ಹೌದು. ದೇವನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಟಿ ರಾಧಿಕಾ ಹಾಗೂ ದೇವೇಗೌಡಿದ್ದಾರೆ. ಹಾಗಂತ ಭಾರೀ ಸುದ್ದಿಯಾಗಿದೆ. ಸುದ್ದಿಯಷ್ಟೇ ಅಲ್ಲ. ವಿವಾದವೂ ಹುಟ್ಟಿಕೊಂಡಿದೆ.
ಇದೆಲ್ಲವೂ ಆಗಿದ್ದು 'ಲಂಡನ್‌ನಲ್ಲಿ ಮಗು ಆಯ್ತು ಮಹಾಮಂತ್ರಿಗೆ... ನಮ್ಮ ರಾಧವ್ವಗೆ...' ಹಾಡಿನಿಂದ. ಇದೇನಪ್ಪಾ ಎಂದು ಹುಬ್ಬೇರಿಸಬೇಡಿ. ಹೌದು. ಇದು ದೇವನಹಳ್ಳಿ ಎಂಬ ಚಿತ್ರದ ಹಾಡಿನ ಸಾಲು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ನಟಿ ರಾಧಿಕಾ ಅವರ ನಡುವೆ ಇದೆ ಎನ್ನಲಾದ ಸಂಬಂಧವನ್ನು ವ್ಯಂಗ್ಯವಾಗಿ ಬಳಸಿರುವ ಹಾಡೊಂದು ಈಗ ವಿವಾದವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ದೇವೇಗೌಡರ ಹೇಳಿಕೆಗಳನ್ನೂ ವ್ಯಂಗ್ಯಕ್ಕೆ ವಸ್ತುವಾಗಿ ಬಳಸಲಾಗಿದೆ.
ವಿವಾದಗಳಿಂದಾಗಿ ಚಿತ್ರವೊಂದು ಭರ್ಜರಿ ಪ್ರಚಾರ ಪಡೆದುಕೊಳ್ಳುವ ಪರಂಪರೆ ಚಿತ್ರರಂಗಕ್ಕೆ ಹೊಸತೇನಲ್ಲ. ಎಲ್ಲ ಭಾಷೆಯ ಚಿತ್ರಗಳಿಗೂ ಇದು ಮಾಮೂಲು. ಕನ್ನಡದಲ್ಲೂ ಈ ಸಂಖ್ಯೆಗೇನೂ ಕೊರತೆಯಿಲ್ಲ. ಸದ್ಯ ಹೌಸ್‌ಫುಲ್ ಚಾಪ್ಲಿನ್ ಪ್ರತಿಮೆಯ ವಿವಾದದಿಂದಾಗಿ ಭಾರೀ ಪ್ರಚಾರ ಗಿಟ್ಟಿಸಿಕೊಂಡು ಬಿಡುಗಡೆಯೂ ಆಗಿದೆ. ರವಿ ಬೆಳೆಗೆರೆ ಅವರ 'ಮುಖ್ಯಮಂತ್ರಿ ಐ ಲವ್ ಯೂ' ಚಿತ್ರ ಇಂಥದ್ದೇ ಕಾರಣಕ್ಕಾಗಿಯೇ ಕೋರ್ಟು ಮೆಟ್ಟಿಲೇರಿದೆ. ಈಗ ಅಂತಹ ಚಿತ್ರಗಳ ಸಾಲಿಗೆ 'ದೇವನಹಳ್ಳಿ' ಚಿತ್ರದ ಸೇರ್ಪಡೆಯೂ ಆಗಿದೆ, ಅಷ್ಟೆ.
MOKSHA
ಈ ಚಿತ್ರದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಚಿತ್ರನಟಿ ರಾಧಿಕಾ ಮೇಲೆ ವಿಡಂಬನಾತ್ಮಕ ಶೈಲಿಯ ಹಾಡೊಂದು ಇರುವುದು ಇದೀಗ ಬೆಳಕಿಗೆ ಬಂದಿದೆ. ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆ ಕುರಿತ ವಿಚಾರದ ಬಗ್ಗೆ ಕಥಾಹಂದರವನ್ನು ಒಳಗೊಂಡಿದೆಯಂತೆ. ಅಲ್ಲದೆ, ಹಾಡಿನಲ್ಲಿ, 'ಕರ್ನಾಟಕದಲ್ಲಿ ದೇವೇಗೌಡ್ರು ಹುಟ್ಟಬಾರದಿತ್ತು...' ಎಂಬ ಸಾಲೂ ಇದೆ. ಈ ಸಾಲನ್ನು ಈ ಹಿಂದೆ ದೇವೇಗೌಡರು, 'ನಾನು ಕರ್ನಾಟಕದಲ್ಲಿ ಹುಟ್ಟಬಾರದಿತ್ತು' ಎಂದಿದ್ದನ್ನು ಆಧರಿಸಿದೆಯಂತೆ.
ಇದೀಗ ದೇವನಹಳ್ಳಿ ಚಿತ್ರದ ಧ್ವನಿಸುರುಳಿ ಬಿಡುಗಡೆಗೊಳ್ಳುವ ಜತೆಗೆ ಚಿತ್ರದ ಹಾಡಿನ ವಿಚಾರವೂ ಬಹಿರಂಗಗೊಂಡಿದೆ.. ಸೆನ್ಸಾರ್ ಮಂಡಳಿಯೂ ಹಾಡುಗಳಿಗೆ ಯಾವುದೇ ಕತ್ತರಿ ಪ್ರಯೋಗ ಮಾಡದೆ ಒಕೆ ಎಂದಿದೆಯಂತೆ. ಹಾಗನ್ನುವುದು ಸ್ವತಃ ಚಿತ್ರದ ನಿರ್ದೇಶಕ ಪಲ್ಲಕಿ ರಾಧಾಕೃಷ್ಣ.
MOKSHA
ಪಲ್ಲಕಿ ರಾಧಾಕೃಷ್ಣ ಅವರು ಚಿತ್ರಕಥೆ ಹೆಣೆದಿರುವ ಈ ದೇವನಹಳ್ಳಿ ನಿರ್ದೇಶನವೂ ಅವರದ್ದೇ. ವಿಚಿತ್ರವೆಂದರೆ, ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ರೆಡ್ಡಿ ಸಹೋದರರಾದ ಜನಾರ್ಧನ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಕರುಣಾಕರ ರೆಡ್ಡಿ ಈ ಚಿತ್ರವನ್ನು ನಾಡಿಗೆ ಸಮರ್ಪಿಸುತ್ತಿದ್ದಾರೆ. ಆದರೆ ನಿರ್ದೇಶಕರೇ ಹೇಳುವಂತೆ, ಶ್ರೀರಾಮುಲು ಅವರ ನನಗೆ ಆತ್ಮೀಯರು. ಆದರೆ ಇದಕ್ಕೆ ಯಾವುದೇ ಬಿಜೆಪಿ ಸಚಿವನೂ ಬಂಡವಾಳ ಹೂಡಿಲ್ಲ. ಬಿಜೆಪಿಗೂ ಈ ಚಿತ್ರಕ್ಕೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೇವನಹಳ್ಳಿಗೂ ಇನ್ನು ಏನೇನು ಕಾದಿದೆಯೋ.. ಆ ದೇವನೇ ಬಲ್ಲ!