ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ಮುನ್ನೋಟ » ಈ ವಾರ ತೆರೆಗೆ 'ಮತ್ತೊಂದ್ ಮದುವೆನಾ!' (Dinesh Babu | Matthond Maduvena | Priyanka | Naveen Krishna)
PR
ನಿರ್ದೇಶಕ ದಿನೇಶ್ ಬಾಬು ಬಗ್ಗೆ ಹೇಳುವುದಾದರೆ ಒಂದು ಮಾತಂತೂ ಹದಿನಾರಾಣೆ ಸತ್ಯ. ತೆರೆಯ ಮೇಲೆ ಬರುವ ಅವರ ಕಲ್ಪನೆಯ ಪಾತ್ರಗಳು ಪ್ರೇಕ್ಷಕರನ್ನು ಕಂಡಾಪಟ್ಟೆ ನಕ್ಕು ನಲಿಸದೆ ಇರಲಾರವು. ಅಷ್ಟೇ ಅಲ್ಲ ಚಿತ್ರಮಂದಿರದಿಂದ ಹೊರಬಂದ ನಂತರವೂ ಕೆಲವೊಮ್ಮೆ ಅವರು ನಿರೂಪಿಸಿದ ಪಾತ್ರಗಳು ಬಿಟ್ಟೂ ಬಿಡದೆ ಕಾಡುವುದೂ ಉಂಟು.

ಸೆಂಟಿಮೆಂಟ್ ಮತ್ತು ಹಾಸ್ಯ ಸೇರಿದಂತೆ ಎಲ್ಲ ಬಗೆಯ ಅಂಶಗಳನ್ನು ಕುಟುಂಬ ವರ್ಗ ಒಟ್ಟಿಗೆ ಕುಳಿತು ನೋಡುವಂತಹ ಚಿತ್ರಗಳನ್ನೇ ನೀಡುವ ಮೂಲಕ ತಾನೋರ್ವ ಯಶಸ್ವೀ ನಿರ್ದೇಶಕ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ದಿನೇಶ್ ಬಾಬು ತನ್ನ 'ಎರಡನೇ ಮದುವೆ' ಮುಗಿಸಿದ್ದೇ ತಡ ಅವರೀಗ 'ಮತ್ತೊಂದ್ ಮದುವೆ' ಮಾಡಿಕೊಂಡು ಪ್ರೇಕ್ಷಕರೆದರು ಬರುತ್ತಿದ್ದಾರೆ. ನಿಜ. ಅವರ ಬಹು ನೀರೀಕ್ಷೆಯ ಪಕ್ಕಾ ಹಾಸ್ಯ ಪ್ರಧಾನ ಚಿತ್ರ 'ಮತ್ತೊಂದ್ ಮದುವೆನಾ!' ಏಪ್ರಿಲ್ 8ರಂದು ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

ಹಾಗಂತ ಈ ಚಿತ್ರದಲ್ಲಿ ಕೇವಲ ಹಾಸ್ಯವಷ್ಟೇ ಅಲ್ಲ. ಒಂದಷ್ಟು ಸೆಂಟಿಮೆಂಟ್ ಇದೆ. ಕುಟುಂಬ ವರ್ಗಕ್ಕೆ ವಿಶಿಷ್ಟ ಸಂದೇಶವೂ ಇದೆ ಎಂಬುದು ಚಿತ್ರ ತಂಡದ ಅಂಬೋಣ.

ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿ ಬಂದ 'ಅಮೃತವರ್ಷಿಣಿ' ಮತ್ತು 'ಲಾಲಿ'ಯಂಥ ಪಕ್ಕಾ ಇಮೋಶನಲ್ ಚಿತ್ರಗಳು ಇಂದಿಗೂ ಪ್ರೇಕ್ಷಕರನ್ನು ಕಾಡುತ್ತಿರುವುದು ನಿಜ. ಎಲ್ಲರಿಗೂ ತಮ್ಮ ತಮ್ಮ ವೈಯಕ್ತಿಕ ಅಭಿರುಚಿ ಏನೆಂಬುದು ಮನವರಿಕೆಯಾಗಬೇಕು ಎಂಬ ಸದುದ್ದೇಶದಿಂದಲೇ ದಿನೇಶ್ ಬಾಬು ಅವರು ಹಾಸ್ಯ ಪ್ರಧಾನ ಚಿತ್ರಗಳಿಗೇ ಹೆಚ್ಚು ಒತ್ತು ಕೊಡುತ್ತಾ ಬಂದಿದ್ದಾರೆ.

'ಚಿತ್ರ', 'ಹೆಂಡ್ತಿಗೆ ಹೇಳ್ತೀನಿ', 'ನನ್ ಹೆಂಡ್ತಿ ಚೆನ್ನಾಗಿದ್ದಾಳೆ', 'ಮಿ.ಗರಗಸ', 'ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ' ಈ ಎಲ್ಲ ಚಿತ್ರಗಳಲ್ಲೂ ಕಾಮಿಡಿಯೇ ಹೈಲೈಟ್. ಮೇಲಾಗಿ ಕಡಿಮೆ ಕಾಲಾವಧಿಯಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ತಯಾರಿಸಿ ಕೊಡಬಹುದೆಂಬುದನ್ನು ಕನ್ನಡ ಚಿತ್ರರಂಗಕ್ಕೆ ತೋರಿಸಿಕೊಟ್ಟವರು ಇದೇ ದಿನೇಶ್.
ಇದರಿಂದ ನಿರ್ಮಾಪಕರಿಗೂ ಎಲ್ಲಿಲ್ಲದ ಅನುಕೂಲ. ಇದೇ ನಿಯಮ ಪಾಲಿಸಿ 'ಎರಡನೇ ಮದುವೆ' ಚಿತ್ರ ಮಾಡಿದರು. ಇದು ಯಶಸ್ವಿಯಾಗುತ್ತಲೇ ಪುನಃ ಅನಂತ್‌ನಾಗ್-ಸುಹಾಸಿನಿ ಕಾಂಬಿನೇಶನ್ನಲ್ಲಿ 'ಮತ್ತೊಂದ್ ಮದುವೆನಾ!' ಚಿತ್ರವನ್ನು ತಯಾರಿಸಿ ತೆರೆಗರ್ಪಿಸುತ್ತಿದ್ದಾರೆ ದಿನೇಶ್ ಬಾಬು.

ಈ ಚಿತ್ರದ ಕಥೆ ತೀರಾ ಸಿಂಪಲ್. ಒಂದು ಕುಟುಂಬದಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಕೆಲವು ಹಾಸ್ಯಮಯ ಘಟನೆಗಳೇ ಈ ಚಿತ್ರದ ಕಥಾವಸ್ತು. ಮಧ್ಯಮ ವರ್ಗದವರ ನಿಜ ಜೀವನದಲ್ಲಿ ಎದುರಾಗುವ ಸಮಸ್ಯೆ, ಸಂಭ್ರಮ, ನಂಬಿಕೆ ಮತ್ತು ಅಪನಂಬಿಕೆಗಳೇ ಚಿತ್ರದ ಕಥಾ ಹಂದರ.

ಒಟ್ಟಾರೆ ಆರಂಭದಿಂದ ಮುಕ್ತಾಯದ ವರೆಗೂ ಪ್ರೇಕ್ಷಕರನ್ನು ನಗಿಸುವುದೇ ದಿನೇಶ್ ಬಾಬು ಅವರ ಪ್ರಧಾನ ಉದ್ದೇಶ. ಆ ದೃಷ್ಟಿಯಿಂದ ಈ ಚಿತ್ರ ಮನರಂಜನೆಯ ರಸದೂಟ ಆಗುವುದಂತೂ ಖಾತ್ರಿ. ಇದಕ್ಕೆ ಪ್ರಮುಖ ಸಾಕ್ಷಿಯಾಗಲಿದೆ ಅನಂತ್‌ನಾಗ್, ಸುಹಾಸಿನಿ, ಪ್ರಿಯಾಂಕ, ನವೀನ್‌ ಕೃಷ್ಣ, ತಾರಾ, ರಾಜು ತಾಳಿಕೋಟೆ ಅವರ ಅಭಿನಯದ ಮೋಡಿ.

'ನನ್ನ ಹದಿನೈದು ವರ್ಷಗಳ ಅನುಭವದಲ್ಲಿ ನನಗಿದು ಸ್ಪೆಶಲ್ ಚಿತ್ರ ಎನಿಸಿದ್ದು, ಖಂಡಿತಾ ಈ ಚಿತ್ರ ಪ್ರೇಕ್ಷಕರ ಮನ ಗೆಲ್ಲುತ್ತೆ' ಎಂದು ನಾಯಕ ನವೀನ್‌ ಕೃಷ್ಣ ಭವಿಷ್ಯ ನುಡಿದಿದ್ದಾರಾದರೆ, ನಾಯಕಿ ಪ್ರಿಯಾಂಕಾ 'ಎಲ್ಲರಿಗೂ ಕಚಗುಳಿ ಇಡುವ ನವಿರಾದ ಹಾಸ್ಯ ಚಿತ್ರದುದ್ದಕ್ಕೂ ಇದ್ದು ಇದೊಂದು ಫುಲ್ ಎಂಟರ್ಟೈನರ್ ಸಿನಿಮಾ' ಎಂದಿದ್ದಾರೆ.

ಹಣ ಕೊಟ್ಟು ಚಿತ್ರಮಂದಿರಕ್ಕೆ ಪ್ರವೇಶಿಸುವ ಪ್ರೇಕ್ಷಕನಿಗೆ ಎರಡು ಗಂಟೆ ಮನರಂಜನೆ ಬೇಕು. ಅದನ್ನು 'ಮತ್ತೊಂದು ಮದುವೆನಾ!' ನೀಡಲಿದೆ ಎಂಬ ಗ್ಯಾರಂಟಿ ಕೊಡುತ್ತೇನೆ ಎಂದಿದ್ದಾರೆ ನಿರ್ದೇಶಕ ದಿನೇಶ್ ಬಾಬು.
ಇವನ್ನೂ ಓದಿ