ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ನಿಜವಾಗ್ಲೂ ಸಾಯೋ ನಾಟಕ ಬೇಕಿತ್ತಾ? ಹರೀಶ್‌ರಾಜ್ ಪಶ್ಚಾತ್ತಾಪ! (Gun | Harish Raj | Kempe Gowda | Santhosh Theater)
PR
'ಗನ್' ಕನ್ನಡ ಚಿತ್ರವನ್ನು ಬಿಡುಗಡೆಗೊಂಡ ಎರಡನೆ ವಾರದಲ್ಲೇ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲು ಹೊರಟಿರುವುದರ ವಿರುದ್ಧ ಆಕ್ರೋಶಪೂರ್ಣ ಪ್ರತಿಭಟನೆ ವ್ಯಕ್ತಪಡಿಸಿ ಚಿತ್ರಮಂದಿರದ ಮೇಲ್ಛಾವಣಿ ಮೇಲೆ ಆತ್ಮಹತ್ಯೆಗೆ ಪ್ರಯತ್ನಿಸಿದ ತನ್ನ ವರ್ತನೆಯ ಬಗ್ಗೆ ಚಿತ್ರದ ನಾಯಕ ನಟ ಹಾಗೂ ನಿರ್ದೇಶಕ ಹರೀಶ್ ರಾಜ್ ಇದೀಗ ಪರಿತಪಿಸುತ್ತಿದ್ದಾರೆ.

'ಛೇ! ಒಂದು ಥರಾ ಹುಚ್ಚನ ರೀತಿ ಆಡಿಬಿಟ್ಟೆ. ಈ ಬಗ್ಗೆ ಬಹಳ ಬೇಸರಗೊಂಡಿದ್ದೇನೆ. ನನಗೇ ಅಸಹ್ಯ ಅನಿಸುತ್ತಿದೆ. ನಾನು ಮಾಡಿದ್ದು ತಪ್ಪು ಅಂತ ನನಗೇ ಅನ್ನಿಸತೊಡಗಿದೆ. ಆ ಕ್ಷಣದಲ್ಲಿ ಅದು ತಪ್ಪೇ. ನಾನು ಮಾಡಿಕೊಂಡಿದ್ದನ್ನು ಮನೆಯಲ್ಲಿ ಮತ್ತೊಮ್ಮೆ ಮಗದೊಮ್ಮೆ ಟಿ.ವಿ.ಯಲ್ಲಿ ನೋಡಿದಾಗ ಬೇಸರವಾಯಿತು. ರಿಯಲಿ ನಾನು ದುಡುಕಬಾರದಿತ್ತು'. ಹೀಗೆಂದು ಹರೀಶ್‌ರಾಜ್ ಈಗ ಪಶ್ಚಾತ್ತಾಪದ ನುಡಿಗಳನ್ನಾಡುತ್ತಿದ್ದಾರೆ.

'ಅದೊಂದು ಕೆಟ್ಟ ಗಳಿಗೆ. ನಾನು ಏಕೆ ಆ ರೀತಿ ಮಾಡಿದೆ ಅಂತ ಇಂದಿಗೂ ಗೊತ್ತಾಗುತ್ತಿಲ್ಲ' ಎಂದೂ ಅವರು ಹೇಳಿದ್ದಾರೆ.

'ಕಷ್ಟಪಟ್ಟು ಮಾಡಿದ ಚಿತ್ರದ ಬಗ್ಗೆ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ ಎರಡೇ ವಾರಕ್ಕೆ ಮುಖ್ಯ ಚಿತ್ರಮಂದಿರದಿಂದ ತೆಗೆದು ಹಾಕುತ್ತಾರೆ ಎಂದಾಗ ಯಾರಿಗಾದರೂ ನೋವಾಗದೇ ಇರದು. ಅದೇ ನನಗೂ ಆಗಿದ್ದು. ತಕ್ಷಣಕ್ಕೆ ಏನೂ ತೋಚದೆ ಒತ್ತಡ ಮತ್ತು ಬೇಸರದಿಂದ ಹಾಗೆ ಮಾಡಿಕೊಳ್ಳಬೇಕಾಯಿತು' ಎಂತಲೂ ಅವರು ಸಮರ್ಥಿಸಿಕೊಂಡರು.

ಸ್ವಾರಸ್ಯದ ಸಂಗತಿ ಎಂದರೆ ಹರೀಶ್‌ರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಅಂದು ಚಿತ್ರಮಂದಿರದ ಮಹಡಿ ಏರಿದಾಗ ದೃಶ್ಯ ಮಾಧ್ಯಮದವರು ಅಲ್ಲೇ ಇದ್ದರು. ಯಾಕೆಂದರೆ ಅವರನ್ನು ಅಲ್ಲಿಗೆ ಕರೆಸಿಕೊಂಡವರೇ ಸ್ವತಃ ಹರೀಶ್‌ರಾಜ್! ದೃಶ್ಯ ಮಾಧ್ಯಮದವರು ಪ್ರಸಂಗವನ್ನು ಸಂಪೂರ್ಣ ನೇರ ಪ್ರಸಾರ ಮಾಡಿಬಿಟ್ಟರು.

ಚಿತ್ರಮಂದಿರದೆದುರು ಪ್ರತಿಭಟನೆ ಕೂರಬೇಕೆಂದು ನಿರ್ಧರಿಸಿದ್ದೆ. ಆದರೆ 'ಕೆಂಪೇಗೌಡ'ನ ಅಭಿಮಾನಿಯೊಬ್ಬ ಆಡಿದ ಚುಚ್ಚು ಮಾತಿನಿಂದ ನೊಂದು ಅಷ್ಟೆಲ್ಲಾ ಮಾಡಬೇಕಾಯಿತೆಂದೂ ಸ್ಪಷ್ಟನೆ ನೀಡಿದ್ದಾರೆ ಹರೀಶ್‌ರಾಜ್. ಸದ್ಯಕ್ಕಂತೂ 'ಗನ್' ಗಂಡಾಂತರದಿಂದ ಹರೀಶ್‌ರಾಜ್ ಹೊರಬಂದಿದ್ದಾರೆ. 'ಶರಾಬಿಯ ಖರಾಬ್ ಲವ್ ಕಹಾನಿ' ಎಂಬ ಹೊಸ ಟ್ಯಾಗ್‌ಲೈನ್‌ನೊಂದಿಗೆ ಯಾವುದೇ ಬದಲಾವಣೆ ಮಾಡದೆ 'ಗನ್' ಚಿತ್ರವನ್ನು ಬೇರೊಂದು ಟಾಕೀಸ್‌ನಲ್ಲಿ ಮರುಬಿಡುಗಡೆ ಮಾಡಿದ್ದಾರೆ.
ಇವನ್ನೂ ಓದಿ