ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಪ್ರತಿಭಾವಂತ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಇನ್ನಿಲ್ಲ (Vaishali Kasaravalli | Theatre | Kannada Cinema | Girish Kasaravalli)
ಸುದ್ದಿ/ಗಾಸಿಪ್
Bookmark and Share Feedback Print
 
PR
ಕನ್ನಡದ ಪ್ರತಿಭಾವಂತ ಹಿರಿಯ ನಟಿ, ನಿರ್ದೇಶಕಿ, ವಸ್ತ್ರ ವಿನ್ಯಾಸಕಿ ವೈಶಾಲಿ ಕಾಸರವಳ್ಳಿ ಸೋಮವಾರ (ಸೆ.27) ಸಂಜೆ ಸುಮಾರು 5.30ಕ್ಕೆ ನಿಧನ ಹೊಂದಿದ್ದಾರೆ. ಕಿಡ್ನಿ ಸೇರಿದಂತೆ ಹಲವು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದ ವೈಶಾಲಿ ಕಾಸರವಳ್ಳಿ ಪತಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಮಗಳು ಅನನ್ಯಾ ಕಾಸರಳ್ಳಿ, ಮಗನನ್ನು ಅಗಲಿದ್ದಾರೆ. ಮೂಲತಃ ಗುಲ್ಬರ್ಗಾದವರಾದ ಅವರಿಗೆ 58 ವರ್ಷ ವಯಸ್ಸಾಗಿತ್ತು.

ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದಿದ್ದ ವೈಶಾಲಿ ಕಾಸರವಳ್ಳಿ ಪ್ರತಿಭಾವಂತೆ ಕಲಾವಿದೆ. ಅಷ್ಟೇ ಅಲ್ಲ, ನಿರ್ದೇಶಕಿ ಕೂಡಾ. ಕನ್ನಡ ಧಾರಾವಾಹಿ ಕ್ಷೇತ್ರದಲ್ಲಿ ಇತ್ತೀಚಿನ ವರ್ಷಗಳಲ್ಲಿ ತೊಡಗಿದ್ದ ಅವರು ಮೂಡಲ ಮನೆ, ಮುತ್ತಿನ ತೋರಣ ಮತ್ತಿತರ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು.

ಯಾವ ಜನ್ಮದ ಮೈತ್ರಿ ಚಿತ್ರದ ಮೂಲಕ ರಂಗಭೂಮಿಯಿಂದ ಚಿತ್ರರಂಗಕ್ಕೆ ಕಾಲಿಟ್ಟ ವೈಶಾಲಿ ಕಾಸರವಳ್ಳಿ ಭೂತಯ್ಯನ ಮಗ ಅಯ್ಯು, ಆಕ್ರಮಣ, ಯಾರಿಗೂ ಹೇಳ್ಬೇಡಿ, ಕಿಟ್ಟು ಪುಟ್ಟು, ಅಂಗೈಯಲ್ಲಿ ಅಪ್ಸರೆ, ಕ್ರೌರ್ಯ, ಹೊಂಬಿಸಿಲು, ತಬರನ ಕಥೆ, ಕ್ಷೀರ ಸಾಗರ, ಅನುಕೂಲಕ್ಕೊಬ್ಬ ಗಂಡ, ಮೂರು ದಾರಿಗಳು, ಪಂಜರದ ಗಿಳಿ, ಹೂವೊಂದು ಬೇಕು ಬಾಳಿಗೆ, ಗಣೇಶನ ಮದುವೆ, ಶಂಕರ ಗುರು, ಫಲಿತಾಂಶ, ಸ್ಪರ್ಶ, ಆಕ್ರಮಣ, ಗೌರಿ ಗಣೇಶ, ತವರುಮನೆ ಉಡುಗೊರೆ, ನಂ.73 ಶಾಂತಿ ನಿವಾಸ ಮತ್ತಿತರ 70ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.
PR


ತಾಯಿ ಸಾಹೇಬ ಚಿತ್ರಕ್ಕೆ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದ ವೈಶಾಲಿ ಕಾಸರವಳ್ಳಿ ತನ್ನ ಪತಿ ಗಿರೀಶ್ ಕಾಸರವಳ್ಳಿ ಜೊತೆಗೆ ಹಲವಾರು ಕಲಾತ್ಮಕ ಚಿತ್ರಗಳಲ್ಲೂ ದುಡಿದಿದ್ದರು. ಕಳೆದ ಆರು ತಿಂಗಳಿಂದ ತೀವ್ರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ವೈಶಾಲಿ ಅವರ ಧಾರಾವಾಹಿಯ ಸಂಪೂರ್ಣ ಜವಾಬ್ದಾರಿಯನ್ನು ಮಗ ಅಪೂರ್ವ ಕಾಸರವಳ್ಳಿ ಅವರೇ ನಿರ್ವಹಿಸುತ್ತಿದ್ದರು. ಆರೋಗ್ಯದ ಸಂಪೂರ್ಣ ಕಾಳಜಿಯನ್ನು ಮಗಳು ಅನನ್ಯಾ ಕಾಸರವಳ್ಳಿ ಹಾಗೂ ಗಿರೀಶ್ ಕಾಸರವಳ್ಳಿ ಅವರುಗಳು ನೋಡಿಕೊಳ್ಳುತ್ತಿದ್ದರು.

ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ವಿಪರೀತ ಏರುಪೇರುಗಳಾಗಿದ್ದು ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಅವರು ಕೊನೆಯುಸಿರೆಳೆದಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದ ದಿವ್ಯ ಚೇತನವೊಂದು ಭೌತಿಕವಾಗಿ ಮರೆಯಾಗಿದೆ.

ಗಿರೀಶ್ ಕಾಸರವಳ್ಳಿ ಹಾಗೂ ವೈಶಾಲಿ ಕಾಸರವಳ್ಳಿ ಪರಸ್ಪರ ಪ್ರೇಮಿಸಿ ಮದುವೆಯಾಗಿ ಚಿತ್ರರಂಗದಲ್ಲಿ ಯಶಸ್ಸನ್ನು ಕಂಡವರು. ಗಿರೀಶ್ ಕಾಸರವಳ್ಳಿ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದವರು. ಅಂಥವರ ಪತ್ನಿಯಾಗಿ ತನ್ನತನವನ್ನು ಮೆರೆದು ಸಿನಿಮಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ವೈಶಾಲಿ ಕಾಸರವಳ್ಳಿ ಅತ್ಯಪೂರ್ವ ನಟಿಯಾಗುವ ಜೊತೆಗೆ ನಿರ್ದೇಶನದಲ್ಲೂ ತನ್ನ ಛಾಪು ಮೆರೆದವರು. ವೈಶಾಲಿ ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ವೈಶಾಲಿ ದಿಢೀರ್ ನಿರ್ಗಮನಕ್ಕೆ ಗಣ್ಯರು ಅಶ್ರುತರ್ಪಣ ಸಲ್ಲಿಸಿದೆ.

ಅನಂತನಾಗ್- ಕನ್ನಡ ಚಿತ್ರರಂಗಕ್ಕೆ ಬಂದ ಹೊಸದರಲ್ಲಿ ನಾನು ಅವರ ಮನೆಗೆ ಹೋಗಿದ್ದೆ. ನನ್ನ ಜೊತೆ ತುಂಬ ಚಿತ್ರಗಳಲ್ಲಿ ನಟಿಸಿದ್ದರು. ಅನಾರೋಗ್ಯದ ವಿಚಾರ ಗೊತ್ತಿತ್ತು. ನನಗಿಂತ ವಯಸ್ಸಲ್ಲಿ ತುಂಬ ಚಿಕ್ಕವರು. ಆದರೆ ಇಷ್ಟು ಬೇಗ ಅವರ ನಿರ್ಗಮನ ಆಗುತ್ತೆ ಅಂತ ಗೊತ್ತಿರಲಿಲ್ಲ. ತುಂಬ ಬೇಸರವಾಯಿತು. ಅವರ ಸಾವಿನ ನೋವು ಭರಿಸುವ ಶಕ್ತಿ ಗಿರೀಶ್ ಗೆ ಸಿಗಲಿ ಅಂತ ಭಗವಂತನನ್ನು ಬೇಡುತ್ತೇನೆ.

ತಾರಾ- ವೈಶಾಲಿ ಅವರು ಕೇವಲ ನಿರ್ಮಾಪಕಿ, ಸಹ ನಿರ್ದೇಶಕಿ, ನಟಿ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೈಯಾಗಡಿಸಿದವರು. ಗಿರೀಶ್ ಅವರ ಚಿತ್ರಗಳ್ಲಲೂ ಅವರು ಸಾಕಷ್ಟು ಕೈಯಾಡಿಸಿದ್ದರು. ಅವರು ಬದುಕಿ ಬರುತ್ತೇನೆ ಎಂಬ ಆತ್ಮವಿಶ್ವಾಸ ಹೊಂದಿದ್ದರು. ಇನ್ನೂ ತುಂಬ ಕನಸು ಹೊತ್ತಿದ್ದರು. ಅವರ ಸಾವು ತುಂಬ ಬೇಜಾರಾಗಿದೆ.

ಭಾರತಿ ವಿಷ್ಣುವರ್ಧನ್- ನನಗೆ ಅವರನ್ನು ಕಂಡರೆ ತುಂಬ ಇಷ್ಟ. ಅವರೊಬ್ಬ ಪ್ರತಿಭಾವಂತರು. ನಾಟಕದಲ್ಲಿ ನನ್ನ ಯಜಮಾನರು ನನಗೆ ಪರಿಚಯ ಮಾಡಿಸಿದ್ರು. ನಂತರ ನಾನು ಹಲವು ಚಿತ್ರಗಳಲ್ಲಿ ಅವರ ಜೊತೆ ನಟಿಸಿದೆ. ತುಂಬ ಬೇಜಾರಾಗುತ್ತೆ. ಹೀಗೆ ಒಬ್ಬೊಬ್ಬರೇ ನಿರ್ಗಮಿಸುತ್ತಿರುವುದರಿಂದ ನೋವಾಗಿದೆ.

ಜಯಮಾಲಾ- ವೈಶಾಲಿ ಅಗಲಿಕೆ ಬಹಳ ದೊಡ್ಡ ನಷ್ಟ. ಆಕೆ ನನ್ನ ಆತ್ಮೀಯ ಸ್ನೇಹಿತೆ. 1978ರಿಂದ ನನಗೆ ಆಕೆಯನ್ನು ಗೊತ್ತು. ಅಂದು ಅವರ ಮನೆಯೂ ನಮ್ಮ ಮನೆಯ ಹತ್ತಿರವೇ ಇತ್ತು. ಕಾಸರವಳ್ಳಿಯವರನ್ನು ಮದುವೆಯಾದಾಗ ಆಕೆ ತುಂಬ ಸಂಭ್ರಮಿಸಿದ್ದರು. ಆಕೆ ಒಬ್ಬ ಒಳ್ಳೆ ತಾಯಿ, ಹೆಂಡತಿ, ಪ್ರತಿಭಾವಂತೆ ಕೂಡಾ. ಎಲ್ಲ ವಿಭಾಗದಲ್ಲೂ ಆಕೆ ಒಬ್ಬ ಅಭೂತಪೂರ್ವ ವ್ಯಕ್ತಿತ್ವ ಹೊಂದಿದವರು. ಗುಣಮುಖವಾಗಿ ವಾಪಸ್ ಬರ್ತಾಳೆ ಅಂದ್ಕೊಂಡೆ. ಹೀಗೆ ಹೇಳದೆ ಹೋಗುತ್ತಾಳೆ ಅಂದುಕೊಂಡಿರಲಿಲ್ಲ. ತುಂಬ ಬೇಸರವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವೈಶಾಲಿ ಕಾಸರವಳ್ಳಿ, ಕನ್ನಡ ಸಿನೆಮಾ, ರಂಗಭೂಮಿ, ಗಿರೀಶ್ ಕಾಸರವಳ್ಳಿ