ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಿನಿಮಾ ವಿಮರ್ಶೆ » ರಜನಿ 'ಎಂದಿರನ್' ಚಿತ್ರವಿಮರ್ಶೆ; ಇದು ಭಾರತೀಯರ ಹೆಮ್ಮೆ (Robot | Enthiran | Rajnikanth | S Shankar)
ಸಿನಿಮಾ ವಿಮರ್ಶೆ
Bookmark and Share Feedback Print
 
ತಾರಾಗಣ: ರಜನಿಕಾಂತ್, ಐಶ್ವರ್ಯಾ ರೈ, ಡ್ಯಾನಿ ಡೆಂಜೊಂಗ್ಪಾ, ಕಲಾಭವನ್ ಮಣಿ, ಕೊಚ್ಚಿನ್ ಹನೀಫಾ
ನಿರ್ದೇಶನ: ಎಸ್. ಶಂಕರ್
ಸಂಗೀತ: ಎ.ಆರ್. ರೆಹಮಾನ್

ನಿರ್ದೇಶಕ ಶಂಕರ್ ಅವರ ಕನಸಿನ ಚಿತ್ರ 'ಎಂದಿರನ್' ಭಾರತೀಯ ಚಿತ್ರರಂಗ ಈ ಹಿಂದೆಂದೂ ಕಾಣದ ಸ್ಪೆಷಲ್ ಎಫೆಕ್ಟ್‌ಗಳೊಂದಿಗೆ ಬೆಳ್ಳಿತೆರೆಗೆ ಅಪ್ಪಳಿಸಿದೆ. ಎಂದಿನಂತೆ ರಜನಿಕಾಂತ್ ಮೇನಿಯಾ ಈ ಬಾರಿಯೂ ಭಾರತದಾದ್ಯಂತ ಸದ್ದು ಮಾಡಿದೆ.

ಹಿಂದಿಯಲ್ಲಿ 'ರೊಬೊಟ್', ತಮಿಳಿನಲ್ಲಿ 'ಎಂದಿರನ್' ಮತ್ತು ತೆಲುಗಿನಲ್ಲಿ 'ರೊಬೊ' ಹೆಸರಿನಲ್ಲಿ ಬಿಡುಗಡೆಯಾಗಿರುವ ಚಿತ್ರದ ಬಜೆಟ್ 162 ಕೋಟಿ ರೂಪಾಯಿಗಳು. ಭಾರತೀಯ ಚಿತ್ರರಂಗದಲ್ಲೇ ಇಷ್ಟು ದೊಡ್ಡ ಮೊತ್ತವನ್ನು ಚಿತ್ರಕ್ಕಾಗಿ ಯಾರೊಬ್ಬರೂ ಹಾಕಿದ ಉದಾಹರಣೆಗಳಿಲ್ಲ. ಅದೆಲ್ಲಕ್ಕಿಂತಲೂ ಕಾಸು ಕಾಸು ಕೊಟ್ಟು ಸಿನಿಮಾ ನೋಡಿದವರಿಗೆ ಮೋಸವಿಲ್ಲ ಎನ್ನುವುದೇ ಹೈಲೈಟ್.

ಚಿತ್ರದ ಹೆಸರೇ ಸೂಚಿಸುವಂತೆ ಇದು ರೊಬೊಟ್ ಮತ್ತು ಮಾನವನ ನಡುವಿನ ಸಂಘರ್ಷವನ್ನೊಳಗೊಂಡ ತ್ರಿಕೋನ ಪ್ರೇಮಕಥೆ. ಸಾಕಷ್ಟು ಸ್ಪೆಷಲ್ ಎಫೆಕ್ಟ್‌ಗಳು, ಥ್ರಿಲ್ಲಿಂಗ್ ದೃಶ್ಯಗಳು ಚಿತ್ರದಲ್ಲಿರುವುದರಿಂದ ಸೀಟಿನ ತುದಿಯಲ್ಲಿ ಕೂರುವ ಸರದಿ ಪ್ರೇಕ್ಷಕರದ್ದಾಗುತ್ತದೆ.

ರೊಬೊಟ್‌ಗಳ ಕುರಿತು ಸಂಶೋಧನೆಯಲ್ಲಿ ನಿರತನಾಗಿರುವ ಡಾ. ವಸೀಗರನ್ (ರಜನಿಕಾಂತ್) ಓರ್ವ ವಿಜ್ಞಾನಿ. ಸತತ ಸಂಶೋಧನೆಯ ಫಲವಾಗಿ ಆತ ಚಿಟ್ಟಿ (ರಜನಿಕಾಂತ್) ಎಂಬ ರೊಬೊಟನ್ನು ತಯಾರಿಸುತ್ತಾನೆ. ಅದರಂತೆ ನಂಬಲಸಾಧ್ಯವಾದ ಕಾರ್ಯವನ್ನು ಮಾಡುವ, ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯ ಈ ಚಿಟ್ಟಿಯದ್ದು. ಅದನ್ನು ಭಾರತೀಯ ರಕ್ಷಣಾ ಪಡೆಗೆ ಸೇರಿಸಬೇಕೆನ್ನುವುದು ವಸೀಗರನ್ ಅಭಿಲಾಷೆ.
IFM

ಆದರೆ ವಸೀಗರನ್ ಗುರು ಬೊಹ್ರಾ (ಡ್ಯಾನಿ) ಆಕ್ಷೇಪಿಸುತ್ತಾನೆ. ಅದಕ್ಕಿರುವ ಕಾರಣ ಚಿಟ್ಟಿಗೆ ಭಾವನೆಗಳೇ ಇಲ್ಲ. ಆತನಿಗೆ ಯಾವುದು ಒಳ್ಳೆಯದು, ಯಾವುದು ಕೆಟ್ಟದೆಂದು ಗುರುತಿಸುವ ಸಾಮರ್ಥ್ಯವಿಲ್ಲ. ಯಾರನ್ನಾದರೂ ಚಿಟ್ಟಿ ಕೊಂದು ಬಿಡಬಹುದು. ಹಾಗಾಗಿ ಸೇನೆಗೆ ಸೇರ್ಪಡೆಗೊಳಿಸಲಾಗದು ಎಂದು ಅಡ್ಡಗಾಲು ಹಾಕುತ್ತಾನೆ.

ತೀವ್ರ ನಿರಾಸೆಗೊಂಡರೂ ಹತಾಶೆಗೊಳಗಾಗದ ವಸೀಗರನ್ ಅದನ್ನೇ ಸವಾಲಾಗಿ ಪರಿಗಣಿಸುತ್ತಾನೆ. ಇದಕ್ಕೆ ಸಾಥ್ ನೀಡುವುದು ಆತನ ವಿದ್ಯಾರ್ಥಿನಿ ಹಾಗೂ ಗೆಳತಿ ಸಾನಾ (ಐಶ್ವರ್ಯಾ ರೈ). ಇಬ್ಬರೂ ಸೇರಿಕೊಂಡು ಚಿಟ್ಟಿಗೆ ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಾರೆ. ಮನುಷ್ಯರ ಭಾವನೆಗಳನ್ನು ಗುರುತಿಸಲು ಅಗತ್ಯವಿರುವ ಬದಲಾವಣೆಗಳನ್ನು ಮಾಡಿ, ಯಶಸ್ವಿಯೂ ಆಗುತ್ತಾರೆ.

ಚಿತ್ರಕ್ಕೆ ತಿರುವು ಲಭಿಸುವುದು ಈ ಹೊತ್ತಿನಲ್ಲೇ. ಭಾವನೆಗಳನ್ನು ಆವಾಹಿಸಿಕೊಂಡ ರೊಬೊಟ್ ಚಿಟ್ಟಿ ತನ್ನ ನಿರ್ಮಾತೃ ವಸೀಗರನ್‌ಗೆ ತಿರುಗಿ ಬಿದ್ದು ಸಾನಾಳನ್ನು ಪ್ರೀತಿಸಲು ಆರಂಭಿಸುತ್ತದೆ. ಎದುರಾಳಿ ಬೊಹ್ರಾನಿಗೂ ಇದೇ ಬೇಕಾಗಿತ್ತು.

ಮುಂದೇನಾಗುತ್ತದೆ, ಚಿಟ್ಟಿಯನ್ನು ವಸೀಗರನ್ ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಾನೆಯೇ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು.

ಅತ್ಯುತ್ತಮ ಕಥೆ, ತಿರುವುಗಳು, ಆಕ್ಷನ್ ಥ್ರಿಲ್ಲಿಂಗ್ ಹೊಂದಿರುವ ಚಿತ್ರ ರಜನಿ ಅಭಿಮಾನಿಗಳಿಗೆ ಬೋರ್ ಹೊಡೆಸದು. ಮೊದಲರ್ಧದಲ್ಲಿ ರೊಬೊಟ್‌ನ ರೋಮಾಂಚನಕಾರಿ ಸಾಹಸಗಳನ್ನು ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ದ್ವಿತೀಯಾರ್ಧ ಅಷ್ಟೊಂದು ಪರಿಣಾಮಕಾರಿ ಎನಿಸದೇ ಕ್ಲೈಮಾಕ್ಸ್ ಎಷ್ಟು ಹೊತ್ತಿಗೆ ಬರುತ್ತದೆ ಎಂಬುದನ್ನು ಕಾಯುವ ಸರದಿ ಪ್ರೇಕ್ಷಕರದ್ದಾಗುತ್ತದೆ.

ಆದರೂ ನಿರ್ದೇಶಕ ಶಂಕರ್ ಕಂಡ ಕನಸು ವ್ಯರ್ಥವಾಗಿಲ್ಲ. ಹಲವು ನಾಯಕರ ಕೈಗಳನ್ನು ಬದಲಾಯಿಸಿದ್ದ ಚಿತ್ರಕಥೆ ರಜನಿಕಾಂತ್ ಕೈ ಸೇರಿದಾಗ ಹಿಂದೆ ಮುಂದೆ ನೋಡದೆ ಒಪ್ಪಿಗೆ ಸೂಚಿಸಿದ್ದ ಚಿತ್ರವಿದು. ಒಂದೇ ವಾಕ್ಯದಲ್ಲಿ ವಿಮರ್ಶೆ ಬರೆಯುವುದಾದರೆ ಜುರಾಸಿಕ್ ಪಾರ್ಕ್, ಸ್ಪೈಡರ್‌ಮ್ಯಾನ್, ಬ್ಯಾಟ್‌ಮನ್, ಸೂಪರ್‌ಹೀರೋ, ಗಾಡ್ಜಿಲಾ, ಟರ್ಮಿನೇಟರ್, ಮ್ಯಾಟ್ರಿಕ್ಸ್, ಅವತಾರ್ ಚಿತ್ರಗಳು ಎಂದಿರನ್ ನೋಡಿದ ನಂತರ ನೆನಪಾಗದೆ ಇರದು.

ಸ್ಪೆಷಲ್ ಎಫೆಕ್ಸ್‌ಗೆ ಗಮನವನ್ನು ಕೇಂದ್ರೀಕರಿಸಿರುವ ಹೊರತಾಗಿಯೂ ಚಿತ್ರಕಥೆಯಲ್ಲಿ ನಿರ್ದೇಶಕ ಶಂಕರ್ ಎಡವಿಲ್ಲ. ಒಂದು ಅರ್ಥಪೂರ್ಣ ಸಂದೇಶವನ್ನೂ ಪ್ರೇಕ್ಷಕರಿಗೆ ನೀಡುತ್ತಾರೆ. ವಸೀಗರನ್, ವೈದ್ಯಕೀಯ ವಿದ್ಯಾರ್ಥಿನಿ ಸಾನಾ ಮತ್ತು ಚಿಟ್ಟಿಯ ನಡುವೆ ನಡೆಯುವ ತ್ರಿಕೋನ ಪ್ರೇಮಕಥೆಗೆ ಮಾನವ-ರೊಬೊಟ್ ಸಂಘರ್ಷವು ಹೊಸ ಆಯಾಮವನ್ನೇ ಸೃಷ್ಟಿಸುತ್ತದೆ.

ರಜನಿ ಎಂದಿನಂತೆ ಬೀಡುಬೀಸು. ಬಾಲಿವುಡ್ ಬೆಡಗಿ ಐಶ್ವರ್ಯಾ ರೈಗೆ ಹೇಳಿ ಮಾಡಿಸಿದ ಪಾತ್ರ. ಅದಕ್ಕೆ ಅವರಿಂದ ನ್ಯಾಯವೂ ಸಂದಿದೆ. ಡ್ಯಾನಿ ನಟನೆ ಬಗ್ಗೆ ಎರಡು ಮಾತಿಲ್ಲ. ಎ.ಆರ್. ರೆಹಮಾನ್ ಸಂಗೀತ ಮತ್ತೆ ಅವರನ್ನು ನೆನಪಿಸುವಂತಿದೆ. ಅದರಲ್ಲೂ ಹಿನ್ನೆಲೆ ಸಂಗೀತವಂತೂ ಥ್ರಿಲ್ಲಿಂಗ್ ಅನುಭವ ನೀಡುತ್ತದೆ. ರತ್ನವೇಲು ಕ್ಯಾಮರಾ ಕೂಡ ಗಮನ ಸೆಳೆಯುತ್ತದೆ.

ಈ ಚಿತ್ರವನ್ನು ನೀವು ನೋಡದೇ ಇದ್ದರೆ, ಅದು ಖಂಡಿತಾ ನಿಮಗಷ್ಟೇ ಆಗುವ ನಷ್ಟವೆನ್ನುವುದು ಖಚಿತ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರೊಬೊಟ್, ಎಂದಿರನ್, ರಜನಿಕಾಂತ್, ಎಸ್ ಶಂಕರ್, ಐಶ್ವರ್ಯಾ ರೈ