ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿರ್ದೇಶಕರಾಗಲು ಭಟ್ಟರ ಶಿಷ್ಯರು ಸ್ಪರ್ಧೆಯಲ್ಲಿದ್ದಾರೆಯೇ? (Nimahns | Yogaraj Bhat | Ramesh | Parvati Menon)
ಸುದ್ದಿ/ಗಾಸಿಪ್
Bookmark and Share Feedback Print
 
ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಿರ್ದೇಶಕ ಯೋಗರಾಜ್ ಭಟ್. ಅವರ ಒಬ್ಬೊಬ್ಬರೇ ಶಿಷ್ಯರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಬ್ಬ ಪವನ್ ಕುಮಾರ್ ಮೊನ್ನೆಯಷ್ಟೇ 'ಲೈಫು ಇಷ್ಟೇನೆ' ಎಂದರೆ, ಈಗ ರಮೇಶ್ ಅದೇ ಹಾದಿ ತುಳಿದಿದ್ದಾರೆ. ಲಕ್ಷಣಗಳನ್ನು ನೋಡಿದರೆ, ಭಟ್ಟರ ಶಿಷ್ಯ ವೃಂದ ನಿರ್ದೇಶಕನ ಟೋಪಿಗೆ ಸಾಲುಗಟ್ಟಿ ತಲೆ ಕೊಡುತ್ತಿರುವಂತೆ ಕಾಣುತ್ತಿದೆ.

ರಮೇಶ್ 'ಮುಂಗಾರು ಮಳೆ', 'ಗಾಳಿಪಟ' ಚಿತ್ರಗಳಲ್ಲಿ ಕೆಲಸ ಮಾಡಿದವರು. 'ಮೊಗ್ಗಿನ ಮನಸು', 'ಮೇಘವರ್ಷಿಣಿ' ಮತ್ತು 'ಒಲವೇ ಮಂದಾರ' ಚಿತ್ರಗಳಿಗೂ ಸಹಾಯಕ ನಿರ್ದೇಶಕರಾಗಿ ದುಡಿದವರು. ಈ ಅನುಭವ ಮತ್ತು ಭಟ್ಟರ ಶಿಷ್ಯ ಎಂಬ ಟೈಟಲ್ಲು ಹಿಡಿದುಕೊಂಡು ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

ಇಂತಹ ಹಿನ್ನೆಲೆಯಿರುವ ರಮೇಶ್ ನಿರ್ದೇಶನದ ಮೊದಲ ಚಿತ್ರ 'ನಿಮ್ಹಾನ್ಸ್'. ಪ್ರಕಾಶಮೂರ್ತಿ ನಿರ್ಮಾಣದ ಈ ಚಿತ್ರದ ಹೆಸರೇ ಕುತೂಹಲ ಮೂಡಿಸಿದೆ. ನಿರ್ಮಾಪಕರು ತಮ್ಮ ಮೊದಲ ನಿರ್ಮಾಣದಲ್ಲೇ ನಿಮ್ಹಾನ್ಸ್ ಸೇರದಿದ್ದರೆ ಸಾಕು ಎನ್ನುವುದು ಸಲಹೆ ಮಾತ್ರ.

ಚಿತ್ರತಂಡದ ಪ್ರಕಾರ ಇದು ಹುಚ್ಚರ ಕಥೆಯಲ್ಲ. ಆಸ್ಪತ್ರೆ ಸುತ್ತ ಗಿರಕಿ ಹೊಡೆಯುವ ಚಿತ್ರವೂ ಅಲ್ಲ. ಕಥೆ ನಿಮ್ಹಾನ್ಸ್ ಆಸ್ಪತ್ರೆಯಿಂದಲೇ ಶುರುವಾಗುವುದರಿಂದ ಈ ಟೈಟಲ್ ಇಡಲಾಗಿದೆ.

ಇಬ್ಬರು ನಾಯಕಿಯರು ಹಾಗೂ ಒಬ್ಬ ನಾಯಕನಿರುತ್ತಾರೆ. ಹಾಗೆಂದು ತ್ರಿಕೋನ ಪ್ರೇಮಕಥೆಯಲ್ಲ. ತಾರಾಬಳಗದ ಆಯ್ಕೆ ಶುರುವಾಗಿದೆ. ಅದರಲ್ಲಿ ಒಬ್ಬ ನಾಯಕಿಯಾಗಿ 'ಮಿಲನ' ಚಿತ್ರ ಪಾರ್ವತಿ ಇದ್ದಾರೆ. ಅವಿನಾಶ್-ರಾಮಚಂದ್ರ ಎಂಬುವರು ಮೊದಲ ಬಾರಿಗೆ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಆದರೆ, ರಮೇಶ್‌ಗೆ ತನ್ನ ಗುರು ಯೋಗರಾಜ ಭಟ್ಟರ ಹಾಡುಗಳು ಬೇಕೇ ಬೇಕಂತೆ. ಆದ್ದರಿಂದ ಭಟ್ಟರದು ಪ್ರಥಮ ಆಯ್ಕೆ. ಜಯಂತ್ ಕಾಯ್ಕಿಣಿ ಹಾಗೂ ಸುಧೀರ್ ಅತ್ತಾವರ, ಕೆ. ಕಲ್ಯಾಣ್ ಅವರು ಸಹ ಹಾಡು ರಚಿಸಿದ್ದಾರೆ.

ಏನೇ ಆದರೂ ಗುರುಗಳ ಆಶೀರ್ವಾದ ಈ ಚಿತ್ರಕ್ಕೆ ಇದ್ದೇ ಇರುತ್ತದೆ ಎನ್ನುವ ಭರವಸೆಯಲ್ಲಿರುವ ರಮೇಶ್ ಮೊದಲ ಕೂಸು ಫೆಬ್ರವರಿಯಲ್ಲಿ 'ನಿಮ್ಹಾನ್ಸ್' ನಡೆದಾಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಮ್ಹಾನ್ಸ್, ಯೋಗರಾಜ್ ಭಟ್, ರಮೇಶ್, ಪಾರ್ವತಿ ಮೆನನ್