ಕನ್ನಡ ಚಿತ್ರರಂಗದ ನಂಬರ್ ವನ್ ಹೀರೋ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರೇಂಜೇ ಬದಲಾಗುತ್ತಿದೆ. ದಿನದಿಂದ ದಿನಕ್ಕೆ ಅವರ ಸುತ್ತ ಸುತ್ತುತ್ತಿರುವ ಜನಪ್ರಿಯ ನಿರ್ದೇಶಕರ (ಸೂರಿ- ಜಾಕಿ, ಅಣ್ಣಾ ಬಾಂಡ್. ಯೋಗರಾಜ್ ಭಟ್ - ಪರಮಾತ್ಮ) ಸಂಖ್ಯೆ ಹೆಚ್ಚುತ್ತಿದೆ. ಆ ಪಟ್ಟಿಯ ಲೇಟೆಸ್ಟ್ ಸೇರ್ಪಡೆ ಹ್ಯಾಟ್ರಿಕ್ ನಿರ್ದೇಶಕ ಶಶಾಂಕ್.
ಪ್ರಜ್ವಲ್ ದೇವರಾಜ್ ನಾಯಕನಾಗಿದ್ದ 'ಸಿಕ್ಸರ್' ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದ ಶಶಾಂಕ್ ಇದುವರೆಗೆ ಸೋಲೆಂಬುದನ್ನು ಕಂಡಿಲ್ಲ. ಎರಡನೇ ಚಿತ್ರ 'ಮೊಗ್ಗಿನ ಮನಸು' ಮತ್ತು ಮೂರನೇ ಚಿತ್ರ 'ಕೃಷ್ಣನ್ ಲವ್ ಸ್ಟೋರಿ'ಗಳೇ ಇದಕ್ಕೆ ಸಾಕ್ಷಿ.
ಶಶಾಂಕ್ ಅವರ ಹಿಂದಿನ ಮೂರೂ ಚಿತ್ರಗಳು ದೊಡ್ಡ ಸ್ಟಾರುಗಳದ್ದಲ್ಲ. ಆ ಚಿತ್ರಗಳ ಮೂಲಕ ಅವರು ಸ್ಟಾರ್ ಮೇಕರ್ ಆಗಿ ಹೊರ ಹೊಮ್ಮಿದವರು. ಪ್ರಜ್ವಲ್, ಯಶ್, ರಾಧಿಕಾ ಪಂಡಿತ್‌ರನ್ನು ಚಿತ್ರರಂಗದಲ್ಲಿ ನೆಲೆಯೂರಿಸಿದ್ದ ಖ್ಯಾತಿ ಅವರಿಗೆ ಸಂದಿತ್ತು. ಅಜಯ್ ರಾವ್‌ಗೆ ಪುನರ್ಜನ್ಮ ಕೊಟ್ಟದ್ದು ಕೂಡ ಅವರೇ.
MOKSHA
ಆದರೆ ಈ ಬಾರಿ ತನ್ನ ಪಥವನ್ನು ಶಶಾಂಕ್ ಬದಲಿಸಿದ್ದಾರೆ. ಯಶಸ್ವಿ ನಾಯಕನ ಹಿಂದೆ ಹೋಗಲು ನಿರ್ಧರಿಸಿದ್ದಾರೆ. ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಆದರೆ ಪುನೀತ್ ನಾಯಕನಾಗಿರುವುದು ಮಾತ್ರ ಖಚಿತ. ನಿರ್ಮಾಣಕ್ಕೆ ಇಳಿದಿರುವುದು ಶ್ರೀನಿವಾಸ ಮೂರ್ತಿ ಮತ್ತು ಸುರೇಶ್ ಗೌಡ. ಈ ಹಿಂದೆ 'ರಾಜ್ - ದಿ ಶೋ ಮ್ಯಾನ್' ನಿರ್ಮಿಸಿ ಕೋಟಿಗಟ್ಟಲೆ ಕಳೆದುಕೊಂಡವರು.
ಪುನೀತ್ ಮತ್ತು ಶಶಾಂಕ್ ಜತೆ ಇನ್ನಷ್ಟೇ ಒಪ್ಪಂದಕ್ಕೆ ಸಹಿ ಹಾಕಬೇಕಿದೆ. ಆದರೆ ಮಾತುಕತೆ ನಡೆದಿದೆ. ಪುನೀತ್‌ರನ್ನು ಹಾಕಿಕೊಂಡು ಚಿತ್ರ ಮಾಡಲು ಸಿದ್ಧತೆ ನಡೆಯುತ್ತಿದೆ. ದುನಿಯಾ ವಿಜಯ್ ನಾಯಕರಾಗಿರುವ 'ಜರಾಸಂಧ' ಶೂಟಿಂಗಿನಲ್ಲಿ ವ್ಯಸ್ತರಾಗಿರುವ ಶಶಾಂಕ್, ಅದನ್ನು ಮುಗಿಸಿದ ನಂತರ ಹೊಸ ಚಿತ್ರಕ್ಕೆ ಕೈ ಹಾಕಲಿದ್ದಾರೆ ಎಂದು ನಿರ್ಮಾಪಕ ಮೂರ್ತಿ ಹೇಳಿಕೊಂಡಿದ್ದಾರೆ.
ಇದನ್ನು ಸ್ವತಃ ಶಶಾಂಕ್ ಕೂಡ ಒಪ್ಪಿಕೊಂಡಿದ್ದಾರೆ. ಸುರೇಶ್ ಗೌಡ ನನ್ನನ್ನು ಭೇಟಿಯಾಗಿದ್ದು ಹೌದು. ಅತ್ಯುತ್ತಮ ಚಿತ್ರಕಥೆಯನ್ನು ಬರೆಯುವಂತೆ ನನಗೆ ಸೂಚ್ಯವಾಗಿ ಹೇಳಿದ್ದಾರೆ. ಅದನ್ನು ನೆರವೇರಿಸುವ ನಿಟ್ಟಿನಲ್ಲಿ, ನನ್ನ ಸಿನಿಮಾ ಜೀವನದಲ್ಲೇ ಸ್ಮರಣೀಯ ಎನಿಸುವಂತಹ ಕಥೆಯನ್ನು ಇದಕ್ಕಾಗಿ ಸಿದ್ಧಪಡಿಸುವ ಆಸಕ್ತಿ ಹೊಂದಿದ್ದೇನೆ ಎಂದಿದ್ದಾರೆ.
ಚಿತ್ರ ನಿರ್ಮಿಸುವ ವಿಚಾರ ಆರಂಭಿಕ ಹಂತದಲ್ಲಷ್ಟೇ ಇರುವುದರಿಂದ ನಾಯಕಿ, ಮತ್ತಿತರ ಕಲಾವಿದರು, ಸಂಗೀತ, ಛಾಯಾಗ್ರಾಹಕ ಮುಂತಾದ ವಿಚಾರಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ.