ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ರಜನಿಗೆ 'ಸೂಪರ್'ಸ್ಟಾರ್ ಉಪ್ಪಿ ನಿರ್ದೇಶನದಲ್ಲಿ ನಟಿಸುವಾಸೆ (Rajinikanth | Upendra | Super | Kannada film)
PR
ಕನ್ನಡ ಸಿನಿಮಾದಲ್ಲಿ ಮತ್ತೆ ನಟಿಸಬೇಕೆನ್ನುವುದು ನನ್ನಲ್ಲಿರುವ ಹಲವು ವರ್ಷಗಳ ಆಸೆ. ಅದು ಉಪೇಂದ್ರರ 'ಸೂಪರ್' ನೋಡಿದ ನಂತರ ದ್ವಿಗುಣಗೊಂಡಿದೆ. ಕನ್ನಡದಲ್ಲಿ ಖಂಡಿತಾ ನಟಿಸುತ್ತೇನೆ. ಆದರೆ ಉತ್ತಮ ಕಥೆಯದ್ದೇ ಕೊರತೆ. ಅಂತಹ ಕಥೆ ಸಿಕ್ಕಿದರೆ ಖಂಡಿತಾ ನಟಿಸುತ್ತೇನೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿಕೊಂಡಿದ್ದಾರೆ.

ಇದರ ಬೆನ್ನಿಗೆ ಚುರುಕಾಗಿರುವ ರಿಯಲ್ ಸ್ಟಾರ್ ಉಪ್ಪಿ, ಶೀಘ್ರದಲ್ಲೇ ಮತ್ತೆ ರಜನಿಕಾಂತ್ ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರಿಗೆ ಬಂದಿದ್ದ ರಜನಿಕಾಂತ್, ಮಲ್ಲೇಶ್ವರಂನಲ್ಲಿನ ರೇಣುಕಾಂಬ ಥಿಯೇಟರಿನಲ್ಲಿ ಉಪ್ಪಿ ನಿರ್ದೇಶನದ 'ಸೂಪರ್' ಚಿತ್ರ ನೋಡಿದ ನಂತರ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಉಪ್ಪಿಯಂತೆ ಭಿನ್ನವಾಗಿ ಯೋಚಿಸಲು ಇನ್ನೊಬ್ಬ ನಿರ್ದೇಶಕನಿಂದ ಸಾಧ್ಯವಿಲ್ಲ ಎಂದು ಹೊಗಳಿದರು.

ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಉಪೇಂದ್ರ ಕೂಡ ಒಬ್ಬರು. ಅವರ ನಟನೆ ಕೂಡ ವಿಶಿಷ್ಟ. ಅವರಂತೆ ಯೋಚಿಸುವ ನಿರ್ದೇಶಕರು ಭಾರತದ ಸಿನಿಮಾರಂಗದಲ್ಲಿ ತುಂಬಾ ಅಪರೂಪ. ಸೂಪರ್ ಚಿತ್ರವಂತೂ ಸಂಪೂರ್ಣ ಭಿನ್ನ ಮತ್ತು ಹೊಸತನವನ್ನು ಒಳಗೊಂಡಿರುವ ಸಿನಿಮಾ. ಖಂಡಿತಾ ನಿರ್ದೇಶನವನ್ನು ಮುಂದುವರಿಸಬೇಕು ಎಂದು ಅವರಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಉಪ್ಪಿಯನ್ನು ಅಪಾದಮಸ್ತಕ ಬಣ್ಣಿಸಿದ ರಜನಿ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೂ ಶುಭ ಹಾರೈಸಿದರು.
PR

ಪ್ರೇಮ್ ನಿರ್ದೇಶಿಸಿದ್ದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಜೋಗಿ'ಯನ್ನು ಮೆಚ್ಚಿಕೊಂಡಿದ್ದ ರಜನಿ, 'ಜೋಗಯ್ಯ'ದಲ್ಲಿ ನಟಿಸುತ್ತಾರೆ ಎನ್ನುವುದು ಕೇವಲ ರೂಮರ್ ಎನ್ನುವುದು ಇದೇ ಸಂದರ್ಭದಲ್ಲಿ ಸಾಬೀತಾಯಿತು.

'ಇಲ್ಲ, ನಾನು ಜೋಗಯ್ಯ ಚಿತ್ರದಲ್ಲಿ ನಟಿಸುತ್ತಿಲ್ಲ. ಇದು ಕೇವಲ ಗಾಳಿ ಸುದ್ದಿ. ಆದರೆ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ನನ್ನಲ್ಲಿದೆ. ಉತ್ತಮ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ. ಸೂಪರ್ ನೋಡಿದ ಮೇಲೆ ಆ ಆಸೆ ದ್ವಿಗುಣಗೊಂಡಿದೆ' ಎಂದರು ಸೂಪರ್ ಸ್ಟಾರ್.

ಈಗಾಗಲೇ 50 ದಿನ ಪೂರೈಸಿರುವ 'ಸೂಪರ್' ಶೀಘ್ರದಲ್ಲೇ ತಮಿಳು ಮತ್ತು ತೆಲುಗು ಆವೃತ್ತಿಗಳಲ್ಲಿ ಬಿಡುಗಡೆಯಾಗಲಿದೆ. ಜನವರಿ 20ಕ್ಕೆ ತೆಲುಗು ಆವೃತ್ತಿಯ ಆಡಿಯೋ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತಾದರೂ, ಅದನ್ನು ಮುಂದಕ್ಕೆ ಹಾಕಲಾಗಿತ್ತು. ಕನ್ನಡದಲ್ಲಿ ಚಿತ್ರವು 75 ದಿನ ಪೂರೈಸಿದ ನಂತರ ಆಡಿಯೋ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಈ ನಡುವೆ ರಜನಿ ಶ್ಲಾಘನೆಗೆ ಧನ್ಯವಾದ ಹೇಳಿರುವ ಉಪೇಂದ್ರ, ನಮ್ಮ ಮನವಿಯ ಮೇರೆಗೆ ಅವರು ಚಿತ್ರವನ್ನು ಬೆಂಗಳೂರಿನಲ್ಲಿ ವೀಕ್ಷಿಸಿದ್ದಾರೆ. ಅವರು ಚಿತ್ರವನ್ನು ಚೆನ್ನೈಯಲ್ಲೇ ನೋಡಲು ಬಯಸಿದ್ದರು ಎಂದು ತಿಳಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಯಿಂದ ಹೊಗಳಿಸಿಕೊಂಡಿರುವ 'ಸೂಪರ್'ಗೆ ಇದರಿಂದಾಗಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಬೇಡಿಕೆ ಹೆಚ್ಚಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಸಂಬಂಧಿತ ಲೇಖನಗಳು