ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಗುರುಶಿಷ್ಯರು' ಖ್ಯಾತಿಯ ಹಾಸ್ಯನಟ ರತ್ನಾಕರ್ ಇನ್ನಿಲ್ಲ (Rathnakar | Kannada Cinema | Comedy)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ರತ್ನಾಕರ್ ನಿಧನರಾಗಿದ್ದಾರೆ. ಮೈಸೂರಿನಲ್ಲಿ ಮಂಗಳವಾರ ನಿಧನ ಹೊಂದಿದ ಅವರು, ಕಿಡ್ನಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. 1931ರ ಏಪ್ರಿಲ್ 11ರಂದು ಜನಿಸಿದ ರತ್ನಾಕರ್‌ಗೆ 79 ವರ್ಷ ವಯಸ್ಸಾಗಿತ್ತು.

ಕಳೆದ 65 ವರ್ಷಗಳಿಂದ ರಂಗಭೂಮಿ ಹಾಗೂ ಸಿನಿಮಾ ರಂಗದಲ್ಲಿ ಸೇವೆ ಸಲ್ಲಿಸಿದ್ದ ಇವರು, ಕನ್ನಡದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಭಕ್ತ ಕನಕದಾಸ, ನಂದಾದೀಪ, ವೀರ ಕೇಸರಿ, ರತ್ನ, ಕರುಳಿನ ಕರೆ, ಗುರು ಶಿಷ್ಯರು, ಭಾಗ್ಯ ದೇವತೆ, ಶನಿ ಪ್ರಭಾವ ಸೇರಿದಂತೆ ಹಲವು ಚಿತ್ರಗಳಲ್ಲಿ ಇವರು ಮನೋಜ್ಞವಾಗಿ ನಟಿಸಿದ್ದಾರೆ. ಓಹಿಲೇಶ್ವರ, ದಶಾವತಾರ, ಭಕ್ತ ಕನಕದಾಸ, ಭಾಗ್ಯ ದೇವತೆ, ಭಾಂದವ್ಯ, ಶಶಿ ಪ್ರಭಾವ ಮತ್ತಿತರ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ.

ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಷ್,ದ್ವಾರಕೀಶ್ ಸೇರಿದಂತೆ ಕನ್ನಡದ ದಿಗ್ಗಜರ ಜೊತೆಗೆ ನಟಿಸಿದ್ದ ರತ್ನಾಕರ್, ತನ್ನ ವಿಶಿಷ್ಠ ಕಂಠದಿಂದಲೇ ಚಿತ್ರರಂಗದಲ್ಲಿ ಖ್ಯಾತಿವೆತ್ತವರು. ಕೊಲ್ಲೂರು ಮುಕಾಂಬಿಕಾ ದೇವಸ್ಥಾನದ ಅರ್ಚಕರ ಕುಟುಂಬದಲ್ಲಿ ಜನಿಸಿದರೂ ಆಕಸ್ಮಿಕವಾಗಿ ರಂಗಭೂಮಿಗೆ ಬಂದವರು ರತ್ನಾಕರ್.

ಮೂಲತಃ ಕೊಲ್ಲೂರಿನವರಾದ ರತ್ನಾಕರ್, ವಿಚಿತ್ರ ಪ್ರಪಂಚ ಎಂಬ ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಗುರು ಶಿಷ್ಯರು ಚಿತ್ರದ ಅಭಿನಯಕ್ಕಾಗಿ ಅವರಿಗೆ ಸಾಕಷ್ಟು ಜನಮನ್ನಣೆ ದಕ್ಕಿತ್ತು. ಆರ್ಥಿಕ ಸಂಕಷ್ಟವಿದ್ದ ರತ್ನಾಕರ್ ಇತ್ತೀಚಿನ ಕೆಲ ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಇವೆಲ್ಲ ಗೊತ್ತಿದ್ದರೂ, ಕೆಲವೇ ಕೆಲ ಕಲಾವಿದರು ಮಾತ್ರ ಅವರ ಮನೆಗೆ ಭೇಟಿ ನೀಡಿ ಧನ ಸಹಾಯ ಮಾಡಿದ್ದರು. ಇತ್ತೀಚೆಗೆ ನಟ ದರ್ಶನ್ ರತ್ನಾಕರ್ ಅವರ ಮನೆಗೆ ಭೇಟಿ ನೀಡಿ 25,000 ರೂ ಧನ ಸಹಾಯ ನೀಡಿದ್ದರು. ಕನ್ನಡದ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕೂಡಾ 5,000 ರೂಪಾಯಿ ಧನ ಸಹಾಯ ಮಾಡಿತ್ತು.

ಕನ್ನಡ ಚಿತ್ರರಸಿಕರನ್ನು ಹಲವು ದಶಕಗಳ ನಗಿಸಿ ರಂಜಿಸಿದ ರತ್ನಾಕರ್ ತಮ್ಮ ಅಂತಿಮ ದಿನಗಳಲ್ಲಿ ಆರ್ಥಿಕ ಸಂಕಷ್ಟದಲ್ಲಿ ಇವರು ಬಳಲುವಂತಾಗಿದ್ದು ಮಾತ್ರ ವಿಪರ್ಯಾಸ. ಈ ಮೇರು ನಟ ಆತ್ಮಕ್ಕೆ ಶಾಂತಿ ಲಭಿಸಲಿ ಎಂದೇ ಹಾರೈಸೋಣ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರತ್ನಾಕರ್, ಹಾಸ್ಯ, ಗುರು ಶಿಷ್ಯರು, ಕನ್ನಡ ಸಿನಿಮಾ