ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಷ್ಣು ಜನ್ಮದಿನ: ಅಭಿಮಾನ್‌ನಲ್ಲಿ ಅಭಿಮಾನಿಗಳ ಹೊಳೆ (Vishuvardhan | Abhiman Studio | Sahasa Simha | Kannada film industry)
ಸುದ್ದಿ/ಗಾಸಿಪ್
Bookmark and Share Feedback Print
 
NRB
ಕಳೆದ ವರ್ಷ 'ಅವರು' ಇದ್ದರು. ಈ ವರ್ಷ ಇಲ್ಲ! ಹೌದು. ಎಷ್ಟು ವಿಚಿತ್ರ ನೋಡಿ... ಇಂದು ನೋಡಿದ ಮನುಷ್ಯ ನಾಳೆಯಿಲ್ಲ. ಇದು ಸೃಷ್ಟಿ ನಿಯಮ, ಇದಕ್ಕೆ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲ ನಿಜ. ಆದರೆ ವಿಷ್ಣು ಬಗ್ಗೆ ಯೋಚಿಸುವಾಗ ಹೀಗನಿಸುವುದು ಸಹಜ. ಕಳೆದ ವರ್ಷ ಇದೇ ಸಮಯಕ್ಕೆ ಹುಟ್ಟುಹಬ್ಬದ ದಿನ ಮಾಧ್ಯಮದ ಮಂದಿಯನ್ನೆಲ್ಲ ಕರೆದು ಅವರೊಂದಿಗೆ ತನ್ನ ಹೃದಯಾಂತರಾಳದ ಭಾವನೆಗಳೆಲ್ಲವನ್ನೂ ಹಂಚಿಕೊಂಡಿದ್ದರು. ಅವರು ಹೀಗೆ ಮಾಧ್ಯಮದ ಮುಂದೆ ಮಾತನಾಡುವುದು ತೀರಾ ಕಡಿಮೆ. ಆದರೆ ಕಳೆದ ವರ್ಷ ಮಾತನಾಡಿದ್ದರು. ಆದರೆ ಈ ವರ್ಷ ಅವರೇ ಇಲ್ಲ.

ಹೌದು. ಅವರು 'ವಿಷ್ಣುವರ್ಧನ'! ಕನ್ನಡ ಚಿತ್ರರಂಗದ ಧೀಮಂತ ತಾರೆ ವಿಷ್ಣುವರ್ಧನ ಅವರ 60ನೇ ಜನ್ಮದಿನವಿಂದು. ಆದರೆ 60 ಕಾಣುವ ಮೊದಲೇ ಶಾಂತವಾಗಿ ಕಣ್ಮುಚ್ಚಿದರು. ಹೇಳದೆ ಕೇಳದೆ ಹಾಗೆ ಬಿಟ್ಟುಹೋದರು. ಹೋದಾಗ ಅವರು ಬಿಟ್ಟಿದ್ದು ತನ್ನ ಅತ್ಯದ್ಭುತ ಕಲಾ ಸೇವೆಯನ್ನು. ಅದಿಂದೂ ಜೀವಂತವಾಗಿದೆ. ಹಾಗಾಗಿ ಕನ್ನಡ ಚಿತ್ರರಂಗದಲ್ಲಿ ವಿಷ್ಣು ಇನ್ನೂ ನೆಲೆಸಿದ್ದಾರೆ ಅಂತನ್ನಿಸಿದರೆ ಅದು ಅತಿಶಯೋಕ್ತಿಯಲ್ಲ.

ಕನ್ನಡ ಚಿತ್ರರಂಗ ಸಂಪತ್ತು ಈ ಸಂಪತ್ ಕುಮಾರ! ಹೌದು, ವಿಷ್ಣು ಅವರ ಮೊದಲ ಹೆಸರು ಸಂಪತ್ ಕುಮಾರ. ಈ ಸಂಪತ್ತೀಗ ನಮ್ಮಲ್ಲಿಲ್ಲವಾದರೂ, ಅವರು ಬಿಟ್ಟುಹೋದ ಅಪಾರ ಸಂಪತ್ತು ನಮ್ಮದು ಎಂದು ಹೇಳಿಕೊಳ್ಳುವ ಹೆಮ್ಮೆ ನಮ್ಮದು ಎಂಬುದೂ ನಿಜ. ನಾಗರಹಾವು ಚಿತ್ರದಿಂದ ತೀರಾ ಇತ್ತೀಚಿನ ಆಪ್ತರಕ್ಷಕದವರೆಗೆ ವಿಷ್ಣು ಹಲವಾರು ಪಾತ್ರಗಳಲ್ಲಿ ಮೇಳೈಸಿ 200 ಚಿತ್ರಗಳಲ್ಲೂ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿದವರು.

ಅಭಿಮಾನ್‌ನಲ್ಲಿ ಅಭಿಮಾನಿಗಳ ಹೊಳೆ: ಕಲಾವಿದನಿಗೆ ಅಭಿಮಾನಿಗಳಿಗಿಂತ ದೊಡ್ಡ ದೇವರಿಲ್ಲ ಅನ್ನೋದು ಇದಕ್ಕೇ ಇರಬೇಕು. ಯಾಕೆಂದರೆ, ಈ ಮಾತಿಗೆ ತಕ್ಕಂತೆ, ಅಪ್ಪಟ ಸಾಕ್ಷಿಯಾದದ್ದು ಇಂದು (ಸೆ.18) ಅಭಿಮಾನ್ ಸ್ಟುಡಿಯೋ. ವಿಷ್ಣು ಅವರ ಸಾವಿರಾರು ಅಭಿಮಾನಿಗಳು ಇಂದು ವಿಷ್ಣು ಅವರು ಮಣ್ಣಾದ ಸ್ಥಳದಲ್ಲಿ ನೆರೆದು ವಿಷ್ಣುಗೆ ತಮ್ಮ ಅಭಿಮಾನವನ್ನು ಅರ್ಪಿಸಿದರು. ಸಮಾಧಿಯಲ್ಲಿ ಬೆಳಿಗ್ಗೆಯೇ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಕುಟುಂಬ ವರ್ಗ ತೆರಳಿ ಪೂಜೆ ಸಲ್ಲಿಸಿ ವಿಷ್ಣು ಹುಟ್ಟುಹಬ್ಬವನ್ನು ಆಚರಿಸಿದರು.

ಇನ್ನೊಂದೆಡೆ ವಿಷ್ಣು ನೆನಪಿಗಾಗಿ ಕುಟುಂಬ ವರ್ಗ ನಡೆಸುತ್ತಿರುವ 'ಸಿಂಹಾವಲೋಕನ'- ವಿಷ್ಣುವರ್ಧನ್ ಚಲನಚಿತ್ರೋತ್ಸವಕ್ಕೆ ವಿಷ್ಣು ಅಭಿಮಾನಿಗಳು ಬಂದು ಹಿರಿತೆರೆಯಲ್ಲಿ ತಮ್ಮ ನಾಯಕನ ಅಭಿನಯ ಚಾತುರ್ಯವನ್ನು ಕಣ್ತುಂಬಿಕೊಂಡು ಹೋಗುತ್ತಿದ್ದಾರೆ. ಇನ್ನೊಂದೆಡೆ, ವಿಷ್ಣು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕ ಜನ್ಮದಿನದ ಅಂಗವಾಗಿ ಕುಟುಂಬ ವರ್ಗ ನೀಡಿದ ಪ್ರಸಾದ (ಅನ್ನಸಂತರ್ಪಣೆ) ವಿತರಣೆಯಲ್ಲಿ ಪಾಲ್ಗೊಂಡರು.

ಭಾನುವಾರ ಸಂಜೆ ( ಸೆ.19)ರಂದು ಸಿಂಹಾವಲೋಕನಕ್ಕೆ ತೆರೆ ಬೀಳಲಿದ್ದು ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ಶತ್ರುಘ್ನ ಸಿನ್ಹಾ, ವಿಷ್ಣು ಗೆಳೆಯ ಅಂಬರೀಷ್, ಸುಮಲತಾ ಮತ್ತಿತರರು ಭಾಗವಹಿಸಲಿದ್ದಾರೆ. ವಿಷ್ಣು ಕುಟುಂಬದ ವಿಭಾ ಚಾರಿಟೆಬಲ್ ಟ್ರಸ್ಟ್ ಮೂಲಕ ನೇತ್ರದಾನ, ಚಲನಚಿತ್ರೋತ್ಸವ, ರಕ್ತದಾನ ಶಿಬಿರ ಮತ್ತಿತರ ಕಾರ್ಯಗಳು ನಡೆಯುತ್ತಿವೆ. ಲಲಿತ ಕಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವೂ ನೀಡಲಾಗುತ್ತಿದೆ. ವಿಭಾ ಇನ್ನಷ್ಟು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ಈ ಸುದ್ದಿಗಳನ್ನೂ ಓದಿ...
ವಿಷ್ಣು ನಿಧನದ ಸಂದರ್ಭ ವೆಬ್‌ದುನಿಯಾ ಸಲ್ಲಿಸಿದ ಅಕ್ಷರ ನಮನ
'ಸಿಂಹಾವಲೋಕನ': ವಿಷ್ಣು ಅಭಿಮಾನಿಗಳಿಗೆ ಉಚಿತ ಸಿನಿಮಾ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಷ್ಣುವರ್ಧನ್, ಅಭಿಮಾನ್, ಸಂಪತ್ ಕುಮಾರ್, ಸಾಹಸಸಿಂಹ, ಕನ್ನಡ ಚಿತ್ರರಂಗ