ಭಾರತಿ ವಿಷ್ಣುವರ್ಧನ್ ತೀವ್ರ ನೊಂದಿದ್ದಾರೆ. ದ್ವಾರಕೀಶ್ ಅವರು ವಿಷ್ಣುವರ್ಧನರ ಹೆಸರಿನಲ್ಲಿ ವ್ಯಾಪಾರೀ ದೃಷ್ಟಿಯಲ್ಲಷ್ಟೇ ಚಿತ್ರ ಮಾಡುತ್ತಿದ್ದಾರೆಂಬುದು ನನಗೊತ್ತು ಎಂದು ಭಾರತಿ ಹೇಳಿದ್ದಾರೆ.
ದ್ವಾರಕೀಶ್ ಅವರು ಯಾವ ಸೀಮೆ ಸ್ನೇಹಿತ ಹೇಳಿ. ಅವರು ಎಂಥಾ ಸ್ನೇಹಿತ ಅಂತ ನನಗೆ ಚೆನ್ನಾಗಿ ಗೊತ್ತು. ಇದು ವನ್ ಸೈಡೆಡ್ ಸ್ನೇಹ. ನನ್ನ ಯಜಮಾನರು ಮಾತ್ರ ಅವರನ್ನು ಇಷ್ಟಪಡೋರು. ವಿಷ್ಣು ಅವರು ದ್ವಾರಕೀಶನ್ನ ತುಂಬ ಇಷ್ಟಪಟ್ಟರು. ಆದರೆ ದ್ವಾರಕೀಶ್‌ಗೆ ಕೇವಲ ವ್ಯಾಪಾರೀ ದೃಷ್ಟಿ ಇತ್ತು ಎನ್ನುತ್ತಾರೆ ಭಾರತಿ.
ಇದನ್ನು ನಾನು ವಿವಾದ ಮಾಡಿದ್ದಲ್ಲ. ಅವರು ವಿವಾದ ಮಾಡಿದಾರೆ. ನನಗೆ ದ್ವಾರಕೀಶ್ ಅವರು ಮೊನ್ನೆಯಷ್ಟೆ ಬಂದು ಚಿತ್ರದ ಬಗ್ಗೆ ಹೇಳಿದರು. ವಿಷ್ಣುವರ್ಧನ ಅಂತ ಟೈಟಲ್ ಬೇಡ, ತೆಗೀರಿ ಎಂದೆ. ಅದಕ್ಕೆ ಒಪ್ಪಿಕೊಂಡರು. ಆದರೆ ಪೇಪರುಗಳಲ್ಲೆಲ್ಲಾ, ಚಿತ್ರದ ಹೆಸರು ವಿಷ್ಣುವರ್ಧನ ಅಂತಿದೆ. ಓದಿ ಬೇಸರವಾಯಿತು. ಇಲ್ಲಿ ನನ್ನ ಬಳಿ ಒಪ್ಪಿ ಹೋದವರು ನಂತರ, ಹೆಸರನ್ನೂ ಬದಲಾಯಿಸದೆ, ನಾನಿನ್ನೂ ಭಾರತಿಯವರಲ್ಲಿ ಮಾತಾಡಿಲ್ಲ ಎಂದು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದು ನೋಡಿ ಶಾಕ್ ಆಯಿತು. ಹೀಗೆಲ್ಲಾ ಸುಳ್ಳು ಹೇಳಿದರು ಎಂದರು ಭಾರತಿ.
ದ್ವಾರಕೀಶ್ ಹಾಗೂ ವಿಷ್ಣು ಸಂಬಂಧ ನನಗೆ ಗೊತ್ತು. ಜನರಿಗೂ ಗೊತ್ತು. ಇಂಟರ್ ವ್ಯೂಗಳಲ್ಲೇ ನೋಡಬಹುದು. ಅವರು ಮಾತಾಡುವ ಶೈಲಿಯಲ್ಲೇ ಗೊತ್ತಾಗುತ್ತೆ. ದ್ವಾರಕೀಶ್ ಅವರಿಗೆ ಅವರು ಮಾಡಿದ ಒಂದು ಪ್ರಕರಣ ಇನ್ನೂ ಕ್ಯಾನ್ಸರ್ ಥರ ಕೊರಿತಾ ಇದೆ. ಅದನ್ನು ನಾನೀಗ ಬಾಯ್ಬಿಟ್ಟರೆ ಕಥೆನೇ ಬೇರೆ ಆಗುತ್ತೆ. ಆದರೆ, ಅವೆಲ್ಲಾ ಯಾಕೆ ಬೇಕು ಅಂಥ ಹೇಳಲ್ಲ ಎಂದು ನೋವಿನಲ್ಲಿ ಭಾರತಿ.
ರಾಘವೇಂದ್ರ ಸ್ವಾಮಿಯ ಮೇಲೆ ಆಣೆ ಮಾಡಿ ಅವರು ಹೇಳಿದ್ದಾರಲ್ಲ, ಎಂದರೆ ಭಾರತಿ ಅವರು, ಅವರಿಗೆ ದೇವರ ಮೇಲೆ ಆಣೆ ಮಾಡೋದು ಅವರಿಗೆ ಅಭ್ಯಾಸ. ಅವರೇನೆಂದು ನನಗೆ ಗೊತ್ತು. ಅವರ ಮಾತು ಸರಿ ಇಲ್ಲ. ಮನುಷ್ಯನಿಗೆ ಮೊದಲು ಬೇಕಾದುದು ಮಾತು. ಸರಿಯಾದ ಮಾತಿರಬೇಕು. ಕೊಟ್ಟ ಮಾತಿಗೆ ತಪ್ಪಬಾರದು. ವಿಷ್ಣು ಯಾವತ್ತೂ ಮಾತಿಗೆ ತಪ್ಪಿದವರಲ್ಲ. ಹೀಗೆಲ್ಲಾ ಇದ್ದರೂ ವಿಷ್ಣು ಅಂದೊಮ್ಮೆ ದ್ವಾರಕೀಶ್ ಅವರ ಪರಿಸ್ಥಿತಿ ನೋಡಿ ಆಪ್ತ ಮಿತ್ರ ಮಾಡಿ ಕೊಡಲು ಒಪ್ಪಿದರು. ಚಿತ್ರ ದ್ವಾರಕೀಶ್‌ಗೆ ಭರ್ಜರಿ ಹಣವನ್ನು ತಂತು. ಆದರೆ ಒಂದೇ ಒಂದು ಫಂಕ್ಷನ್ ಮಾಡಲಿಲ್ಲ. ಯಾಕೆ ಮಾಡಿಲ್ಲ. ನಿರ್ದೇಶಕ ಪಿ. ವಾಸು ಫಂಕ್ಷನ್ ಮಾಡಿದ್ರು ಎಂದರು ಭಾರತಿ.
ಸುದೀಪ್ ಈ ಚಿತ್ರದ ಬಗ್ಗೆ ನನಗೆ ಫೋನ್ ಮಾತಾಡ್ತಾರೆ ಎಂದರು. ಮಾಡಲಿ ಎಂದೆ, ಮಾಡಿಲ್ಲ. ಯಾಕೆ ಮಾಡಿಲ್ಲ ಹೇಳಿ. ಸುದೀಪ್ ಒಂದೇ ಒಂದು ಮಾತು ಹೇಳಿದ್ದರೆ ಇವೆಲ್ಲವನ್ನೂ ತಪ್ಪಿಸಬಹುದಾಗಿತ್ತು. ನನಗಿನ್ನೂ ಸುದೀಪ್ ಬಗ್ಗೆ ಗೌರವವಿದೆ. ಅವರೆಲ್ಲ ನಮ್ಮ ಹುಡುಗರು. ನನಗೆ ಅವರ ಮೇಲೆ ಪ್ರೀತಿ ಇದೆ. ನೋಡೋಣ. ಚಿತ್ರಕ್ಕೆ ಈ ಹೆಸರಿಡಲು ಮಾತಚ್ರ ನನಗೆ ಇಷ್ಟವಿಲ್ಲ. ನಾವ್ಯಾರ ತಂಟೆಗೂ ಬಂದಿಲ್ಲ. ದಯವಿಟ್ಟು ನಮ್ಮ ತಂಟೆಗೂ ಬರಬೇಡಿ ಎಂದರು ಭಾರತಿ.
ವಿಷ್ಣು ಹೋಗಿ ಇನ್ನೂ ಆರು ತಿಂಗಳಾಗಿಲ್ಲ. ಅಷ್ಟರಲ್ಲೇ ಇಷ್ಟೆಲ್ಲ. ಇಂಥಾ ಸಮಯದಲ್ಲಿ ನಮಗೆ ಹೀಗಾ ಮಾಡೋದು. ನನ್ನನ್ನು ಇಂಥ ಸಮಯದಲ್ಲಿ ನೋವು ಮಾಡಿದರೆ ಅವರಿಗೆ ಖಂಡಿತ ಒಳ್ಳೆಯದಾಗಲ್ಲ ಎಂದು ಬೇಸರಿಸಿಕೊಂಡರು.