ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಉಪೇಂದ್ರ-ಪ್ರೇಮ್ ಚಿತ್ರ ಆರಂಭಕ್ಕೂ ಮೊದಲೇ ಅಂತ್ಯ? (Upendra | Prem | Munirathna | Udayananu Tharam)
ಇಬ್ಬರು ಪ್ರತಿಭಾವಂತ ನಿರ್ದೇಶಕರು ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿಯಾದಾಗ ಹುಟ್ಟಿಕೊಂಡಿದ್ದ ಸಂಶಯಗಳು ಈಗ ಬಹುತೇಕ ನಿವಾರಣೆಯಾಗಿವೆ. 'ಡೈರೆಕ್ಟರ್ಸ್' ಎಂದು ಹೆಸರಿಸಲಾಗಿದ್ದ, ನಿರ್ದೇಶಕ-ನಟರಾದ ಉಪೇಂದ್ರ ಮತ್ತು ಪ್ರೇಮ್ ನಟಿಸಬೇಕಿದ್ದ ಚಿತ್ರ ನೆನೆಗುದಿಗೆ ಬಿದ್ದಿದೆ!
PR

ನಂಬಲರ್ಹ ಮೂಲಗಳ ಮಾಹಿತಿಯನ್ನೇ ನಂಬುವುದಾದರೆ ಇದು ಸತ್ಯ. ಈ ಹಿಂದೆ ಉಪೇಂದ್ರ ನಾಯಕರಾಗಿದ್ದ ರಕ್ತಕಣ್ಣೀರು ಮತ್ತು ಅನಾಥರು ಚಿತ್ರಗಳನ್ನು ನಿರ್ಮಿಸಿದ್ದ ಮುನಿರತ್ನ 'ಡೈರೆಕ್ಟರ್ಸ್'ಗೆ ನಿರ್ಮಾಪಕರು ಎಂದು ಹೇಳಲಾಗಿತ್ತು.

'ಉಪ್ಪಿ ಎಂಡ್ ಪ್ರೇಮ್' ಎಂಬ ಟ್ಯಾಗ್‌ಲೈನ್ ನಿಗದಿಯಾಗಿದ್ದ ಚಿತ್ರಕ್ಕೆ ಫೆಬ್ರವರಿ 9ರಂದು ಮುಹೂರ್ತ ನಡೆಯಲಿದೆ, ಬೆನ್ನಿಗೆ ಚಿತ್ರೀಕರಣ ಆರಂಭವಾಗುತ್ತದೆ, ಬಹುಶಃ ಸಾಧು ಕೋಕಿಲಾ ಅವರು ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ಸ್ವತಃ ಪ್ರೇಮ್ ಕೆಲ ದಿನಗಳ ಹಿಂದೆ ಹೇಳಿಕೊಂಡಿದ್ದರು.

ಆದರೆ ಇತ್ತೀಚಿನ ಮಾಹಿತಿಗಳ ಪ್ರಕಾರ ಗುರುಕಿರಣ್ ಸಂಗೀತ ನೀಡಬೇಕಿದ್ದ, ಮೋಹನ್‌ಲಾಲ್-ಶ್ರೀನಿವಾಸನ್ ಅಭಿನಯದ ಮಲಯಾಳಿ ಚಿತ್ರ 'ಉದಯನಾನ್ ತಾರಂ' (ಉದಯನೇ ನಾಯಕ) ಕನ್ನಡ ಆವೃತ್ತಿ 'ಡೈರೆಕ್ಟರ್ಸ್'ನ್ನು ಸದ್ಯಕ್ಕೆ ಕೈ ಬಿಡಲಾಗಿದೆ. ಇದಕ್ಕೇನು ಕಾರಣ ಎನ್ನುವುದು ಇದುವರೆಗೆ ಅಸ್ಪಷ್ಟ.

ಅದರ ಬದಲಿಗೆ ಉಪೇಂದ್ರ ಈಗ ಮಲಯಾಳಂ ನಿರ್ದೇಶಕ ಅನೀಶ್ ವರ್ಮಾ ಚಿತ್ರದಲ್ಲಿ ನಟಿಸಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಇದರ ಚಿತ್ರೀಕರಣ ಆರಂಭವಾಗಲಿದೆ. 'ಜಾಕಿ' ಖ್ಯಾತಿಯ ಭಾವನಾ ಇಲ್ಲಿ ಉಪ್ಪಿಗೆ ನಾಯಕಿ.

ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಇದನ್ನು ನಿರ್ಮಿಸುತ್ತಿರುವುದು ಮಲಯಾಳಿ ನಿರ್ಮಾಪಕ ಅನ್ವರ್. ಸಂಗೀತ ಜೆಸ್ಸಿ ಗಿಫ್ಟ್ ಅವರದ್ದು. 'ವೈಲ್' ತಮಿಳು ಚಿತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದ ಕಣ್ಣನ್ ಛಾಯಾಗ್ರಾಹಕ.

ಪ್ರಸಕ್ತ 'ಸೂಪರ್' ತಮಿಳು ಆವೃತ್ತಿಯಲ್ಲಿ ಬ್ಯುಸಿಯಾಗಿರುವ ಉಪೇಂದ್ರ, ಅದನ್ನು ಮುಗಿಸಿದ ನಂತರ ಹೊಸ ಚಿತ್ರದತ್ತ ಹೊರಳಲಿದ್ದಾರೆ.

ಇತ್ತೀಚೆಗೆ ಬಂದ ಸುದ್ದಿ..
ಪ್ರೇಮ್-ಉಪೇಂದ್ರ ನಾಯಕರಾಗಬೇಕಾಗಿದ್ದ 'ಡೈರೆಕ್ಟರ್ಸ್' ಚಿತ್ರ ನಿರ್ಮಾಣವನ್ನು ಕೈ ಬಿಡಲಾಗಿರುವುದು ಅಧಿಕೃತವಾಗಿದೆ. ಇದನ್ನು ಹೇಳಿರುವುದು ಚಿತ್ರದ ನಿರ್ಮಾಪಕರೆಂದು ಹೇಳಲಾಗಿದ್ದ ಮುನಿರತ್ನಂ. ಸಾಕಷ್ಟು ಚರ್ಚೆ ನಡೆಸಿದ ನಂತರ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಲೇಖನಗಳು