ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಅಂಬರೀಷ್ ಮಧ್ಯಪ್ರವೇಶ; ಡಿ.1ರ ಚಿತ್ರರಂಗ ಬಂದ್ ರದ್ದು (KFCC | Sandalwood | Basant Kumar Patil | Ambarish)
ಸುದ್ದಿ/ಗಾಸಿಪ್
Bookmark and Share Feedback Print
 
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ವಿರುದ್ಧ ಕಾರ್ಯಕಾರಿ ಸಮಿತಿಯು ತಿರುಗಿ ಬಿದ್ದು ತೀವ್ರ ವಿವಾದಕ್ಕೆ ಕಾರಣವಾಗಿದ್ದ ಪ್ರಕರಣದಲ್ಲಿ ಹಿರಿಯ ನಟ ಅಂಬರೀಷ್ ಮಧ್ಯಪ್ರವೇಶ ಮಾಡಿದ್ದು, ತಾತ್ಕಾಲಿಕ ನಿರಾಳತೆ ಒದಗಿಸಿದ್ದಾರೆ. ಇದರೊಂದಿಗೆ ಡಿಸೆಂಬರ್ 1ರಿಂದ ನಡೆಯಬೇಕಿದ್ದ ಕನ್ನಡ ಚಿತ್ರರಂಗದ ಅನಿರ್ದಿಷ್ಟಾವಧಿ ಬಂದ್ ರದ್ದುಗೊಂಡಿದೆ.

ಡಬ್ಬಿಂಗ್ ವಿರೋಧಿಸಿ ಡಿಸೆಂಬರ್ 1ರಿಂದ ಕನ್ನಡ ಚಿತ್ರೋದ್ಯಮ ಅನಿರ್ದಿಷ್ಟಾವಧಿ ಬಂದ್ ಎಂದು ತೀರ್ಮಾನ ಪ್ರಕಟಿಸಿದ್ದ ಪಾಟೀಲ್ ವಿರುದ್ಧ ಕಾರ್ಯಕಾರಿ ಸಮಿತಿ ಮುಗಿ ಬಿದ್ದಿದ್ದು, ಸಮಿತಿಯ 40 ಸದಸ್ಯರಲ್ಲಿ 36 ಮಂದಿ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ವಾಣಿಜ್ಯ ಮಂಡಳಿಗೆ ಮತ್ತೆ ಚುನಾವಣೆ ನಡೆಯುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಆದರೂ ಪ್ರಸಕ್ತ ಅಧ್ಯಕ್ಷ ಪಾಟೀಲ್ ಎರಡು ತಿಂಗಳ ಕಾಲ ಪದವಿಯಲ್ಲಿ ಮುಂದುವರಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ವಾಣಿಜ್ಯ ಮಂಡಳಿಯ ನೀತಿಗಳ ಪ್ರಕಾರ ಚುನಾವಣಾ ಪ್ರಕ್ರಿಯೆಗೆ 45 ದಿನಗಳ ಕಾಲಾವಕಾಶ ಅಗತ್ಯವಿರುವುದರಿಂದ, 2011ರ ಜನವರಿ 29ರಂದು ಚುನಾವಣೆ ನಡೆಸುವ ತೀರ್ಮಾನಕ್ಕೆ ಬರಲಾಗಿದೆ.

2011ರ ಮೇ ತಿಂಗಳವರೆಗೆ ಅಧಿಕಾರ ಹೊಂದಿದ್ದ ಬಸಂತ್ ಕುಮಾರ್ ಪಾಟೀಲ್ ಇತ್ತೀಚೆಗಷ್ಟೇ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಬಹುತೇಕ ನಿರ್ಮಾಪಕರು, ನಿರ್ದೇಶಕರು ಮತ್ತು ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರತ್ಯೇಕ ವಾಣಿಜ್ಯ ಮಂಡಳಿ ಸ್ಥಾಪಿಸುವ ಪ್ರಸ್ತಾಪಗಳು ಕೂಡ ತೇಲಾಡುತ್ತಿದ್ದವು. ಆದರೆ ಅಂಬರೀಷ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.

ಸೋಮವಾರ ಸಂಜೆ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಟೀಲ್, ಕಾರ್ಯಕಾರಿ ಸಮಿತಿಯ ರಾಕ್‌ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಕೆ.ಸಿ.ಎನ್. ಚಂದ್ರು, ಸಾರಾ ಗೋವಿಂದು ಮುಂತಾದವರು ಪಾಲ್ಗೊಂಡಿದ್ದರು.

ಕಾರ್ಯಕಾರಿ ಸಭೆಯನ್ನು ವಿಸರ್ಜಿಸಿ ಚುನಾವಣೆ ಎದುರಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಬಸಂತ್ ಕುಮಾರ್ ಪಾಟೀಲ್ ಅವರಿಗೆ ಕಾರ್ಯಕಾರಿ ಸಮಿತಿಯು ಎರಡು ಅವಕಾಶಗಳನ್ನು ನೀಡಿ ಇಂದಿನವರೆಗೆ ಗಡುವು ವಿಧಿಸಿತ್ತು. ಆದರೆ ಪಾಟೀಲ್ ಯಾವುದೇ ನಿರ್ಧಾರಕ್ಕೂ ಬಂದಿರಲಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕೆಎಫ್ಸಿಸಿ, ಸ್ಯಾಂಡಲ್ವುಡ್, ಬಸಂತ್ ಕುಮಾರ್ ಪಾಟೀಲ್, ಅಂಬರೀಷ್