ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ದಿನೇಶ್ ಬಾಬು ನೂರನೆ ಚಿತ್ರ 'ಲಿಮಿಟ್' ಪೂರ್ಣ (Limit | Dinesh babu | Ananth Nag | Oorvashi)
ತನ್ನ ನೂರನೆ ಚಿತ್ರ 'ಲಿಮಿಟ್'ನ ಚಿತ್ರೀಕರಣ ಪೂರ್ಣಗೊಂಡ ಸಂತಸದಲ್ಲಿದ್ದಾರೆ ನಿರ್ದೇಶಕ ದಿನೇಶ್ ಬಾಬು. ಉಮೇಶ್ ಬಣಕಾರ್ ಹಾಗೂ ಅನಿಲ್ ಪಿ.ಮೆಣಸಿನಕಾಯಿ ನಿರ್ಮಾಣದ 'ಲಿಮಿಟ್' ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯಕ್ಕೆ ಹಿನ್ನೆಲೆ ಸಂಗೀತದ ಟಚ್ ಪಡೆಯುತ್ತಿದೆ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದೊಂದು ಪಕ್ಕಾ ಹಾಸ್ಯ ಪ್ರಧಾನ ಚಿತ್ರ. ಅನಂತನಾಗ್ ಮತ್ತು ಊರ್ವಶಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಇಲ್ಲಿ ಹಾಸ್ಯದ ಹೊನಲಿಗೇನೂ ಕೊರತೆ ಇರದು.

ಈ ಚಿತ್ರವನ್ನು ಕೇವಲ ಎರಡು ವಾರದಲ್ಲೇ ಚಿತ್ರೀಕರಿಸಿರುವುದು ವಿಶೇಷ. ನಿರ್ದೇಶಕ ದಿನೇಶ್ ಬಾಬು ಅವರ ಕಾರ್ಯ ವೈಖರಿಯೇ ಹಾಗೆ. ಕಡಿಮೆ ಅವಧಿಯಲ್ಲಿ, ಕಡಿಮೆ ಬಜೆಟ್‌ನಲ್ಲಿ, ಹೆಚ್ಚು ಮನರಂಜನೆಯ ಚಿತ್ರ ಕೊಡಬೇಕೆಂಬುದು ಅವರ ಧ್ಯೇಯ.

ಹಿರಿಯ ನಿರ್ದೇಶಕ ಬಿ.ರಾಮಮೂರ್ತಿ ಅವರ ಪುತ್ರ ಅಕ್ಷಯ್ 'ಲಿಮಿಟ್'ನ ನಾಯಕ ನಟ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಪ್' ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡಿದ್ದ ನಯನಾ ಈ ಚಿತ್ರದ ನಾಯಕಿ. ಉಳಿದಂತೆ ತಾರಾ ಬಳಗದಲ್ಲಿ ಶ್ರೀನಿವಾಸಮೂರ್ತಿ, ರಾಜು ತಾಳಿಕೋಟೆ, ತಾರಾ, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ.

ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬಂದು ನಗು ನಗುತ್ತಾ ಹೊರ ಬರುವಂತಹ ಚಿತ್ರ ಕೊಡಬೇಕು ಎಂದು ನಿರ್ಧರಿಸಿರುವಂತಿರುವ ದಿನೇಶ್ ಬಾಬು ಈ ಹಿಂದೆಯೂ ಅದೇ ಮಾದರಿಯಲ್ಲಿ 'ಎರಡನೇ ಮದುವೆ' ಚಿತ್ರವನ್ನು ಹೊರ ತಂದಿದ್ದು ಇದು ಪ್ರೇಕ್ಷಕರ ಮನ ಗೆದ್ದಿದ್ದೇ ತಡ 'ಮತ್ತೊಂದು ಮದುವೇನಾ' ಚಿತ್ರವನ್ನೂ ನಿರ್ದೇಶಿಸಿದರು.

ಅನಂತನಾಗ್ ಮತ್ತು ಸುಹಾಸಿನಿ ಜೋಡಿಯ ಅಭಿನಯವೇ ಈ ಚಿತ್ರದ ಹೈಲೈಟ್. ಇದೂ ಕೂಡ ಉಮೇಶ್ ಬಣಕಾರ್ ಮತ್ತು ಅನಿಲ್ ಪಿ. ಮೆಣಸಿನಕಾಯಿ ಅವರ ನಿರ್ಮಾಣದಲ್ಲಿ ತಯಾರಾದ ಚಿತ್ರವಾಗಿದ್ದು ಬಿಡುಗಡೆಯ ಹೊಸ್ತಿಲಿಗೆ ಬಂದಿದೆ.

'ಲಿಮಿಟ್'ಗೆ ಗಿರಿಧರ್ ಸಂಗೀತವಿದೆ. ಸುರೇಶ್ ಭೈರಸಂದ್ರ ಅವರ ಛಾಯಾಗ್ರಹಣವಿದೆ. ತಾರಾ ಬಳಗದಲ್ಲಿ ನವೀನ್ ಕೃಷ್ಣ, ಪ್ರಿಯಾಂಕ, ತಾರಾ, ರಾಜು ತಾಳಿಕೋಟೆ, ಉಮೇಶ್, ಶರಣ್ ಮತ್ತಿತರ ಹಾಸ್ಯ ಕಲಾವಿದರ ದಂಡೇ ಇದೆ.
ಇವನ್ನೂ ಓದಿ