ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » 'ಬಾಸ್' ದರ್ಶನ್ ಮತ್ತು 'ಕಂಠೀರವ' ವಿಜಯ್ ಕಿತ್ತಾಡಲ್ವಂತೆ (Kanteerava | Vijay | Boss | Darshan)
ಸುದ್ದಿ/ಗಾಸಿಪ್
Bookmark and Share Feedback Print
 
ಸಂಕ್ರಾಂತಿ ಹೊತ್ತಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ದುನಿಯಾ ವಿಜಯ್ ನಡುವೆ ಕತ್ತುಕತ್ತಿನ ಹೋರಾಟ ನಡೆಯಬೇಕಿತ್ತು. ಈ ಸಂಬಂಧ ಎಲ್ಲಾ ತಯಾರಿಗಳೂ ನಡೆದಿದ್ದವು. ಆದರೆ ಅದಕ್ಕೆ ಕೊನೆಗೂ ಬ್ರೇಕ್ ಹಾಕಲಾಗಿದೆ. ಕಿತ್ತಾಡುವ ಬದಲು ಹಂಚಿಕೊಳ್ಳುವ ಹಾದಿ ಹಿಡಿದು ಸಮಸ್ಯೆ ಹುಟ್ಟಿಕೊಳ್ಳುವ ಮೊದಲೇ ಪರಿಹರಿಸಿಕೊಳ್ಳಲಾಗಿದೆ.

ವಿಷಯ ಇಷ್ಟೇ, ದರ್ಶನ್ ನಾಯಕನಾಗಿರುವ 'ಬಾಸ್' ಮತ್ತು ವಿಜಯ್ ಅಭಿನಯಿಸಿರುವ 'ಕಂಠೀರವ' ಜನವರಿ 14ರಂದು ಶುಕ್ರವಾರ ತೆರೆಗೆ ಬರಲಿವೆ ಎಂದು ಹೇಳಲಾಗಿತ್ತು. ಅದು ಬಾಸ್ ವರ್ಸಸ್ ಕಂಠೀರವ ಎನ್ನುವುದಕ್ಕಿಂತಲೂ ದರ್ಶನ್ ವರ್ಸಸ್ ವಿಜಯ್ ಎನ್ನುವ ಹಂತಕ್ಕೆ ಹೋಗಿತ್ತು. ಇಬ್ಬರು ದೊಡ್ಡ ಸ್ಟಾರುಗಳ ಚಿತ್ರ ಒಂದೇ ದಿನ ಬಿಡುಗಡೆಯಾಗುವುದೆಂದರೆ ಇಂತಹ ಪರಿಸ್ಥಿತಿ ಯಾವಾಗಲೂ ಇದ್ದದ್ದೇ.

ಆದರೆ ಇಂತಹ ಸಂಘರ್ಷಗಳಿಂದ ಅಂತಿಮವಾಗಿ ನಷ್ಟ ಅನುಭವಿಸುವುದು ಸಂಬಂಧಪಟ್ಟ ನಿರ್ಮಾಪಕರು ಮತ್ತು ಕನ್ನಡ ಚಿತ್ರರಂಗ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯರು ಕೂತು ಮಾತುಕತೆ ನಡೆಸಿ ಸಮಸ್ಯೆ ಪರಿಹಾರ ಮಾಡಿದ್ದಾರೆ. ಬಾಸ್ ಜನವರಿ 14ರಂದು ಬಿಡುಗಡೆಯಾಗುತ್ತದೆ, ಅದರ ಒಂದು ವಾರದ ನಂತರ ಅಂದರೆ ಜನವರಿ 21ರಂದು ಕಂಠೀರವ ಬಿಡುಗಡೆಯಾಗುತ್ತದೆ ಎಂದು ಸಂಬಂಧಪಟ್ಟವರು ಖಚಿತಪಡಿಸಿದ್ದಾರೆ.

ಕಂಠೀರವ ನಿರ್ಮಾಪಕ ಕೋಟಿ ರಾಮು. ಬಾಸ್‌ಗೆ ಹಣ ಹಾಕಿದ್ದು ರಮೇಶ್ ಯಾದವ್. ಇವರಿಬ್ಬರನ್ನೂ ಒಂದೇ ಟೇಬಲ್ಲಿಗೆ ತಂದದ್ದು ಸಾರಾ ಗೋವಿಂದು ಮತ್ತಿತರರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆಸಲಾದ ಮಾತುಕತೆಯಲ್ಲಿ ಇಂತಹ ಮಹತ್ವದ ನಿರ್ಧಾರಕ್ಕೆ ಬರಲಾಯಿತು.
PR

ರಾಮು ನಿರ್ಮಾಣದ 'ಕಂಠೀರವ'ದಲ್ಲಿ ಶುಭಾ ಪೂಂಜಾ ಮತ್ತು ರಿಷಿಕಾ ಸಿಂಗ್‌ ಇಬ್ಬಿಬ್ಬರು ನಾಯಕಿಯರು. ಇದಕ್ಕೆ ಆಕ್ಷನ್ ಕಟ್ ಹೇಳಿರುವುದು ತುಷಾರ್ ರಂಗನಾಥ್. ತೆಲುಗಿನ 'ಸಿಂಹಾದ್ರಿ' ರಿಮೇಕ್. ಆದರೆ ಬಾಸ್ ಅಪ್ಪಟ ಸ್ವಮೇಕ್ ಎಂದು ರಘು ಹೇಳಿಕೊಂಡಿದ್ದಾರೆ.

ಬಹುನಿರೀಕ್ಷೆಯಲ್ಲಿ ದರ್ಶನ್...
2010ರ ವರ್ಷದಲ್ಲಿ ಒಂದೇ ಒಂದು ಹಿಟ್ ಚಿತ್ರ ನೀಡಲು ವಿಫಲನಾಗಿರುವ ದರ್ಶನ್ 2011ರ ವರ್ಷದಲ್ಲಿ ಬಹು ನಿರೀಕ್ಷೆಯಲ್ಲಿದ್ದಾರೆ. ಐತಿಹಾಸಿಕ ಚಿತ್ರದಲ್ಲೂ ನಟಿಸುತ್ತಿರುವ ಅವರು ಬಾಸ್ ಮೂಲಕ ವರ್ಷದ ಖಾತೆ ತೆರೆಯುತ್ತಿದ್ದಾರೆ.

ರಮೇಶ್ ಯಾದವ್ ನಿರ್ಮಾಪಕರಾಗಿರುವ ಬಾಸ್ ನಿರ್ದೇಶಿಸಿದ್ದು ರಘುರಾಜ್. ಕೇವಲ ರಘುರಾಜ್ ಎಂದರೆ ನೆನಪಿಗೆ ಬರುತ್ತಾರೋ ಇಲ್ಲವೋ? ಜೀ ಟಿವಿ, ಈ ಟಿವಿ ರಘುರಾಜ್ ಎಂದರೆ ಗೊತ್ತಾಗಬಹುದು. ಅವರ ಮೊದಲ ಚಿತ್ರವಿದು. ಜತೆಗೆ ದ್ವಿಪಾತ್ರದಲ್ಲಿ ದರ್ಶನ್ ಅಭಿನಯಿಸಿರುವ ಮೊದಲ ಚಿತ್ರವೆಂಬ ನಿರೀಕ್ಷೆ ಬೇರೆ ಇದೆ.

ಜಾಕಿ, ಸೂಪರ್, ಮೈಲಾರಿ ಚಿತ್ರಗಳು ಕಂಡಿರುವ ಯಶಸ್ಸಿನಿಂದ ಈಗಾಗಲೇ ಉಬ್ಬಿ ಹೋಗಿರುವ ಕನ್ನಡ ಚಿತ್ರರಂಗ ಬಾಸ್ ಮೂಲಕ ಮತ್ತೊಂದು ಯಶಸ್ಸನ್ನು ದಾಖಲಿಸಲಿದೆಯೇ ಎನ್ನುವುದು ಚಿತ್ರಪ್ರೇಮಿಗಳ ಕುತೂಹಲ. ದರ್ಶನ್ ಅಭಿಮಾನಿಗಳೂ ಬಹುಕಾಲದಿಂದ ತಮ್ಮ ಗುರುವಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ.

ಬಾಸ್‌ ಹೆಸರೇ ದೊಡ್ಡ ಮನುಷ್ಯನನ್ನು ನೆನಪಿಸುತ್ತದೆ. ಅದರಂತೆ ಇಬ್ಬರು ನಾಯಕಿಯರು. ಮಲಯಾಳಿ ಬೆಡಗಿ ನವ್ಯಾ ನಾಯರ್ ಮತ್ತು ರೇಖಾ ನಮ್ಮ ಚಾಲೆಂಜಿಂಗ್ ಸ್ಟಾರ್ ಜತೆ ಹೆಜ್ಜೆ ಹಾಕಿದ್ದಾರೆ. ತಮಿಳು ನಟ ಶಿವಾಜಿ ಪ್ರಭು ಕೂಡ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ವರ್ಷದ ಹಲವು ಹಿಟ್ ಚಿತ್ರಗಳ ನಿರ್ದೇಶಕ ಹರಿಕೃಷ್ಣರ ಸಂಗೀತದ ಬಾಸ್ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಸಹಜವಾಗಿಯೇ ದರ್ಶನ್ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಖಂಡಿತಾ ಅಭಿಮಾನಿಗಳನ್ನು ಇದು ಸಂತೈಸಲಿದೆ ಎಂದು ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಂಠೀರವ, ವಿಜಯ್, ಬಾಸ್, ದರ್ಶನ್, ರಘುರಾಜ್, ಶುಭಾ ಪೂಂಜಾ