ದ್ವಾರಕೀಶ್ ಇದೀಗ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಹೊರಟಿದ್ದಾರೆ. ಚಿತ್ರದ ಹೆಸರು 'ವಿಷ್ಣುವರ್ಧನ್'!
ಇದೇನಪ್ಪಾ ಹೊಸ ಕಥೆ ಎನ್ನಬೇಡಿ. ದ್ವಾರಕೀಶ್ ತಮ್ಮ ಮುಂದಿನ ಚಿತ್ರಕ್ಕೆ ವಿಷ್ಣುವರ್ಧನ್ ಅಂತ ಹೆಸರಿಟ್ಟಿದ್ದಾರೆ. ಚಿತ್ರಕ್ಕೆ ಸುದೀಪ್ ನಾಯಕನಾದರೆ, ಇಬ್ಬರು ನಾಯಕಿಯರಾಗಿ ಭಾವನಾ ಮೆನನ್ ಹಾಗೂ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ. ಆದರೆ, ಈ ಚಿತ್ರ ವಿಷ್ಣುವರ್ಧನ್ ಅವರ ಜೀವನಗಾಥೆ ಎಂದು ಗಾಂಧಿನಗರದಲ್ಲಿ ದೊಡ್ಡ ಸುದ್ದಿ ಹಬ್ಬಿದೆ. ಹಾಗಾಗಿ ಚಿತ್ರ ಆರಂಭಕ್ಕೂ ಮುನ್ನವೇ ವಿಘ್ನ ಎದುಗರಾಗಿದೆ. ಪ್ರಮುಖವಾಗಿ ವಿಷ್ಣುವರ್ಧನ್ ಕುಟುಂಬಕ್ಕೆ ಇದರಿಂದ ಬೇಸರವಾಗಿದೆ ಎನ್ನಲಾಗುತ್ತಿದೆ.
ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಈ ಚಿತ್ರದ ಮೂಲಕ ನಮ್ಮದೊಂದು ಗೌರವ ಸಮರ್ಪಣೆ ಎಂದು ದ್ವಾರಕೀಶ್ ಹೇಳುತ್ತಿದ್ದಾರೆ. ಜೊತೆಗೆ ಚಿತ್ರದ ಹೆಸರನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ವಿಷ್ಣು ಕುಟುಂಬದ ಅನುಮತಿ ಪಡೆದೇ ಚಿತ್ರಕ್ಕೆ ಹೆಸರಿಡಲಾಗುತ್ತದೆ ಎಂದಿದ್ದಾರೆ.
MOKSHA
ಇನ್ನೊಂದೆಡೆ ಈ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿರುವ ದ್ವಾರಕೀಶ್ ಅವರ ಮಗ ಯೋಗೀಶ್ ಹೇಳುವ ಪ್ರಕಾರ, ಈಗಾಗಲೇ ವಿಷ್ಣು ಪುತ್ರಿ ಕೀರ್ತಿ ಬಳಿ ಈ ಬಗ್ಗೆ ಹೇಳಿದ್ದೇವೆ. ಅವರು ಕಥೆಯನ್ನು ಆಲಿಸಿ ಚಿತ್ರಕ್ಕೆ ವಿಷ್ಣುವರ್ಧನ್ ಎಂದು ಹೆಸರಿಡಲು ಒಪ್ಪಿದ್ದಾರೆ. ಇನ್ನು ಭಾರತೀಯವರ ಅನುಮತಿ ಪಡೆಯಬೇಕಷ್ಟೆ. ಆದರೆ ಈ ಚಿತ್ರಕ್ಕೂ ವಿಷ್ಣುವರ್ಧನ್ ಅವರ ಖಾಸಗಿ ಜೀವನಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಚಿತ್ರದ ಕಥೆಯೇ ಬೇರೆ. ಕಥೆಯಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಯೊಬ್ಬರು ತಮ್ಮ ಮಗನಿಗೆ ವಿಷ್ಣುವರ್ಧನ್ ಎಂದು ಹೆಸರಿಡುತ್ತಾರೆ. ಆ ಮಗರಾಯನೇ ವಿಷ್ಣುವರ್ಧನ್. ಆತ ಚಿತ್ರದ ನಾಯಕ. ಈ ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ. ಇಷ್ಟು ಬಿಟ್ಟರೆ ಚಿತ್ರದ ಕಥೆಗೂ ವಿಷ್ಣುವರ್ಧನರಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ಯೋಗೀಶ್.
MOKSHA
ದ್ವಾರಕೀಶ್ ಅವರಿಗೆ ಈ ವಿವಾದದಿಂದ ಸಾಕಷ್ಟು ಬೇಸರವಾಗಿದೆಯಂತೆ. ನಮ್ಮ ಕುಟುಂಬ ವಿಷ್ಣು ಕುಟುಂಬದ ಆಪ್ತ ಕುಟುಂಬ. ಮೊದಲಿನಿಂದಲೂ ವಿಷ್ಣು ನನ್ನ ಗೆಳೆಯ. ಕಳೆದ 20 ವರ್ಷಗಳಲ್ಲಿ ಚಿತ್ರರಂಗದಲ್ಲಿರುವ ನನಗೆ ವಿವಾದ ಸೃಷ್ಟಿಸಿ ಹೆಸರು ಮಾಡೋದು ಬೇಕಿಲ್ಲ. ಹೀಗೆ ಅನಗತ್ಯವಾಗಿ ವಿವಾದ ಮಾಡೋದರಿಂದ ನನಗೆ ಬೇಸರವಾಗಿದೆ ಎನ್ನುತ್ತಾರೆ ದ್ವಾರಕೀಶ್.
ಸದ್ಯ ಈ ಚಿತ್ರ ವಿವಾದವಾಗುವ ಮುನ್ನವೇ ಸದ್ದಿಲ್ಲದೇ ಮುಹೂರ್ತ ಆಚರಿಸಿಕೊಂಡಿದ್ದು, ಇದೀಗ ಸುದ್ದಿ ಮಾಡುತ್ತಿದೆ. ಆದರೆ ಇನ್ನೂ ಚಿತ್ರದ ಹೆಸರನ್ನು ರಿಜಿಸ್ಟರ್ ಮಾಡಿಕೊಂಡಾಗಿಲ್ಲ. ಹಾಗಾಗಿ ಇನ್ನೂ ಅಧಿಕೃತವಾಗಿ ಹೆಸರು ಪ್ರಕಟಗೊಂಡಿಲ್ಲ. ಆದಷ್ಟು ಬೇಗ ಚಿತ್ರ ಇಂಥ ವಿವಾದಗಲಿಂದ ಹೊರ ಬಂದು ಆರಂಭಗೊಳ್ಳಲಿ ಎಂದು ಹಾರೈಸೋಣ.