ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣುವರ್ಧನ ಸಿನಿಮಾ ಮಾಡಿಯೇ ತೀರುತ್ತೇನೆ: ದ್ವಾರಕೀಶ್! (Bharathi Vishnuvardhan | Kannada Movie | Dwarakish)
ಸುದ್ದಿ/ಗಾಸಿಪ್
Bookmark and Share Feedback Print
 
MOKSHA
ಒಂದೆಡೆ ಚಲನಚಿತ್ರ ವಾಣಿಜ್ಯ ಮಂಡಳಿಯೇ ವಿಷ್ಣುವರ್ಧನ ಎಂಬ ಹೆಸರಿಡಲು ಅನುಮತಿ ಕೊಡಲ್ಲ ಅಂತಿದ್ದರೆ, ಇತ್ತ ದ್ವಾರಕೀಶ್ ಖಂಡಿತವಾಗಿಯೂ ನಾನು ವಿಷ್ಣುವರ್ಧನ ಚಿತ್ರ ಮಾಡಿಯೇ ತೀರುತ್ತೇನೆ ಎಂದು ಪಣ ತೊಟ್ಟಿದ್ದಾರೆ. ಹೌದು. ದ್ವಾರಕೀಶ್ ಖಂಡಿತವಾಗಿಯೂ ಈ ಚಿತ್ರ ಮಾಡಿಯೇ ತೀರುತ್ತಾರಂತೆ. ಆದರೆ ಎಲ್ಲರ ಮನವೊಪ್ಪಿಸಿಯೇ ಮಾಡುತ್ತಾರಂತೆ. ಅವರ ಮಾತುಗಳನ್ನು ಅವರ ಬಾಯಲ್ಲೇ ಕೇಳಿ.

''ನನ್ನ ಚಿತ್ರದ ಹೆಸರು ವಿಷ್ಣುವರ್ಧನ್. ವಿಷ್ಣುವರ್ಧನ ಅಲ್ಲ. ವಿಷ್ಣುವರ್ಧನ ಯಾರೊಬ್ಬರ ಸೊತ್ತೂ ಅಲ್ಲ. ಅವರು ಐದು ಕೋಟಿ ಕನ್ನಡಿಗರ ಸೊತ್ತು. ಯಾರು ಬೇಕಾದರೂ ವಿಷ್ಣುವರ್ಧನ ಹೆಸರಿಡಬಹುದು. ಯಾರು ಬೇಕಾದರೂ ವಿಷ್ಣುವರ್ಧನ ಎಂದು ಎದೆ ಮೇಲೆ ಅಭಿಮಾನದಿಂದ ಬರೆದುಕೊಳ್ಳಬಹುದು. ಹೆಸರುಗಳಿಗೆ ಖಂಡಿತ ಕಾಪಿ ರೈಟ್ ಇಲ್ಲ. ಈ ಮೊದಲು ರಾಜ್ ಕುಮಾರ್, ಉಪೇಂದ್ರ ಹೆಸರುಗಳಲ್ಲಿ ಚಿತ್ರ ಬಂದಿಲ್ಲವಾ? ನನ್ನ ಚಿತ್ರಕ್ಕೆ ಮಾತ್ರ ಈ ಅಡ್ಡಿ ಯಾಕೆ?''

''ನಾನು ಇದೇ ಮೊದಲು ವಿಷ್ಣುವರ್ಧನ ಅಂತ ಹೆಸರಿಡುತ್ತಿಲ್ಲ. ನನ್ನ ಚಿತ್ರಗಳಲ್ಲಿ ಎಲ್ಲ ಹೀರೋಗಳ ಹೆಸರೂ ಕೂಡಾ ವಿಷ್ಣುವೇ. ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ವಿಷ್ಣು ಅಂತನೇ ಹೆಸರಿತ್ತು. ಆಗ ತಕರಾರು ಮಾಡದ್ದು, ಈಗ್ಯಾಕೆ?''

''ಭಾರತಿಯವರಲ್ಲಿ ನಾನು ಹೇಳಿದ್ದೇನೆ. ಅವರು, 'ಇದು ವಿಷ್ಣು ಅವರ ಲೈಫ್ ಸ್ಟೋರಿ ಅಲ್ಲ ಅಂತ ಬಾಂಡ್ ಪೇಪರಲ್ಲಿ ಬರೆದು ಕೊಡಿ' ಅಂತ ಹೇಳಿದ್ದಾರಂತೆ. ಬೇಕಾದರೆ ಅದರಲ್ಲೂ ಬರೆದುಕೊಡುತ್ತೇನೆ. ನಾನು ಖಂಡಿತ ಈ ಚಿತ್ರದ ಮೂಲಕ ವಿಷ್ಮು ಅವರ ಲೈಫ್ ಸ್ಟೋರಿ ಹೇಳುತ್ತಿಲ್ಲ. ಈ ಚಿತ್ರದಲ್ಲಿ ವಿಷ್ಣುವರ್ಧನ್ ಜೀವನಕ್ಕೂ ಕಥೆಗೂ ಯಾವುದೇ ಸಂಬಂಧವಿಲ್ಲ. ಚಿತ್ರದ ನಾಯಕನ ತಂದೆ ವಿಷ್ಣು ವರ್ಧನ್ ಅವರ ಅಭಿಮಾನಿಯಾಗಿರುತ್ತಾರೆ. ಅವರು ತಮ್ಮ ಮಗನಿಗೆ ವಿಷ್ಣುವರ್ಧನ ಅಂತ ಹೆಸರಿಡ್ತಾರೆ ಬಿಟ್ಟರೆ ಬೇರ್ಯಾವ ಸಂಬಂಧಾನೂ ಇಲ್ಲ.''

''ನನ್ನ ಬಳಿ ಭಾರತಿ ಹೇಳಿದ್ರು, 'ನನ್ನ ಗಂಡನ ಹೆಸರಿಡ್ಬೇಡಿ' ಅಂತ. ಅದಕ್ಕೆ ನಾನು, 'ನಿಮ್ಮ ಗಂಡನ ಹೆಸರನ್ನು ನಾನಿಟ್ಟಿಲ್ಲ. ನಿಮ್ಮ ಗಂಡನ ಹೆಸರು ಸಂಪತ್ ಕುಮಾರ್, ವಿಷ್ಣುವರ್ಧನ್. ಆದರೆ ನನ್ನ ಚಿತ್ರದ ಹೆಸರು ವಿಷ್ಣುವರ್ಧನ' ಎಂದೆ. 'ರಾಜಾ ವಿಷ್ಣುವರ್ಧನ್ ಅಂತ ಹೆಸರಿಡಿ' ಅಂದರು. ಇಡಲ್ಲ. ವಿಷ್ಣುವರ್ಧನ ಅಂತಲೇ ಇಡ್ತೇನೆ. ನಾನು ಕೇಳಿದೆ ಅವರಲ್ಲಿ, 'ನಾಳೆ ದ್ವಾರಕೀಶ್ ಅಂತ ಯಾರಾದರೂ ಚಿತ್ರ ಮಾಡಿದ್ರೆ ಅದಕ್ಕೆ ನನ್ನ ಹೆಂಡತಿ ಅಂಬುಜ ಬಂದು ವಿರೋಧ ಹೇಳೋದಿಕ್ಕೆ ಆಗುತ್ತಾ?', ಖಂಡಿತ ಇಲ್ಲ.''

''ನಾನು ಖಂಡಿತ ನನ್ನ ವಿಷ್ಣುವರ್ಧನನ್ನು ಬಿಡಲ್ಲ. ವಿಷ್ಣುವರ್ಧನ ನನ್ನ ಗೆಳೆಯ. ಆತ ನನ್ನ ಹೃದಯದಲ್ಲಿದ್ದಾನೆ. ಆತ ಸತ್ತಾಗ ನಾನು ಅತ್ತಷ್ಟು ಯಾರೂ ಅತ್ತಿಲ್ಲ. ನನ್ನ ಹೆತ್ತವರ ಅಗಲಿಕೆಗೂ ನಾನು ಇಷ್ಟು ದುಃಖಿಸಿರಲಿಲ್ಲ. ಆತನ ಸಾವಿನ ಬಗ್ಗೆ ಎಷ್ಟು ನೋವಿದೆಯೆಂದು ನನಗೇ ಗೊತ್ತು. ನನಗೆ ಯಾರನ್ನೂ ಹರ್ಟ್ ಮಾಡುವ ಉದ್ದೇಶವಿಲ್ಲ. ಎಲ್ಲರನ್ನೂ ಒಪ್ಪಿಸಿಯೇ ಈ ಚಿತ್ರ ಮಾಡ್ತೀನಿ. ನನ್ನ ವಿಷ್ಣುವರ್ಧನ್ ಜೀನದಲ್ಲಿ ಎಂದೂ ಸೋತಿಲ್ಲ. ಗೆಲ್ಲುತ್ತಲೇ ಹೋದ. ಜೀವನದುದ್ದಕ್ಕೂ ಸಾಕಷ್ಟು ವಿಲನ್‍‌ಗಳನ್ನು ಎದುರಿಸಿದ. ತೆರೆಯ ಮೇಲೂ ವಿಲನ್‌ಗಳನ್ನು ಎದುರಿಸಿದ. ಇಲ್ಲೂ ಅಷ್ಟೆ. ನನ್ನ ವಿಷ್ಣುವರ್ಧ ಚಿತ್ರಕ್ಕೂ ವಿಲನ್‌ಗಳ ಕಾಟ ಶುರುವಾಗಿದೆ. ಖಂಡಿತ ವಿಷ್ಣುವರ್ಧನ ಇಲ್ಲೂ ಗೆದ್ದೇ ಗೆಲ್ಲುತ್ತಾನೆ. ಯಶಸ್ಸು ಗಳಿಸುತ್ತಾನೆ ಎಂಬ ನಂಬಿಕೆಯಿದೆ. ನನ್ನ ವಿಷ್ಣುವಿಗೆ ಇದು ಪುಟ್ಟ ಕಾಣಿಕೆ.''

''ನನ್ನ ಹೃದಯದಲ್ಲಿ 45 ವರ್ಷದಿಂದ ವಿಷ್ಣುವರ್ಧನ್ ಇದ್ದಾನೆ. ಅದನ್ನೆಲ್ಲಾ ನೀವ್ಯಾಕೆ ಅರ್ಥ ಮಾಡಿಕೊಳ್ತಾ ಇಲ್ಲ. ನನಗೆ ದೇವಸ್ಥಾನ ಕತಟ್ಟೋಕಾಗಲ್ಲ. ನನ್ನನ್ಯಾಕೆ ನಾವು ಅರ್ಥ ಮಾಡಿಕೊಳ್ತಾ ಇಲ್ಲ. ಇದು ಅವನಿಗೆ ನನ್ನ ಪುಟ್ಟ ಕಾಣಿಕೆ. ನನ್ನ ವಿಷ್ಣುವರ್ಧನ ನನ್ನವನು. ಆತ ಎಷ್ಟು ಕಷ್ಟಪಟ್ಟಿದ್ದಾನೆಂದು ನನಗೆ ಗೊತ್ತು. ದೇವರಾಣೆ ಇದಕ್ಕೂ ವಿಷ್ಣು ಲೈಫ್ ಸ್ಟೋರಿಗೂ ಸಂಬಂಧ ಇಲ್ಲ. ರಾಘವೇಂದ್ರ ಸ್ವಾಮಿಯ ಮೇಲೆ ಆಣೆ ಮಾಡಿ ಹೇಳುತ್ತೇನೆ, ಖಂಡಿತಾಗಿಯೂ ಇದರಲ್ಲಿ ವ್ಯಾಪಾರೀ ಉದ್ದೇಶವಿಲ್ಲ. ವಿಷ್ಣು ಹೆಸರಲ್ಲಿ ಹಣ ಮಾಡೋ ಉದ್ದೇಶವಿಲ್ಲ. ವ್ಯಾಪಾರ ಎಂದು ನನ್ನನ್ನು ಕೆಟ್ಟ ದೃಷ್ಟಿಯಿಂದ ದಯವಿಟ್ಟು ನೋಡಬೇಡಿ ಎಂದಿದ್ದಾರೆ ದ್ವಾರಕೀಶ್.''

ಒಟ್ಟಾರೆ ಚಿತ್ರ ಸದ್ಯ ವಾದ ವಿವಾದಗಳ ಸುಳಿಯಲ್ಲಿ ಸಿಲುಕಿದ್ದು, ದ್ವಾರಕೀಶ್ ತಮ್ಮ ಪಟ್ಟನ್ನು ಬಿಟ್ಟಿಲ್ಲ. ಇದು ಯಾವ ಹಾದಿಗೆ ತಿರುವುದು ಪಡೆಯುತ್ತದೆ ಎಂದು ಕಾದು ನೋಡಬೇಕು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ, ಕನ್ನಡ ಸಿನಿಮಾ, ದ್ವಾರಕೀಶ್, ಭಾರತೀ ವಿಷ್ಣುವರ್ಧನ್