ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ವಿಜಯ್ 'ಜಾನಿ' ನನಗೆ ಹೇಳಿದ ಚಿತ್ರವಲ್ಲ, ನಟಿಸಲ್ಲ: ರಮ್ಯಾ (Ramya | Johny mera naam preeti mera kaam | Dunia Vijay | Kannada Film)
ಸುದ್ದಿ/ಗಾಸಿಪ್
Bookmark and Share Feedback Print
 
ದುನಿಯಾ ವಿಜಯ್ ನಾಯಕನಾಗಿರುವ 'ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್' ಚಿತ್ರಕ್ಕೆ ರಮ್ಯಾ ಅಧಿಕೃತವಾಗಿ ಕೈ ಎತ್ತಿದ್ದಾರೆ. ತಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ, ಅದು ನನಗೆ ಹೇಳಿದ ಚಿತ್ರವಲ್ಲ. ನಾನು ಚೌಕಾಶಿ ಮಾಲು ಅಲ್ಲ ಎಂದು ಸಂಭಾವನೆ ವಿಚಾರವನ್ನು ಪ್ರಸ್ತಾಪಿಸದೆ 'ಚಿತ್ರದಲ್ಲಿ ನಟಿಸುತ್ತಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
WD

ಕರಿ ಚಿರತೆ ವಿಜಿ ಮತ್ತು ರಮ್ಯಾ ಈ ಚಿತ್ರದಲ್ಲಿ ನಾಯಕ-ನಾಯಕಿ ಎಂದು ಕೆಲ ದಿನಗಳ ಹಿಂದಷ್ಟೇ ನಿರ್ದೇಶಕ ಪ್ರೀತಂ ಗುಬ್ಬಿ ಹೇಳಿದ್ದರು. ಆದರೆ ನಂತರ ರಮ್ಯಾ ತನ್ನ ಪಾತ್ರಕ್ಕಾಗಿ ಬರೋಬ್ಬರಿ 22 ಲಕ್ಷ ರೂಪಾಯಿ ಬೇಡಿಕೆ ಮುಂದಿಟ್ಟಿದ್ದರು. ಇದರಿಂದ ಬೆಚ್ಚಿ ಬಿದ್ದಿದ್ದ ಗುಬ್ಬಿ, ಚೌಕಾಶಿಗೆ ಇಳಿದಿದ್ದರು.

ಇದರಿಂದ ರಮ್ಯಾ ಕೂಡ ರೋಸಿ ಹೋದಂತಿದೆ. ತಾನು ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಟ್ವಿಟ್ಟರ್-ಫೇಸ್‌ಬುಕ್‌ನಲ್ಲಿ ಘೋಷಿಸಿದ್ದಾರೆ.

ಇದು ಅಧಿಕೃತ ಮಾಹಿತಿ, ಇದನ್ನು ನಾನೇ ಹೇಳುತ್ತಿದ್ದೇನೆ. ನಾನು ಜಾನಿ ಚಿತ್ರದಲ್ಲಿ ನಟಿಸುತ್ತಿಲ್ಲ. ಈ ಮೂಲಕ ಇದನ್ನು ಸ್ಪಷ್ಟಪಡಿಸುತ್ತಿದ್ದೇನೆ. ನನ್ನ ವೃತ್ತಿಪರ ನೀತಿಗಳಿಗೆ ಅದು ವಿರುದ್ಧವಾಗಿತ್ತು. ನಾನು ಚೌಕಾಶಿ ಸರಕು ಆಗಲು ಸಾಧ್ಯವಿಲ್ಲ. ಅದೇನೇ ಇರಲಿ, ಚಿತ್ರತಂಡಕ್ಕೆ ಶುಭವಾಗಲಿ ಎಂದು ಹಾರೈಸುತ್ತಿದ್ದೇನೆ. 'ಜಾನಿ' ಚಿತ್ರದ ಆ ಪಾತ್ರಕ್ಕೆ ಹೊಂದುವ ಕೆಲವು ನಟಿಯರನ್ನು ನಾನು ಅವರಿಗೆ ಶಿಫಾರಸು ಮಾಡಿದ್ದೇನೆ ಎಂದು ತನ್ನ ಸಂದೇಶದಲ್ಲಿ ರಮ್ಯಾ ಸ್ಪಷ್ಟನೆ ನೀಡಿದ್ದಾರೆ.

ಸಂಭಾವನೆ ವಿಚಾರದಲ್ಲಿ ರಮ್ಯಾ ಯಾವತ್ತೂ ಖಡಕ್ ಮಾತುಗಳನ್ನಾಡುತ್ತಾರೆ ಎನ್ನುವುದು ಗಾಂಧಿನಗರಕ್ಕೆ ಹಳೆ ಸುದ್ದಿ. ಈ ಹಿಂದೆಯೂ ಸಂಭಾವನೆ ಚೌಕಾಶಿಗೆ ಅವರು ಬಗ್ಗದೆ ಚಿತ್ರಗಳನ್ನು ನಿರಾಕರಿಸಿದ ಹಲವು ಉದಾಹರಣೆಗಳಿವೆ. ಅದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ.

ವಿತರಕ ಜಯಣ್ಣ ತನ್ನ ಕೆಲವು ಸ್ನೇಹಿತರ ಜತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 22 ಲಕ್ಷ ಬೇಕೇ ಬೇಕು ಎಂದು ರಮ್ಯಾ ರಚ್ಚೆ ಹಿಡಿದಿದ್ದರು. ಚೌಕಾಶಿಗಿಳಿದಿದ್ದ ನಿರ್ಮಾಪಕ-ನಿರ್ದೇಶಕರು 20 ಲಕ್ಷದವರೆಗೆ ಬಂದಿದ್ದರಾದರೂ ರಮ್ಯಾ ತನ್ನ ನಿಲುವನ್ನು ಬದಲಾಯಿಸದೆ, ಚಿತ್ರಕ್ಕೆ ಬೈ ಎಂದಿದ್ದಾರೆ.

ಮೂಲಗಳ ಪ್ರಕಾರ ಈ ಚಿತ್ರಕ್ಕೀಗ ಐಂದ್ರಿತಾ ರೇ ಅವರನ್ನು ಆಯ್ಕೆ ಮಾಡಲಾಗುತ್ತದೆ.

ನಾನು ಮತ್ತು ವಿಜಯ್ ಪ್ರತಿಬಾರಿ ಪರಸ್ಪರ ಮುಖಾಮುಖಿಯಾದಾಗಲೂ, ನಾವು ಜತೆಗೆ ನಟಿಸುವುದು ಯಾವಾಗ ಎಂದು ವಿಜಯ್ ಕೇಳುತ್ತಿದ್ದರು. ಈಗ ನಮಗಿಬ್ಬರಿಗೆ ಜತೆಯಾಗಿ ನಟಿಸುವ ಅವಕಾಶ ಬಂದಿದೆ. ನನಗೂ ಸಂತೋಷವಾಗಿದೆ. ಚಿತ್ರಕಥೆಯೂ ಉತ್ತಮವಾಗಿದೆ ಎಂದು ಕೆಲ ದಿನಗಳ ಹಿಂದಷ್ಟೇ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಮ್ಯಾ ಹೇಳಿದ್ದನ್ನು ಇದೀಗ ಸ್ಮರಿಸಬಹುದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಮ್ಯಾ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ದುನಿಯಾ ವಿಜಯ್