ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಕಣಗಾಲ್ ಪ್ರಶಸ್ತಿ ಬೇಡ: ದಾಸ್ | ನಂಗೂ ಬೇಡ: ಕಾರ್ನಾಡ್ (Puttanna Kanagal award | Bhargava | KSR Doss | Girish Karnad)
ಸುದ್ದಿ/ಗಾಸಿಪ್
Bookmark and Share Feedback Print
 
ಕೆಲವೇ ಕೆಲವು ಪತ್ರಕರ್ತರು ಆಕ್ಷೇಪಿಸಿದರು ಎಂಬ ಕಾರಣಕ್ಕೆ ಘೋಷಿಸಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಎಸ್ಆರ್ ದಾಸ್ ಅವರ ಹೆಸರಿನಿಂದ ಗಿರೀಶ್ ಕಾರ್ನಾಡ್ ಹೆಸರಿಗೆ ವರ್ಗಾಯಿಸಿದ 2008-09ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಣೆ ವಿವಾದವೀಗ ಇಬ್ಬರೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳುವುದರೊಂದಿಗೆ ತಾರಕಕ್ಕೇರಿದೆ.

ಡಿಸೆಂಬರ್ 3ರಂದು (ಶುಕ್ರವಾರ) ಪ್ರಶಸ್ತಿ ಪಟ್ಟಿಯನ್ನು ತೀರ್ಪುಗಾರರ ಸಮಿತಿಯ ಅಧ್ಯಕ್ಷ, ಹಿರಿಯ ನಿರ್ದೇಶಕ ಭಾರ್ಗವ ಪ್ರಕಟಿಸಿದ್ದರು. ಅದರಲ್ಲಿ ದಿವಂಗತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಮತ್ತೊಬ್ಬ ಹಿರಿಯ ನಿರ್ದೇಶಕ ಕೆಎಸ್ಆರ್ ದಾಸ್ ಅವರಿಗೆ ನೀಡಲಾಗುತ್ತದೆ ಎಂದು ಪ್ರಕಟಿಸಲಾಯಿತು.

ಇದನ್ನೂ ಓದಿ: ಯೋಗೀಶ್‌ ಅತ್ಯುತ್ತಮ ನಟ, ರಾಧಿಕಾ ಅತ್ಯುತ್ತಮ ನಟಿ ಪ್ರಶಸ್ತಿ

ಅಲ್ಲಿದ್ದ ಕೆಲವು ಪತ್ರಕರ್ತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕಣಗಾಲ್ ಪ್ರಶಸ್ತಿಯನ್ನು ಕನ್ನಡಕ್ಕೆ ಹೆಚ್ಚಿನ ಸೇವೆ ಸಲ್ಲಿಸದ ಪರಭಾಷಾ ನಿರ್ದೇಶಕರೊಬ್ಬರಿಗೆ ನೀಡುತ್ತಿರುವುದು ಯಾಕೆ ಎಂದು ಮಾಧ್ಯಮ ಮಂದಿ ಪ್ರಶ್ನಿಸಿದ್ದರು. ಅಷ್ಟಕ್ಕೆ ಏಕಾಏಕಿ ತನ್ನ ನಿರ್ಧಾರವನ್ನು ಬದಲಾಯಿಸಿದ್ದ ಭಾರ್ಗವ, ಹಿರಿಯ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರನ್ನು ಕಣಗಾಲ್ ಪ್ರಶಸ್ತಿಗೆ ಆಯ್ಕೆ ಮಾಡಿಯೇ ಬಿಟ್ಟಿದ್ದರು.

ಯಾರು ಈ ಕೆಎಸ್ಆರ್ ದಾಸ್?
ಮೂಲತಃ ಆಂಧ್ರಪ್ರದೇಶದವರು. ಸರಿಸುಮಾರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು. ಕನ್ನಡದಲ್ಲಿ 25ಕ್ಕೂ ಹೆಚ್ಚು ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದಾರೆ.

ರಾಜ್‌ಕುಮಾರ್, ವಿಷ್ಣುವರ್ದನ್ ಮತ್ತು ರಜನಿಕಾಂತ್ ಸೇರಿದಂತೆ ಹಲವರ ಚಿತ್ರಗಳನ್ನು ಕನ್ನಡದಲ್ಲಿ ದಾಸ್ ನಿರ್ದೇಶಿಸಿದ್ದರು. ಅವುಗಳಲ್ಲಿ ಮುಖ್ಯವಾದುವು ಸಹೋದರರ ಸವಾಲ್, ಕಳ್ಳ ಕುಳ್ಳ, ಬಂಗಾರದ ಗುಡಿ, ಸ್ನೇಹಿತರ ಸವಾಲ್, ಕೈದಿ, ನನ್ನ ಪ್ರತಿಜ್ಞೆ, ಸತ್ಯಂ ಶಿವಂ ಸುಂದರಂ, ರುದ್ರ ಮುಂತಾದುವು.

ಲಕ್ಷ್ಮಿ, ಎಸ್.ಪಿ. ಬಾಲಸುಬ್ರಮಣ್ಯಂ ನಟಿಸಿದ್ದ 'ಹೆತ್ತರೆ ಹೆಣ್ಣನ್ನೇ ಹೆರಬೇಕು' ಎಂಬ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವನ್ನು ಕೆಲ ವರ್ಷಗಳ ಹಿಂದಷ್ಟೇ ಕನ್ನಡದಲ್ಲಿ ನಿರ್ಮಿಸಿದ್ದವರು ದಾಸ್. ಈ ಸಿನಿಮಾ ಮಕಾಡೆ ಮಲಗಿದ್ದರಿಂದ ಹಣಕಾಸು ಸಂಕಷ್ಟಕ್ಕೆ ಸಿಲುಕಿದ ಅವರು ಚಿತ್ರರಂಗದ ಸಹವಾಸವನ್ನು ಬಿಟ್ಟಿದ್ದರು.

ಕನ್ನಡದಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡಿ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿರುವ, ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿರುವ ಭಾರ್ಗವ ಇದೇ ದಾಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿದ್ದವರು.

ನಾನು ಭಿಕ್ಷೆ ಬೇಡಿರಲಿಲ್ಲ: ದಾಸ್
ನನ್ನ ಗಂಡ ಪ್ರಶಸ್ತಿಗಾಗಿ ಸರಕಾರದಲ್ಲಿ ಭಿಕ್ಷೆ ಬೇಡಿರಲಿಲ್ಲ. ಅಂತಹ ಪ್ರಶಸ್ತಿಯೂ ನಮಗೆ ಬೇಕಾಗಿಲ್ಲ. ನಮಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ಜನತೆ ನೀಡಿರುವ ಪ್ರಶಸ್ತಿಯೇ ಸಾಕು ಎಂದು ದಾಸ್ ಅವರ ಧರ್ಮಪತ್ನಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಾಸ್ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಎರಡೂ ಭಾಷೆಗಳಲ್ಲಿ ನೀಡಿದವರು. ದೊಡ್ಡ ದೊಡ್ಡ ನಟರನ್ನು ನಿರ್ದೇಶಿಸಿದ್ದವರು. ಅಂತವರಿಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಿರುವುದು ಸಹಜವಾಗಿಯೇ ದಾಸ್ ಕುಟುಂಬಕ್ಕೆ ನೋವನ್ನುಂಟು ಮಾಡಿದೆ.

ಇದು ದಾಸ್ ಅವರಿಗೆ ಮಾಡಿರುವ ಅವಮಾನ. ಈ ರೀತಿಯ ಅಪಮಾನ ಮತ್ತು ತಾರತಮ್ಯವನ್ನುಂಟು ಮಾಡುವ ಪ್ರಶಸ್ತಿ ಬೇಕಿಲ್ಲ. ಯಾವುದೇ ಕಾರಣಕ್ಕೂ ದಾಸ್ ಈ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎಂದು ಅವರ ಪತ್ನಿ ಸ್ಪಷ್ಟಪಡಿಸಿದ್ದಾರೆ.

PR
ನನಗೂ ಪ್ರಶಸ್ತಿ ಬೇಡ: ಕಾರ್ನಾಡ್
ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕರ್ನಾಟಕ ಸರಕಾರವು ನನಗೆ ಪ್ರಕಟಿಸಿರುವುದು ಸಂತೋಷ ತಂದಿದೆ. ಆದರೆ ಈ ಪ್ರಶಸ್ತಿಯನ್ನು ನಾನು ಸ್ವೀಕರಿಸುತ್ತಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕಾರ್ನಾಡ್ ತಿಳಿಸಿದ್ದಾರೆ.

ಇಂತಹ ಪ್ರಶಸ್ತಿಯನ್ನು ನನಗೆ ಪ್ರಕಟಿಸಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಧನ್ಯವಾದ ಅರ್ಪಿಸಿದ್ದೇನೆ. ಆದರೆ ಈ ಗೌರವವನ್ನು ಸ್ವೀಕರಿಸಲು ಅಸಾಧ್ಯವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ.

ಪ್ರಶಸ್ತಿ ಸ್ವೀಕರಿಸದೇ ಇರಲು ಕಾರಣಗಳನ್ನು ಕಾರ್ನಾಡ್ ಹೇಳಿಲ್ಲ. ಆದರೆ ಮತ್ತೊಬ್ಬ ಹಿರಿಯ ನಿರ್ದೇಶಕರನ್ನು ಅವಮಾನಿಸಿರುವುದು ಕಾರ್ನಾಡ್ ಅವರಿಗೂ ಅಸಮಾಧಾನ ತಂದಿರಬಹುದು. ಹಾಗಾಗಿ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಭಾರ್ಗವ, ಕೆಎಸ್ಆರ್ ದಾಸ್, ಗಿರೀಶ್ ಕಾರ್ನಾಡ್