪನ ಸಾವಿನಿಂದ ಜೈ ಆತ್ಮೀಯರೊಬ್ಬರನ್ನು ಕಳೆದುಕೊಂಡಂತಾಗುತ್ತದೆ. ಇಂತಹ ಖಾಸಗಿ ಜೀವನದಲ್ಲಿ ನಡೆದ ದುರಂತವೇ ಆತನನ್ನು ಆತನಲ್ಲಿರುವ ಅತೀಂದ್ರೀಯ ಶಕ್ತಿಯನ್ನು ಬಳಸಿಕೊಳ್ಳಲು ಪ್ರೇರೇಪಿಸುತ್ತದೆ. ಒಬ್ಬರಿಗೆ ಸೇರಿದ ಯಾವುದಾದರೊಂದು ವಸ್ತು ಮುಟ್ಟಿದರೆ ಸಾಕು, ವಸ್ತುವಿನ ಒಡೆಯ ಹಳೆಯದನ್ನು ಹೇಳುವ ಸಾಮರ್ಥ್ಯ ಜೈಗೆ ಇರುತ್ತದೆ. ಸತ್ತ ಮನುಷ್ಯನ 8 x 10 ಅಳತೆಯ ಫೋಟೋ ನೋಡಿದರೂ ಸಾಕು, ಆತನ ಬದುಕಿನಲ್ಲಿದ್ದ ಗೌಪ್ಯತೆಗಳೂ ಜೈಗೆ ತಿಳಿಯುತ್ತದೆ. ಅಂತಹ ಅತೀಂದ್ರೀಯ ಶಕ್ತಿ ಹೊಂದಿದ್ದ ಜೈಗೆ ಒಂದು ದಿನ 8 x 10 ಅಳತೆಯ ಚಿತ್ರವೊಂದರಿಂದ ಸ್ವತಃ ಅವನದೇ ಹಳೆಯ ಸತ್ಯಗಳು ತಿಳಿಯುತ್ತದೆ. ಆ ಸತ್ಯ ತಿಳಿದ ಮೇಲೆ ಜೈ ಏನು ಮಾಡುತ್ತಾನೆ ಎಂಬುದು ಚಿತ್ರದ ಚಿದಂಬರ ರಹಸ್ಯ.

ಚಿತ್ರದ ಬೇರಿಗೇ ಕೈ ಹಾಕಿದರೆ ಚಿತ್ರದಲ್ಲಿ ಸ್ಪಷ್ಟ ತೊಂದರೆ ಎದ್ದು ಕಾಣುತ್ತದೆ. ಚಿತ್ರವನ್ನು ತೆಗೆದುಕೊಂಡು ಹೋದ ಹಾದಿ ಸರಿಯಾಗಿಲ್ಲ ಎಂಬುದನ್ನು ಹೊರತುಪಡಿಸಿ ನೋಡಿದರೆ ಚಿತ್ರ ಚೆನ್ನಾಗಿಯೇ ಇದೆ. ಆದರೆ, ಇಲ್ಲಿ ಸ್ವತಃ ಚಿತ್ರದ ಕಥೆ ಹೆಣೆದ ಕಥೆಗಾರನಿಗೇ ಸರಿಯಾದ ಕಥೆಯ ಅಂತ್ಯವಿಲ್ಲವೆಂಬುದು ಪ್ರೇಕ್ಷಕನಿಗೆ ಅರ್ಥವಾಗಲು ಹೆಚ್ಚು ಸಮಯ ಬೇಕಿಲ್ಲ.

ತಾಂತ್ರಿಕವಾಗಿ ಚಿತ್ರವನ್ನು ನೋಡುವುದಾದರೆ, ನಾಗೇಶ್ ಕೂಕನೂರ್ ತನ್ನ ಯಶಸ್ಸಿನ ಏಣಿಯಲ್ಲಿ ಎರಡು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದು. ಆದರೆ ಕಥೆಗಾರನಾಗಿ ಕೂಕನೂರ್ ಮಾತ್ರ ಏಣಿಯಿಂದ ಹತ್ತು ಹೆಜ್ಜೆ ಕೆಳಗಿಟ್ಟಿದ್ದಾರೆ ಎಂದು ವಿವರಿಸಿದರೂ ತಪ್ಪಲ್ಲ. ಚಿತ್ರವ್ನನು ತುಂಬ ಸ್ಟೈಲಿಶ್ ಆಗಿ ಚಿತ್ರೀಕರಿಸಲಾಗಿದೆ. ಕೆನಡಾ, ದಕ್ಷಿಣ ಆಫ್ರಿಕಾದ ದಟ್ಟಡವಿಯ ದೃಶ್ಯವೈಭವ ಒಂದು ಕ್ಷಣ ಪ್ರೇಕ್ಷಕನನ್ನು ಕಾಡಿನೊಳಗೆ ಹೊಕ್ಕು ಹೊರಬಂದ ಅನುಭವ ನೀಡಿದರೆ ಆಶ್ಚರ್ಯವಿಲ್ಲ. ವಿಕಾಸ್ ಶಿವರಾಮನ್ ಅವರ ಸಿನೆಮಾಟೋಗ್ರಫಿ ಅದ್ಭುತ. ಚಿತ್ರದಲ್ಲಿ ಸಂಗೀತಕ್ಕೆ ಅಷ್ಟೊಂದು ಮಹತ್ವ ನೀಡಲಾಗಿಲ್ಲ. ಆದರೂ ಮೂರು ಹಾಡುಗಳಿವೆ. ಒಂದು ಚಿತ್ರದ ಆರಂಭದ ಗೀತೆ, ಇನ್ನೊಂದು ರೊಮ್ಯಾಂಟಿಕ್ ಗೀತೆ ಹಾಗೂ ಮತ್ತೊಂದು ಅಂತ್ಯಗೀತೆ ಅಷ್ಟೇ. ಮೂರು ಹಾಡುಗಳೂ ಕೇಳುವಂತಿವೆ.

ಅಕ್ಷಯ್ ಕುಮಾರ್ ನಟನೆಯ ಬಗ್ಗೆ ಎರಡು ಮಾತಿಲ್ಲ. ತಮ್ಮ ಪಾತ್ರವನ್ನು ಚೆನ್ನಾಗೇ ನಿಭಾಯಿಸಿದ್ದಾರೆ. ಈವರೆಗೆ ಅಕ್ಷಯ್ ನಟಿಸಿದ ಚಿತ್ರಗಳ ನಟನೆಗಿಂತ ಈ ಚಿತ್ರದ ನಟನೆ ಅಕ್ಷಯ್‌ಗೆ ಸವಾಲಾಗಿತ್ತು. ಆದರೂ ಅಕ್ಷಯ್ ಉತ್ತಮ ನಟ ಎಂಬುದನ್ನು ಸಾಬೀತುಪಡಿಸಿದ್ದಾರೆ. ಜತೆಗೆ, ಬೇರೆಯೇ ತೆರನಾದ ಚಿತ್ರವೊಂದರಲ್ಲಿ ಅಭಿನಯಿಸಿ ತಾನು ಯಾವುದೇ ನಟನಾ ಪ್ರಯೋಗಕ್ಕೂ ಸಿದ್ಧ ಎಂಬುದನ್ನು ಈ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಆಯೇಷಾ ಟಕಿಯಾ ನಟನೆಯೂ ಸುಲಲಿತ, ಮೋಹಕ. ಉಳಿದಂತೆ, ಶರ್ಮಿಳಾ ಟಾಗೋರ್ ನಟನೆ ಅಚ್ಚುಕಟ್ಟು. ಗಿರೀಶ್ ಕಾರ್ನಾಡ್, ಬೆಂಜಮಿನ್ ಗಿಲಾನಿ, ಅನಂತ್ ಮಹಾದೇವನ್, ರುಶದ್ ರಾಣಾ, ಜಾವೇದ್ ಜಾಫೆರಿ ಎಲ್ಲರೂ ಚಿತ್ರದ ನಟನಾ ವೈಭವಕ್ಕೆ ಯಾವುದೇ ಕುತ್ತು ತಂದಿಲ್ಲ.

ಆದರೂ, ಒಟ್ಟಾರೆ ಹೇಳುವುದಾದರೆ, 8 x 10 ತಸ್ವೀರ್ ಚಿತ್ರ ಪ್ರೇಕ್ಷಕನ ಆಶಾಭಂಗಗೊಳಿಸುವುದಂತೂ ನಿಚ್ಚಳ. ಹೈದರಾಬಾದ್ ಬ್ಲೂಸ್, ಇಕ್ಬಾಲ್ ಚಿತ್ರಗಳ ಮೂಲಕ ನಿರೀಕ್ಷೆ ಹುಟ್ಟುಹಾಕಿದ್ದ ನಾಗೇಶ್ ಯಾಕೋ ಎಡವಿಬಿಟ್ಟರಲ್ಲ ಅಂತನಿಸುತ್ತದೆ.
IFM
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 8 x 10 ತಸ್ವೀರ್, ಅಕ್ಷಯ್ ಕುಮಾರ್, ನಾಗೇಶ್ ಕೂಕನೂರ್, ಆಯೇಶಾ ಟಕಿಯಾ, ಗಿರೀಶ್ ಕಾರ್ನಾಡ್