ನೆಟ್ಟಲ್ಲಿ 'ನೆನಪಿರಲಿ' ಪ್ರೇಮ್ ಬೆತ್ತಲೆ ಚಿತ್ರಗಳ ಕಾರುಬಾರು!
PR
ಹೌದು, ಇಂಟರ್ನೆಟ್ಟಿನಲ್ಲಿ ನಮ್ಮ 'ನೆನಪಿರಲಿ' ಖ್ಯಾತಿಯ ಸುಂದರಾಂಗ ಲವ್ಲೀ ಸ್ಟಾರ್ ಪ್ರೇಮ್ ಅವರ ಬಹುತೇಕ ಬೆತ್ತಲೆ ವೀಡಿಯೋ ತುಣುಕೊಂದು ಹರಿದಾಡುತ್ತಿದೆ. ಮೇಲ್ನೋಟಕ್ಕೆ ಇದು ಚಿತ್ರವೊಂದರ ಪ್ರೊಮೋ ಎಂದು ಯಾರೊಬ್ಬರೂ ಅಂದುಕೊಳ್ಳಲು ಸಾಧ್ಯವಿಲ್ಲ. ಆ ರೀತಿಯಿದೆ ಚಿತ್ರಣ. ಆದರೆ ಸ್ವತಃ ಪ್ರೇಮ್ ಇದನ್ನು ತಳ್ಳಿ ಹಾಕಿದ್ದಾರೆ. ನಾನು ಬೆತ್ತಲಾಗಿಲ್ಲ ಎಂದು ಹೇಳಿದ್ದಾರೆ.
ನಮ್ಮ ನಟೀಮಣಿಯರು ಬೆಳ್ಳಿತೆರೆಯಲ್ಲಿ ಬಿಚ್ಚಮ್ಮಗಳಾಗಿ ಮಿಂಚುತ್ತಿರುವುದು ಹೊಸತೇನಲ್ಲ. ಆದರೆ ಕನ್ನಡ ಚಿತ್ರರಂಗದ ಮಟ್ಟಿಗೆ ನಾಯಕರು ಬೆತ್ತಲಾಗಿರುವುದು 'ಸಿಂಗಲ್ ಪೀಸ್'ಗೆ ಸೀಮಿತ. ಪ್ರೇಮ್ ಅದನ್ನೂ ಕಳಚಿದರೇ ಎನ್ನುವುದೀಗ ಎದ್ದಿರುವ ಪ್ರಶ್ನೆ.
'ಐ ಯಾಮ್ ಸಾರಿ, ಬನ್ನಿ ಮತ್ತೆ ಪ್ರೀತ್ಸೋಣ' ಚಿತ್ರಕ್ಕೆ ಸಂಬಂಧಪಟ್ಟಂತೆ 'ಬೆಂಗಳೂರು ಮಿರರ್' ಮಾಡಿರುವ ವರದಿಯಿದು. ಪ್ರೇಮ್ ಬೆತ್ತಲಾಗಿರುವುದು ಹೌದಾಗಿದ್ದರೆ, ಅದು ಇದೇ ಚಿತ್ರದಲ್ಲಿ. ರವೀಂದ್ರ ಎಂಬ ಹೊಸಬ ಇದರ ನಿರ್ದೇಶಕ. ನಿರ್ಮಾಪಕರು ಕೂಡ ಅವರೇ.
ಸೋರಿಕೆಯಾಗಿರುವ ಫೋಟೋಗಳು ಅಥವಾ ವೀಡಿಯೋಗಳು ನಕಲಿಯೋ, ಅಸಲಿಯೋ ಎನ್ನುವುದು ಖಚಿತವಾಗಿಲ್ಲವಾದರೂ, ಇಲ್ಲಿ ಪ್ರೇಮ್ ಪೂರ್ಣ ಪ್ರಮಾಣದಲ್ಲಿ ಬೆತ್ತಲೆಯಾಗಲು ಹೊರಟಂತಿಲ್ಲ. ಬೆತ್ತಲೆಯಾದಂತೆ ತೆರೆಯಲ್ಲಿ ಕಾಣಬೇಕು, ಆದರೆ ಏನೂ ಕಾಣಬಾರದು ಎಂಬಂತೆ ಚಿತ್ರೀಕರಿಸಿದ್ದಾರೆ ಎಂಬುದು ತಕ್ಷಣಕ್ಕೆ ನೋಡಿದಾಗ ಅನುಭವಕ್ಕೆ ಬರುತ್ತದೆ.
PR
ವಿಚಿತ್ರವೆಂದರೆ ನಿರ್ದೇಶಕ ರವೀಂದ್ರ, ಈ ವೀಡಿಯೋ ನಕಲಿಯೋ ಅಥವಾ ಅಸಲಿಯೋ ಎಂಬುದನ್ನು ಒಪ್ಪಿಕೊಳ್ಳದೇ ಅಥವಾ ನಿರಾಕರಿಸದೇ ಇರುವುದು.
'ನಾನು ಈ ಚಿತ್ರದ ಯಾವುದೇ ಫೋಟೋ ಅಥವಾ ವೀಡಿಯೋವನ್ನು ಬಿಡುಗಡೆ ಮಾಡಿಲ್ಲ. ಚಿತ್ರ ಇನ್ನಷ್ಟೇ ಸೆನ್ಸಾರ್ ಆಗಬೇಕಿದೆ. ಇದೆಲ್ಲ (ಇಂಟರ್ನೆಟ್ಟಿನಲ್ಲಿ ವೀಡಿಯೋ ಹರಡಿರುವುದು) ಹೇಗೆ ನಡೆದಿದೆ ಎನ್ನುವುದೇ ಗೊತ್ತಿಲ್ಲ. ನಾನು ಇಲ್ಲಿ ಹೇಳಲೇಬೇಕಾದ ವಿಚಾರವೆಂದರೆ, ಇಡೀ ಕುಟುಂಬ ನೋಡಬಹುದಾದ ಚಿತ್ರ ಇದೆಂಬುದನ್ನು. ಇಲ್ಲಿ ಯಾವುದೇ ಆಕ್ಷೇಪಾರ್ಹ ದೃಶ್ಯಗಳಿರುವುದಿಲ್ಲ. ಆ ಚಿತ್ರಗಳು ನಮ್ಮ ಸಿನಿಮಾದ್ದೇ ಅಥವಾ ಅಲ್ಲವೇ ಎಂಬುದರ ಬಗ್ಗೆ ನಾನು ಏನನ್ನೂ ಹೇಳಲಾರೆ' ಎಂದು ಪ್ರತಿಕ್ರಿಯಿಸಿದ್ದಾರೆ.
ಆದರೆ ಪ್ರೇಮ್ ಖಡಾಖಂಡಿತವಾಗಿ ಹೇಳಿದ್ದಾರೆ. ನಾನು ಬೆತ್ತಲಾಗಿಲ್ಲ ಎಂದು ಹೇಳಿದ್ದಾರೆ.
'ಬನ್ನಿ, ಮತ್ತೆ ಪ್ರೀತ್ಸೋಣ ಚಿತ್ರದಲ್ಲಿ ನಾನು ಬೆತ್ತಲಾಗಿಲ್ಲ. ಅಂತಹ ಚಿತ್ರಗಳೇನಾದರೂ ಹರಡುತ್ತಿದ್ದರೆ, ಖಂಡಿತಾ ಅದು ನಕಲಿ. ಸಿನಿಮಾದಲ್ಲಿ ನಾನು ಅಂಗಿ ತೆಗೆಯುವ ದೃಶ್ಯವಿದೆ. ಇದೇನು ಈಗ ಹೊಸತಲ್ಲ. ಬಹುತೇಕ ನಾಯಕರಿಗೆ ಇದು ಮಾಮೂಲಿ. ಹಾಗೆ ಅತ್ಯುತ್ತಮ ಮೈಕಟ್ಟು ಹೊಂದಿರುವವರು ದೇಹ ಪ್ರದರ್ಶನ ಮಾಡುವುದರಿಂದ ಕನಿಷ್ಠ ಅಭಿಮಾನಿಗಳಾದರೂ ಸ್ಫೂರ್ತಿ ಪಡೆಯಬಹುದು' ಎಂದು ಸ್ಪಷ್ಟನೆ ನೀಡಿದ್ದಾರೆ.
ಬಹಿರಂಗವಾಗಿರುವ ಹಾಡೊಂದರಲ್ಲಿನ ಅಂಗಿ ಇಲ್ಲದ ದೃಶ್ಯ ಮತ್ತು ಹರಿದಾಡುತ್ತಿರುವ ಫೋಟೋಗಳು (ಚಿತ್ರಗಳನ್ನು ಗಮನಸಿ) ಬೇರೆ ಬೇರೆ. ಫೋಟೋಗಳಲ್ಲಿ ಪ್ರೇಮ್ ಅವರು ವಿದೇಶಿ ಡ್ಯಾನ್ಸರುಗಳ ನಡುವೆ ಕಾಣಿಸಿಕೊಂಡಿದ್ದಾರೆ. ಆದರೆ ಬಟ್ಟೆಯೇ ಇಲ್ಲದ ರೀತಿಯಲ್ಲಿ ಕಂಡು ಬರುವ ದೃಶ್ಯದಲ್ಲಿ ಅವರು ಸ್ನಾನ ಮುಗಿಸಿ ಹೊರಗೆ ಬರುವಂತಿದೆ. ಇದನ್ನು ಸ್ವತಃ ಪ್ರೇಮ್ ಮತ್ತು ರವೀಂದ್ರ ಇಬ್ಬರೂ ಒಪ್ಪಿಕೊಂಡಿದ್ದಾರೆ.
ಹಿಟ್ ಇಲ್ಲದೆ ಸೊರಗಿರುವ ಪ್ರೇಮ್ ಮತ್ತು ನಿರ್ದೇಶಕ ರವೀಂದ್ರ ಬ್ರೇಕ್ಗಾಗಿ ಈ ರೀತಿ ಗಿಮಿಕ್ ಮಾಡುತ್ತಿದ್ದಾರೋ ಅಥವಾ ನಿಜಕ್ಕೂ ಅಂತಹ ದೃಶ್ಯವೇನಾದರೂ ಚಿತ್ರದಲ್ಲಿದೆಯೋ ಎಂಬುದನ್ನು ಕಾದು ನೋಡಬೇಕು, ಅಷ್ಟೇ.