ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕೊಳೆಗೇರಿ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳ ಚಿತ್ರ 'ಆನಂದ' (Jhon Devaraj | Ananda | Kannada Film | Slum children)
ಸುದ್ದಿ/ಗಾಸಿಪ್
Bookmark and Share Feedback Print
 
PR
ಬೆಂಗಳೂರಿನ ಕೊಳೆಗೇರಿ ಮಕ್ಕಳಿಂದ ಸಿನಿಮಾನಾ ಎಂದು ಹುಬ್ಬೇರಿಸಬೇಡಿ. ಇದು ಸತ್ಯ. ಜಯನಗರ ಹಾಗೂ ಜೆ.ಪಿ. ನಗರ ಮಧ್ಯದ ರಾಗಿಗುಡ್ಡದಲ್ಲಿನ ಕೊಳೆಗೇರಿ ಮಕ್ಕಳು 'ಆನಂದ' ಎಂಬ ಸಿನಿಮಾ ಮಾಡಿದ್ದಾರೆ ಎಂಬುದು ಬಹಳ ಮಂದಿಗೆ ಗೊತ್ತಿಲ್ಲ.

ಚಿತ್ರದಲ್ಲಿ ಈ ಮಕ್ಕಳು ಕೇವಲ ಅಭಿನಯಿಸುತ್ತಿರುವುದು ಮಾತ್ರವಲ್ಲ, ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕೂಡ ತೊಡಗಿಸಿದ್ದಾರೆ.

ಈ ಚಿತ್ರ ನಿರ್ಮಾಣಕ್ಕೆ ಸ್ಲಂ ಮಕ್ಕಳು ತಮ್ಮಲ್ಲಿ ಕೂಡಿಟ್ಟಿದ್ದ ಐದು, ಹತ್ತು, ಇಪ್ಪತ್ತು, ಐವತ್ತು... ಹೀಗೆ ಒಟ್ಟಾರೆ ಸುಮಾರು 80 ಸಾವಿರ ರೂಪಾಯಿಗಳನ್ನು ಕೊಟ್ಟಿದ್ದಾರೆ. ಏನೇ ಆದರೂ ಈ ಎಳೆಯರ ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವುದಂತೂ ನಿಜ.

ಚಿತ್ರಕ್ಕೆ ಯಾವುದೇ ಸೆಟ್ ಹಾಕಿಲ್ಲ. ಬಹುತೇಕ ದೃಶ್ಯಗಳಿಗೆ ಯಾವುದೇ ಸ್ಕ್ರಿಪ್ಟ್ ಇಲ್ಲದೆ, ಆ ಕ್ಷಣದಲ್ಲಿ ಮನಸ್ಸಿಗೆ ಮೂಡಿದ್ದನ್ನು ಚಿತ್ರೀಕರಿಸಲಾಗಿದೆ. ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದ್ದು, ಎರಡೂವರೆ ಗಂಟೆಗಳ ಸಿನಿಮಾವನ್ನು ಗೆರಿಲ್ಲಾ ಮಾದರಿಯಲ್ಲಿ ಶೂಟ್ ಮಾಡಲಾಗಿದೆ.

ಚಿತ್ರಕಥೆಯಲ್ಲಿ ಆನಂದ ಶಾಲೆಗೆ ಹೋಗುವ ಮುಗ್ದ ಬಾಲಕ. ಕುಡುಕ ತಂದೆ ಮಗನನ್ನು ದುಡಿಸಿ ಬಂದ ಹಣವನ್ನು ಕುಡಿತಕ್ಕೆ ಸುರಿಯುತ್ತಾನೆ. ಬಾಲಕನ ಓದಿಗೆ ತಂದೆಯೇ ಅಡ್ಡಗಾಲಾಗಿದ್ದರಿಂದ ಓದಿನಲ್ಲಿ ಹಿಂದೆ ಬೀಳುವುದಲ್ಲದೆ, ಶಾಲೆಯನ್ನು ತೊರೆದು ಬೀದಿ ಪಾಲಾಬೇಕಾಗುತ್ತದೆ.

ಚಿಂದಿ ಆಯುವ, ಚಿಲ್ಲರೆ ಕಳ್ಳ ಕೆಲಸಗಳನ್ನು ಮಾಡುವ ಮಕ್ಕಳ ಸ್ನೇಹ ಆನಂದನಿಗೆ ಆಗುತ್ತದೆ. ಈ ಸಂದರ್ಭದಲ್ಲಿ ಜೊತೆಯಾಗುವ ಮಕ್ಕಳ ಜೀವನದ ಒಂದೊಂದು ಕಥೆಯೂ ಇಲ್ಲಿದೆ. ಆನಂದನ ಈ ಹಾದಿಯಲ್ಲಿ ಬರುವ ಎಡರು ತೊಡರುಗಳನ್ನು ಹಾಗೂ ರಿಯಲ್ ಚಿಂದಿ ಆಯುವ ಜೀವನ ನಡೆಸುತ್ತಿರುವ ಕೊಳೆಗೇರಿ ಮಕ್ಕಳನ್ನು ಹಿಡಿದು ಚಿತ್ರೀಕರಿಸಿರುವುದೇ ಸಾಹಸ.

ಅಲ್ಲದೆ, ಕ್ಯಾಮೆರಾ ಹಿಡಿದು ಶೂಟಿಂಗ್ ಮಾಡಲು ಹೋದಾಗ ಓಡಿ ಹೋಗುತ್ತಿದ್ದ ಮಕ್ಕಳನ್ನು ತಡೆದು ನಿಲ್ಲಿಸುವಷ್ಟರಲ್ಲಿ ಸಾಕುಸಾಕಾಗಿ ಹೋಗಿದೆ ಎಂದು ತನ್ನ ಕಷ್ಟವನ್ನು ವಿವರಿಸಿದ್ದಾರೆ ನಿರ್ದೇಶಕ ಜಾನ್ ದೇವರಾಜ್.

ಮಾಲ್ಗುಡಿ ಡೇಸ್ ಟಿವಿ ಧಾರಾವಾಹಿಗೆ ಕಲಾ ನಿರ್ದೇಶನ ಮಾಡಿ ಹೆಸರು ಗಿಟ್ಟಿಸಿಕೊಂಡಿದ್ದ ಶಿಲ್ಪಿ, ಚಿತ್ರ ಕಲಾವಿದ ಜಾನ್ ದೇವರಾಜ್ ಚಿತ್ರವೊಂದನ್ನು ಪೂರ್ಣ ಪ್ರಮಾಣದಲ್ಲಿ ನಿರ್ದೇಶಿಸಿರುವುದು ಇದೇ ಮೊದಲು. ಈಗಾಗಲೇ ಜಪಾನ್ ಮತ್ತು ಝೆಕ್ ದೇಶಗಳಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆದುಕೊಂಡಿರುವ ಜಾನ್, ಮಕ್ಕಳ ದಿನದಂದು ಬೆಂಗಳೂರಿನಲ್ಲೂ ಪ್ರದರ್ಶನ ಏರ್ಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಾನ್ ದೇವರಾಜ್, ಆನಂದ, ಕನ್ನಡ ಸಿನಿಮಾ