ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ತುಳು ಚಿತ್ರಕ್ಕೆ ಹಾಡಲಿದ್ದಾರೆ ಉದಿತ್ ನಾರಾಯಣ್ (Oriyarduri Asal | Udit Narayan | SPB | Vijayakumar Kodailbail)
ಪ್ರಸಿದ್ಧ ನಾಟಕಕಾರ ವಿಜಯ ಕುಮಾರ್ ಕೋಡಿಯಾಲ್ ಬೈಲ್ ಅವರ ತುಳು ನಾಟಕ 'ಒರಿಯರ್ದೊರಿ ಅಸಲ್' ಮುಂದಿನ ತಿಂಗಳು ಚಲನಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಸಂಗೀತ ದಿಗ್ಗಜರಾದ ಗುರುಕಿರಣ್, ಉದಿತ್ ನಾರಾಯಣ್ ಪ್ರಥಮ ಬಾರಿಗೆ ಹಾಡಲಿದ್ದಾರೆ. ಇವರೊಂದಿಗೆ ಏಳು ವರ್ಷದ ನಂತರ ತುಳು ಚಿತ್ರವೊಂದಕ್ಕೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರೂ ಹಾಡಲಿದ್ದಾರೆ.

ಹಲವಾರು ಪ್ರಸಿದ್ಧ ನಾಟಕಗಳನ್ನು ನಿರ್ದೇಶಿಸಿರುವ, ಸ್ವತಃ ನಾಟಕ ಕಲಾವಿದರೂ ಆಗಿರುವ ವಿಜಯ ಕುಮಾರ್ ಅವರು 'ಒರಿಯರ್ದೊರಿ ಅಸಲ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಲನಚಿತ್ರ ನಿರ್ದೇಶನದಲ್ಲಿ ಇದು ಇವರ ಪ್ರಥಮ ಪ್ರಯತ್ನ.

ಪ್ರಸಿದ್ಧ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಇದೇ ಪ್ರಥಮ ಬಾರಿಗೆ ತುಳು ಚಿತ್ರವೊಂದಕ್ಕೆ ಧ್ವನಿಗೂಡಿಸಿದ್ದಾರೆ. ಜತೆಗೆ ಸ್ವತಃ ತುಳುನಾಡಿನವರೇ ಆದ ಗುರುಕಿರಣ್ ಕೂಡ ಇದೇ ಪ್ರಥಮ ಬಾರಿಗೆ ತುಳು ಚಿತ್ರಕ್ಕೆ ಹಾಡಿದ್ದಾರೆ. ಇನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಲವಾರು ತುಳು ಚಿತ್ರ ಗೀತೆಗಳನ್ನು ಹಾಡಿದ್ದಾರಾದರೂ ಏಳು ವರ್ಷದ ನಂತರ ಹಾಡುತ್ತಿರುವುದು ವಿಶೇಷ.

'ಒರಿಯರ್ದೊರಿ ಅಸಲ್' ಚಿತ್ರದಲ್ಲಿ ತುಳು, ಮರಾಠಿ ಮತ್ತು ಹಿಂದಿ ಭಾಷೆಯನ್ನು ಒಳಗೊಂಡ ಗೀತೆಯೊಂದಿದೆ. ಮುಂಬೈ ಮೂಲದ ಯುವಕ ತನ್ನ ಪ್ರಿಯತಮೆ ಮಂಗಳೂರಿನ ಯುವತಿಯನ್ನು ಮುಂಬೈಗೆ ಆಹ್ವಾನಿಸುವ ಸನ್ನಿವೇಶವದು. ಮುಂಬೈ ಯುವಕನ ತುಳು ಉಚ್ಛಾರಣೆ ಅಸ್ಪಷ್ಟವಾಗಿ ಬಂದಿರುವುದರಿಂದಾಗಿ ಉದಿತ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ ನಿರ್ದೇಶಕ ವಿಜಯ ಕುಮಾರ್.

ಚಿತ್ರದ ತಾರಾಗಣದಲ್ಲಿ ನವೀನ್ ಡಿ. ಪಡೀಲ್, ಅರವಿಂದ್ ಬೊಳಾರ್, ರಾಜೇಶ್ ಬಂಟ್ವಾಳ್ ಮುಂತಾದವರಿದ್ದಾರೆ. ಏಪ್ರಿಲ್ 17ಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.