ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ಸಿನಿಮಾ ವಿಮರ್ಶೆ » ಮೆಚ್ಚುಗೆಗೆ ಪಾತ್ರರಾಗುವ 'ಹುಡುಗರು' (Hudugaru | Puneet rajkumar | Kannada cinema | Sandalwood | Radhika pandit)
PIB
ರೀಮೇಕ್ ಮಾಡುವುದಿದ್ದರೆ ಎಂತಹ ಚಿತ್ರವನ್ನು ರೀಮೇಕ್ ಮಾಡಬೇಕು ಎಂಬುದಕ್ಕೆ 'ಹುಡುಗರು' ಚಿತ್ರ ಉತ್ತಮ ಉದಾಹರಣೆಯಾಗಿ ತೆರೆಗೆ ಬಂದಿದೆ. 'ಹುಡುಗರು' ಚಿತ್ರ ತಮಿಳಿನ 'ನಾಡೋಡಿಗಳ್' ಚಿತ್ರದ ರೀಮೇಕ್. ಇದೇ ಚಿತ್ರ ತೆಲುಗಿನಲ್ಲಿ 'ಶಂಭೋ ಶಿವ ಶಂಭೋ' ಹೆಸರಿನಲ್ಲಿ ರೀಮೇಕಾಗಿದೆ. ಎರಡೂ ಯಶಸ್ವೀ ಚಿತ್ರಗಳೇ. ಆದರೆ ಕನ್ನಡ ಚಿತ್ರ ಎರಡೂ ಮೂಲ ಚಿತ್ರಕ್ಕಿಂತ ಹೆಚ್ಚು ಲವಲವಿಕೆಯಿಂದ ಕೂಡಿದೆಯೆನ್ನಬಹುದು.

'ಹುಡುಗರು' ಚಿತ್ರದಲ್ಲಿ ಗಡುಸಿನ ಕಥೆಯಿಲ್ಲ. ಹೇಳಿಕೊಳ್ಳುವಂಥ ವಿಪರೀತ ರಂಜನೆಯಿಲ್ಲ. ಆಕ್ಷನ್ ದೃಶ್ಯಗಳಿಗೂ ವಿಶೇಷ ಅವಕಾಶಗಳಿಲ್ಲ. ಆದರೂ ಚಿತ್ರ ಪ್ರೇಕ್ಷಕರ ಗಮನ ಸೆಳೆದು ಅವರನ್ನು ಚಿತ್ರಮಂದಿರದಲ್ಲಿ ಹಿಡಿದಿಡುತ್ತದೆ. ಇದಕ್ಕೆ ಕಾರಣ ಚಿತ್ರದ ಹುಡುಗರಲ್ಲಿನ ಅದಮ್ಯ ಚೈತನ್ಯ ಮತ್ತು ಅವರ ಜೀವನಾಸಕ್ತಿ.

ಪ್ರೀತಿ ಸಿಗುವುದು ದೊಡ್ಡ ಸಂಗತಿಯಲ್ಲ. ಪ್ರೀತಿಗಾಗಿ ದೊಡ್ಡವರ ವಿರೋಧ ಕಟ್ಟಿಕೊಳ್ಳುವುದೂ ದೊಡ್ಡದಲ್ಲ. ಆದರೆ ಎಲ್ಲರನ್ನೂ ಧಿಕ್ಕರಿಸಿ ಪ್ರೀತಿಯನ್ನು ಆಜೀವ ಪರ್ಯಂತ ಕಾಯ್ದುಕೊಳ್ಳುವುದೇ ಮುಖ್ಯ ಎಂಬುದೇ ಈ ಸಿನೆಮಾದ ಮೂಲ ತಿರುಳು.

ಪ್ರೀತಿ ಉಳಿಸಿಕೊಳ್ಳುವುದಕ್ಕೆ ಇಲ್ಲಿ ಒಬ್ಬ ಕಿವುಡನಾಗುತ್ತಾನೆ. ಇನ್ನೊಬ್ಬ ತನ್ನ ಪ್ರೀತಿಯನ್ನೇ ಬಲಿಕೊಡುತ್ತಾನೆ. ಮತ್ತೊಬ್ಬ ತನ್ನೊಂದು ಕಾಲು ಕಳೆದುಕೊಳ್ಳುತ್ತಾನೆ. ಮನಸ್ಸನ್ನು ತಟ್ಟುವ ಅದೆಷ್ಟೋ ಭಾವುಕ ಕ್ಷಣಗಳನ್ನು ಮೂಲ ಕಥೆಗೆ ಚ್ಯುತಿ ಬರದ ಹಾಗೆ ಕಟ್ಟಿಕೊಡುವುದು ನಿರ್ದೇಶಕ ಮಾದೇಶ್ ಅವರಿಗೆ ಇಲ್ಲಿ ಸಾಧ್ಯವಾಗಿದೆ. ಮೇಲಾಗಿ ಪುನೀತ್, ಕಿಟ್ಟಿ ಮತ್ತು ಯೋಗಿ ಅವರ ಪ್ರಬುದ್ಧ ಅಭಿನಯ ಚಿತ್ರವನ್ನು ಅನಾಮತ್ತಾಗಿ ಮೇಲೆತ್ತಿದೆ. ಪುನೀತ್, ಕಿಟ್ಟಿ ಮತ್ತು ಯೋಗೀಶ್ ಅವರು ಒಟ್ಟಾಗಿ ನಟಿಸಿರುವುದು 'ಹುಡುಗರು' ಚಿತ್ರದ ಆಕರ್ಷಣೆಗಳಲ್ಲೊಂದು. ಪುನೀತ್ ಎಂದಿನಂತೆ ಆಕರ್ಷಕ ಬಿಂದು. ಸಂಭಾಷಣೆಗಳನ್ನು ಅಚ್ಚುಕಟ್ಟಾಗಿ ಮಂಡಿಸುವುದರಲ್ಲಿ ಅವರು ತೋರಿಸಿರುವ ಪ್ರಾವಿಣ್ಯ ಎಲ್ಲರ ಹುಬ್ಬೇರಿಸುತ್ತದೆ. ಗೆಳೆಯರ ಪಾತ್ರಗಳಲ್ಲಿ ಕಿಟ್ಟಿ ಮತ್ತು ಯೋಗೀಶ್ ಅಭಿನಯ ನ್ಯಾಯ ಒದಗಿಸಿದೆ.

ತಿಂಡಿಪೋತಿಯಾಗಿ, ಮಾತಿನ ಮಲ್ಲಿಯಾಗಿ, ಮರಿಜಿಂಕೆಯಂತೆ ಕಾಣುವ ರಾಧಿಕಾ ಪಂಡಿತ್ ಪುಟ್ಟ ಪಾತ್ರದಲ್ಲೇ ಎಲ್ಲರ ಗಮನ ಸೆಳೆಯುತ್ತಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಮತ್ತು ಗುರುಪ್ರಸಾದ್ ಸಂಭಾಷಣೆ ಚಿತ್ರದ ಮತ್ತೆರಡು ಗುಣಾತ್ಮಕ ಅಂಶಗಳು. ಹೀರೋಯಿಸಂ ಸುತ್ತ ಸುತ್ತುವ ಚಿತ್ರ ಇದಲ್ಲ. ಕೇವಲ ಚಿತ್ರಕಥೆಯ ಮೇಲೆಯೇ ಚಿತ್ರ ಸಾಗುವ ಕಾರಣ ಇದು ಪ್ರೇಕ್ಷಕನಿಗೆಲ್ಲೂ ಬೋರ್ ಹೊಡೆಸದು. ಕಿಡ್ನ್ಯಾಪ್ ಹಿನ್ನೆಲೆಯಲ್ಲಿ ಬರುವ 'ಶಂಭೋ ಶಿವ ಶಂಭೋ' ಹಾಡಿನ ಹಿನ್ನೆಲೆಯಲ್ಲೇ ನಡೆವ ರವಿವರ್ಮ ಅವರ ನಿರ್ದೇಶನದ ಸಾಹಸ ದೃಶ್ಯಗಳೇ ಪ್ರೇಕ್ಷಕರ ಮನರಂಜನೆಗೆ ಧಾರಾಳವೆನಿಸುತ್ತವೆ.

ಪ್ರೇಮಿಗಳನ್ನು ಒಂದುಗೂಡಿಸುವಲ್ಲಿ ಸ್ನೇಹಿತರ ಪಾತ್ರ ಮುಖ್ಯವಾದದ್ದು. ಅವರ ಶ್ರಮ ನಗೆಪಾಟಲಾಗದಂತೆ ಬಾಳು ನಡೆಸುವ ಹೊಣೆ ಪ್ರೇಮಿಗಳದ್ದು ಎಂಬ ಪ್ರೇಮ ಸಿದ್ದಾಂತದ ಮಂಡನೆಯೊಂದಿಗೆ ಚಿತ್ರ ಕೊನೆಗೊಳ್ಳುತ್ತದೆ.
ಇವನ್ನೂ ಓದಿ