ಮುಂಗಾರು ಮಳೆ ಹುಡುಗ ಗಣೇಶ್ ಮದುವೆ ಗಂಡಾಗುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನ ರಾತ್ರಿಯಲ್ಲೇ ಅವರು ದಿಢೀರ್ ಮದುವೆ ಆಗಿ ಅಚ್ಚರಿಯ ಸುದ್ದಿ ನೀಡಿದ್ದಾರೆ.
ಸೋಮವಾರ ರಾತ್ರಿ ನಡೆದ ತರಾತುರಿ ಸಮಾರಂಭದಲ್ಲಿ ಕರಾವಳಿ ಹುಡುಗಿ ಶಿಲ್ಪಾರನ್ನು ಬಾಳ ಸಂಗಾತಿಯನ್ನಾಗಿಸಿಕೊಂಡರು. ಈ ಮೊದಲು ಫೆಬ್ರವರಿ 15ಕ್ಕೆ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಗಣೇಶ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಅನೇಕ ಹುಡುಗಿಯರ ದೂರವಾಣಿ ಕರೆಗಳು ಮಹಾಪೂರವಾಗಿ ಹರಿದು ಬಂತು. ಕೆಲವರಂತೂ 'ತನ್ನನ್ನು ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ' ಎಂಬ ಬೆದರಿಕೆಯನ್ನೂ ಹಾಕಿದ್ದರಂತೆ. ಇನ್ನೂ ಕಾದರೆ ಇನ್ನಷ್ಟು ತೊಂದರೆ ಎಂಬ ಹಿನ್ನೆಲೆಯಲ್ಲಿ ದಿಢೀರ್ ಮದುವೆಯ ನಿರ್ಧಾರ ಮಾಡಿ ನಿನ್ನೆ ರಾತ್ರೋರಾತ್ರಿ ವಧುವಿನ ಮನೆಯಲ್ಲಿ ಸುಮಾರು 9.35ರ ಮುಹೂರ್ತದಲ್ಲಿ ಮದುವೆ ನಡೆಯಿತು.
ಈ ಸರಳ ವಿವಾಹ ಉತ್ಸವದಲ್ಲಿ ಗಣೇಶ್ ಹಾಗೂ ಶಿಲ್ಪಾ ಕುಟುಂಬದ ಕೆಲವೇ ಸಂಬಂಧಿಕರು ಹಾಜರಿದ್ದರು. ಗಣೇಶ್ ಅವರನ್ನು ಪ್ರತಿಭೆಯನ್ನು ಪೂರ್ಣಪ್ರಮಾಣದಲ್ಲಿ ಹೊರಗೆಡವಿದ ನಿರ್ದೇಶಕ ಯೋಗರಾಜ ಭಟ್ ಸಮಾರಂಭದಲ್ಲಿ ಭಾಗವಹಿಸಿ ವಧೂವರರನ್ನು ಆಶೀರ್ವದಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಕ ಕೆ. ಮಂಜು, ಸುಬ್ರಮಣ್ಯ ಮೊದಲಾದ ಗಣ್ಯರಷ್ಟೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ಗಣೇಶ್‌ರನ್ನು ವರಿಸಿರುವ ಶಿಲ್ಪಾ ಮೂಲತಃ ಕರಾವಳಿ ಹುಡುಗಿಯಾದರೂ ಬೆಳೆದಿದ್ದು, ಓದಿದ್ದೆಲ್ಲಾ ಬೆಂಗಳೂರಿನಲ್ಲಿಯೇ. ಈಕೆ ಒಳಾಂಗಣ ವಿನ್ಯಾಸಗಾರ್ತಿಯಾಗಿದ್ದಾರೆ. ಗಣೇಶ್-ಶಿಲ್ಪಾ ನಡುವಿನ ಎರಡು ವರ್ಷಗಳ ಪ್ರೀತಿ ಮದುವೆ ಸಾಫಲ್ಯದಲ್ಲಿ ಮುಂದುವರಿಯಲಿದೆ.
ಉದಯ ಟಿವಿಯ ಕಾಮಿಡಿ ಟೈಮ್ಸ್ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಈ ಹುಡುಗನ ನಂತರದ ಯಶಸ್ಸು ದಾಖಲೆಯದ್ದು. ವಿಶ್ ಯೂ ಹ್ಯಾಪಿ ಮ್ಯೂರೀಡ್ ಲೈಫ್ ಗಣೇಶ್!