'ನಮ್ಮ ಚಿತ್ರ ನೂರಿಪ್ಪೈದು ದಿನಗಳ ಪ್ರದರ್ಶನ ಕಂಡಿದೆಯೆಂಬುದು ನಿಜವಾದರೂ, ನಾವು ಈ ನಾನು ನನ್ನ ಕನಸು ಚಿತ್ರದಿಂದ ದುಡ್ಡು ಮಾತ್ರ ಮಾಡಲಾಗಲಿಲ್ಲ ಎಂಬುದೂ ನಿಜ.' ಹೀಗಂದಿದ್ದು ಪ್ರಕಾಶ್ ರೈ.
ನಾನು ನನ್ನ ಕನಸು 125 ದಿನಗಳ ಓಟವನ್ನಂತೂ ಕಂಡಿದೆ. ಹಾಗಂತ ಈ ಚಿತ್ರ ಭರ್ಜರಿ ಲಾಭವನ್ನ ನಿರ್ಮಾಪಕರಿಗೆ ತಂದುಕೊಟ್ಟಿದೆಯೆಂದರೆ ಅದು ಸುಳ್ಳು. ಯಾಕೆಂದರೆ, ಮೂಲಗಳ ಪ್ರಕಾರ, ನಾನು ನನ್ನ ಕನಸು ಚಿತ್ರದಿಂದಾಗಿ ಸುಮಾರು 70 ಲಕ್ಷ ರೂಪಾಯಿಗಳಷ್ಟು ಪ್ರಕಾಶ್ ರೈ ಅವರಿಗೆ ನಷ್ಟವಾಗಿದೆ!
ನಾನು ನನ್ನ ಕನಸು ಚಿತ್ರ 125 ದಿನ ಆಚರಿಸಿದ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಪ್ರಕಾಶ್ ರೈ, ನಾವು ಈ ಚಿತ್ರದ ಮೂಲಕ ದುಡ್ಡು ಗಳಿಸಿಲ್ಲ. ಆದರೂ ಒಂದು ಸದಭಿರುಚಿಯ ಚಿತ್ರ ಮಾಡಿದ್ದಕ್ಕಾಗಿ ಈ ಸಂಭ್ರಮಾಚರಣೆ ಎಂದರು ಪ್ರಕಾಶ್ ರೈ.
ನಾನು ಸ್ವಲ್ಪ ಹಣ ಇಂದು ಕಳೆದುಕೊಂಡಿರಬಹುದು. ಆದರೆ ಅದನ್ನು ಭರಿಸುವಷ್ಟು ಶಕ್ತಿ ನನ್ನಲ್ಲಿದೆ. ಹಾಗಾಗಿ ಯಾುದೇ ತೊಂದರೆಯಾಗಲಿಲ್ಲ. ಕನ್ನಡ ಪ್ರೇಕ್ಷಕನೇ ನನಗೀಗ ಅಂತಹ ನಷ್ಟವನ್ನು ಭರಿಸುವ ಶಕ್ತಿ, ತಾಳ್ಮೆ ನೀಡಿದ್ದಾನೆ ಎಂದರು.
ಸಿಕ್ಕಾಪಟ್ಟೆ ಕಮರ್ಷಿಯಲ್ ಚಿತ್ರಗಳನ್ನೇ ಮಾಡುವ ಮೂಲಕ ಖಂಡಿತವಾಗಿ ನಾನು ದುಡ್ಡು ಗಳಿಸಬಹುದೆಂದು ನನಗೆ ಗೊತ್ತು. ಇಂತಹುಗಳನ್ನು ಪ್ರೇಕ್ಷಕನೂ ನನ್ನ ಬಳಿಯಿಂದ ಅಪೇಕ್ಷಿಸುತ್ತಾನೆಂದು ಗೊತ್ತು. ಆದರೆ ನನ್ನ ಚೊಚ್ಚಲ ಚಿತ್ರದಲ್ಲೇ ಅದನ್ನು ಮಾಡೋದು ನನಗೆ ಇಷ್ಟವಿರಲಿಲ್ಲ ಎಂದರು ಪ್ರಕಾಶ್ ರೈ.
ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕನ್ನಡದಲ್ಲಿ ನಿರ್ದೇಶಿಸಲಿದ್ದೇನೆ. ನನ್ನ ನಿರ್ಮಾಣದ್ಲಲಿ ಬರುವ ಇನ್ನು ಏಳು ಚಿತ್ರಗಳ ಪೈಕಿ ಎರಡು ಕನ್ನಡದಲ್ಲೇ ಬರಲಿವೆ. ಈ ಚಿತ್ರಗಳ ಮೂಲಕ ಕನ್ನಡಕ್ಕೆ ಇನ್ನಷ್ಟು ಉತ್ತಮ ಚಿತ್ರ ನೀಡಲು ಬಯಸುತ್ತೇನೆ ಎಂದರು ಪ್ರಕಾಶ್ ರೈ.