ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸುದ್ದಿ/ಗಾಸಿಪ್ » ಒಳ್ಳೇ ಹುಡುಗನ ಹಿಂದೆ ಬಿದ್ದ ಓಂಪ್ರಕಾಶ್ (Cotten pete | Om Prakash Rao | Ajay rao | Olle huduga)
PR
'ಕಾಟನ್‌ ಪೇಟೆ' ಇನ್ನೂ ಪೂರ್ತಿ ಮುಗಿದಿಲ್ಲ. 'ಚಂದ್ಯಾ' ಚಿತ್ರದ ಶೂಟಿಂಗ್ ಕಳೆದ ವಾರವಷ್ಟೇ ಪ್ರಾರಂಭವಾಗಿದೆ. ಇನ್ನೂ ದಿನ ಚೆನ್ನಾಗಿದೆ ಎಂದು 'ಶಿವ' ಸಹಾ ಶುರುವಾಗಿದೆ. ಇವೆಲ್ಲದರ ಮಧ್ಯೆ ಓಂಪ್ರಕಾಶ್ ರಾವ್ ಇನ್ನೆರಡು ಹೊಸ ಚಿತ್ರಗಳ ಬಗ್ಗೆ ಈಗಾಗಲೇ ಯೋಚಿಸಲು ಆರಂಭಿಸಿದ್ದಾರೆ.

ಆ ಪೈಕಿ ಒಂದು ಚಿತ್ರದಲ್ಲಿ ಅಜಯ್ ರಾವ್ ನಟಿಸುತ್ತಾರೆ. ಚಿತ್ರದ ಹೆಸರು 'ಒಳ್ಳೇಹುಡುಗ'. ಕೆಲವು ದಿನಗಳ ಹಿಂದೆಯೇ ಓಂಪ್ರಕಾಶ್ ರಾವ್ ಅವರು ಅಜಯ್ ಜೊತೆಗೆ ಒಂದು ಚಿತ್ರವನ್ನು ಮಾಡುವುದಾಗಿ ಹೇಳಿಕೊಂಡಿದ್ದರು. ಚಿತ್ರ ಗೌರಿ ಹಬ್ಬಕ್ಕೆ ಸೆಟ್ಟೇರಲಿದೆಯಂತೆ. ಅಣಜಿ ನಾಗರಾಜ್ ಈ ಚಿತ್ರವನ್ನು ನಿರ್ಮಿಸುತ್ತಾರೆ.

ನಾಯಕಿಯ ಆಯ್ಕೆ ಇನ್ನೂ ಆಗಿಲ್ಲ. ಆದರೆ ಅಜಯ್ ರಾವ್ ನಟಿಸುವುದು ಪಕ್ಕಾ ಆಗಿದೆ. ಇದು ಅಜಯ್ ಮತ್ತು ಓಂಪ್ರಕಾಶ್ ಕಾಂಬಿನೇಶನ್‌ನ ಮೊದಲ ಚಿತ್ರ. ಇದು ಸೆಟ್ಟೇರಿದ ಮರುದಿನವೇ ಅಂದರೆ ಗಣಪತಿ ಹಬ್ಬದಂದು (ಸೆಪ್ಟಂಬರ್ 4) ಆದಿತ್ಯ ಅಭಿನಯದ ಇನ್ನೊಂದು ಚಿತ್ರವನ್ನು ಓಂಪ್ರಕಾಶ್ ಶುರುಮಾಡಲಿದ್ದಾರೆ.

ಈ ಚಿತ್ರದಲ್ಲಿ ಆದಿತ್ಯನಿಗೆ ನಾಯಕಿಯಾಗಿ ನಿಖಿತಾ ಅಭಿನಯಿಸಲಿದ್ದಾರೆ. ಈಗಾಗಲೇ ಆದಿತ್ಯ ಮತ್ತು ನಿಖಿತಾ 'ಕಾಟನ್ ಪೇಟೆ' ಚಿತ್ರದಲ್ಲಿ ನಟಿಸಿದ್ದಾಗಿದೆ. ಜೊತೆಗೆ 'ಬಾಸ್' ಮತ್ತು 'ಪ್ರಿನ್ಸ್‌' ಚಿತ್ರಗಳಲ್ಲಿ ಓಂ ಅವರು ನಿಖಿತಾರನ್ನು ನಿರ್ದೇಶಿಸಿದ್ದು ಮುಂದಿನದು ಓಂ-ನಿಖಿತಾ ಕಾಂಬಿನೇಶನ್‌ನ ನಾಲ್ಕನೇ ಚಿತ್ರವಾಗಲಿದೆ.

ಅಲ್ಲಿಗೆ ಎರಡು ದಿನಗಳಲ್ಲಿ ಸತತವಾಗಿ ಒಂದರ ಹಿಂದೊಂದು ಎರಡು ಚಿತ್ರಗಳನ್ನು ಆರಂಭಿಸುವ ಮೂಲಕ ಓಂ ಹೊಸದೊಂದು ದಾಖಲೆ ಮಾಡುತ್ತಿದ್ದಾರೆ. ಚಿತ್ರೀಕರಣ ಹಂತದಲ್ಲಿರುವ ಮೂರು ಚಿತ್ರಗಳು. ಎರಡು ಶುರುವಾಗಬೇಕಿರುವ ಚಿತ್ರಗಳು. ಒಂದು ಬಿಡುಗಡೆಯಾಗಬೇಕಾದ 'ಏಕೆ 56' ಚಿತ್ರ. ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಆಗುತ್ತಿರುವ ನಾನಾ ದಾಖಲೆಗಳ ಜೊತೆಗೆ ಓಂಪ್ರಕಾಶ್‌ರನ್ನೂ ಸೇರಿಸಬಹುದೇನೋ!
ಇವನ್ನೂ ಓದಿ