ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಮನರಂಜನೆಯೆಂದರೆ ಟೈಂಪಾಸ್ ಅಲ್ಲ:ಸುದೇಶ್ ರಾವ್
ತಾರಾ ಪರಿಚಯ
Feedback Print Bookmark and Share
 
ಬಹುಮುಖ ಪ್ರತಿಭೆ ಕೆಲವರಿಗೇ ಸೀಮಿತ. ಅಂಥವರ ಸಾಲಿಗೆ ಉಡುಪಿಯ ಸುದೇಶ್ ಕೆ. ರಾವ್ ಸೇರ್ಪಡೆಯಾಗುತ್ತಾರೆ. ಅವರು ಧಾರಾವಾಹಿ ನಟನಾಗಿ ವಿಶೇಷ ಗಮನ ಸೆಳೆದಿದ್ದು, ಸುಮಾರು 30 ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತ ಧಾರಾವಾಹಿಗಳಲ್ಲಿ ನಟಿಸುತ್ತಲೇ ಅತ್ತ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಸುದೇಶ್ ಅವರೊಂದಿಗೆ ಪುಟ್ಟ ಸಂದರ್ಶನ

ಈ ರಂಗಕ್ಕೆ ತಮ್ಮ ಪ್ರವೇಶ ಹೇಗಾಯಿತು?
ನಿರ್ದೇಶಕನಾಗಲು ಉಡುಪಿಯಿಂದ ಬೆಂಗಳೂರಿಗೆ ಬಂದೆ. ಆದರೆ ಮಣಿಪಾಲ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಸಂಸ್ಥೆಯವರು ನನಗೆ ಬಣ್ಣ ಹಚ್ಚಿ ಕಲಾವಿದನಾಗಿ ಮಾರ್ಪಡಿಸಿದರು. ಮೊದಲು ಅದಲು ಬದಲು ಧಾರಾವಾಹಿಯಲ್ಲಿ ನಟಿಸಿದ್ದರೂ ಅದು ನನಗೆ ಹೆಸರು ತರಲಿಲ್ಲ. ನಂತರದ ಧಾರಾವಾಹಿ ಬಿದಿಗೆ ಚಂದ್ರಮ. ಹೀಗೆ ಧಾರಾವಾಹಿಗಳಲ್ಲಿ ಅವಕಾಶ ದೊರೆಯುವುದು ಮುಂದುವರೆಯಿತು. ಪ್ರಸ್ತುತ ಪ್ರೀತಿ ಇಲ್ಲದ ಮೇಲೆ, ರಂಗೋಲಿ, ಲಕ್ಷ್ಮಿ ಹಾಗೂ ಮುಂಗಾರಿನ ಕನಸು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೇನೆ.

ನಿಮ್ಮ ಹಿನ್ನೆಲೆ ಏನು?
ನಾನು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೊದಲು ಎಲೆಕ್ಟ್ತ್ರಿಷಿಯನ್, ಫೋಟೋಗ್ರಾಫರ್, ಚಿನ್ನಾಭರಣಗಳನ್ನು ತಯಾರಿಸುವವ, ಟೈಲರ್ ಹಿಗೆ ಹಲವು ವೃತ್ತಿಗಳಲ್ಲಿ ನಿರತವಾಗಿದ್ದರೂ ಬಿಡುವಿನ ವೇಳೆ ನಾನೇ ಆರಂಭಿಸಿದ ಸಂಗಮ್ ಕಲಾವಿದರ್ ನಾಟಕ ತಂಡದ ಮೂಲಕ ತುಳು ನಾಟಕಗಳನ್ನು ಪ್ರದರ್ಶಿಸುತ್ತಿದ್ದೆ. ಈ ನಾಟಕಗಳ ಪೈಕಿ ಉಂದು ರಾಮಾಯಣ ಅತ್ತ ನಾಟಕ ಜನ ಮೆಚ್ಚುಗೆ ಪಡೆಯಿತು. ನಾನು ರಚಿಸಿದ ಹಸಿರು ನಾಡಿನ ಕೆಂಪು ಹಾದಿ ನಾಟಕ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಐವತ್ತಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡಿದೆ.

ನೀವು ರಚಿಸಿ ಪ್ರಯೋಗಿಸಿದ ಪ್ರಮುಖ ನಾಟಕಗಳಾವುವು?
ನಾನು ರಚಿಸಿ ನಿರ್ದೇಶಿಸಿದ ಆರು ನಾಟಕಗಳಲ್ಲಿ ಎರಡು ಕಾಮಿಡಿ, ಅಂಗಾರ, ಅಹಲ್ಯ, ಚಂದ್ರಪ್ಪನಗೌಡನ ಬೆಟ್ಟದಯಾತ್ರೆ ಸಾಮಾಜಿಕ ಸಮಸ್ಯೆಗಳನ್ನು ಕುರಿತ ನಾಟಕಗಳು. ನಾನು ನಾಟಕಗಳ ಮೂಲಕ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ.

ನಿಮ್ಮ ದೃಷ್ಟಿಯಲ್ಲಿ ಮನರಂಜನೆ ಎಂದರೆ ?
ಮನರಂಜನೆ ಎಂದರೆ ಟೈಂಪಾಸ್ ಅಲ್ಲ. ಬೇರೇ ರೀತಿಯಲ್ಲಿ ಪ್ರತಿಯೊಬ್ಬರೂ ಯೋಚಿಸಬೇಕು. ಸಾಮಾನ್ಯರಿಗಿಂತ ಭಿನ್ನವಾಗಿ ಸಮಾಜಕ್ಕೆ ಉಪಯೋಗುವಂತೆ ಚಿಂತನಶೀಲರಾಗಿ ಬೆಳೆಯಬೇಕು.

ನಿಮ್ಮ ಯಶಸ್ಸಿಗೆ ಕಾರಣರಾರು ?
ಕಲಾವಿದರು ತಮ್ಮ ಪ್ರತಿಭೆಯಿಂದ ಯಶಸ್ಸು ಗಳಿಸಿದರೂ ಕೀರ್ತಿ ನಿರ್ದೇಶಕರಿಗೆ ಸಲ್ಲುತ್ತದೆ. ಎಲ್ಲ ಪಾತ್ರಗಳನ್ನು ಸೃಷ್ಟಿ ಮಾಡುವವರು ನಿರ್ದೇಶಕರು. ಹಾಗಾಗಿ ಅವರ ಶ್ರಮವಿಲ್ಲದೆ ಕಲಾವಿದರು ಯಶಸ್ಸು ಗಳಿಸಲು ಸಾಧ್ಯವಿಲ್ಲ.

ಧಾರಾವಾಹಿಗಳಲ್ಲಿ ನಟಿಸುತ್ತಿರುವುದರಿಂದ ನೀವು ರಂಗಭೂಮಿಯ ಸಂಪರ್ಕ ಕಡಿದುಕೊಂಡಂತಾಗಿಲ್ಲವೇ?
ಇಲ್ಲ. ಇಲ್ಲ. ನನ್ನ ಮೂಲ ನೆಲೆಯಾದ ರಂಗಭೂಮಿಯನ್ನು ಮರೆಯುವುದಿಲ್ಲ. ನಾಟಕಗಳನ್ನು ಬರೆಯುತ್ತಾ ನಿರ್ದೇಶಿಸುತ್ತಿದ್ದೇನೆ. ಸಮಯ ದೊರೆತಾಗ ನಾಟಕ ಪ್ರದರ್ಶಿಸುತ್ತೇನೆ.

ಹಸಿರು ನಾಡಿನ ಕೆಂಪು ಹಾದಿ ಕುರಿತು ಇನ್ನಷ್ಟು ಮಾಹಿತಿ ನೀಡಿ
ಈ ನಾಟಕ ರಾಮಾಯಣವನ್ನು ಆಧರಿಸಿ ರಚಿಸಿದ ಕೃತಿ. ನಾಟಕದಲ್ಲಿ ರಾಮ ಪೊಲೀಸ್ ಅಧಿಕಾರಿಯಾಗಿರುತ್ತಾನೆ. ರಾವಣ ನಕ್ಸಲೈಟ್. ಸೀತೆ ವಕೀಲೆ. ರಾವಣನ ತಂಗಿ ಪೊಲೀಸ್ ಎನ್ ಕೌಂಟರ್‌ನಲ್ಲಿ ಸತ್ತಾಗ ರಾವಣ ಸೀತೆಯನ್ನು ಅಪಹರಿಸಿ ಕಾಡಿನಲ್ಲಿ ಇಡುತ್ತಾನೆ. ವಿಭೀಷಣ ರಾವಣನ ಜೊತೆ ಇದ್ದರೂ ನಕ್ಸಲೀಯ (ರಾವಣ) ಹೇಗೆ ದಾರಿ ತಪ್ಪಿದ್ದಾನೆ ಎಂದು ಸೀತೆ ಹೇಳುವ ಮೂಲಕ ಅವನ ಮನಪರಿವರ್ತನೆ ಮಾಡುತ್ತಾಳೆ. ಇಲ್ಲಿ ಅಂಜನೇಯ ಅರಣ್ಯಾಧಿಕಾರಿ. ಅವನಿಗೆ ಕಾಡಿನ ದಾರಿ ಗೊತ್ತಿದ್ದರೂ ತಾವು ದಾಳಿ ಮಾಡಿದಾಗ ಎಲ್ಲಿ ಸೀತೆಗೆ ತೊಂದರೆಯಾಗುತ್ತಿದೆಯೋ ಎಂಬ ಆತಂಕ. ಕೊನೆಗೆ ರಾಮ ಅವನಿಗೆ ಸೀತೆಗಿಂತ ಕರ್ತವ್ಯ ಮುಖ್ಯ ಎಂದು ವಿವರಿಸುತ್ತಾನೆ. ದಾಳಿ ನಡೆಯುತ್ತದೆ. ರಾವಣ ಹತನಾಗುತ್ತಾನೆ. ಹೀಗೆ ರಾಮಾಯಣದ ಪಾತ್ರಗಳನ್ನು ಇಟ್ಟುಕೊಂಡು ರಚಿಸಿದ ಈ ನಾಟಕವನ್ನು ನೋಡಿ ಹಿರಿಯ ಪೊಲೀಸ್ ಅಧಿಕಾರಿ ಭರಣಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಮೆಚ್ಚಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳಾದ ತೀರ್ಥಹಳ್ಳಿ, ಆಗುಂಬೆ, ದಕ್ಷಿಣ ಕನ್ನಡ ಜಿಲ್ಲೆ ಮುಂತಾದೆಡೆ ಪೊಲೀಸ್ ರಕ್ಷಣೆ ಯಲ್ಲಿ ನಾಟಕ ಪ್ರದರ್ಶನ ನಡೆಯಿತು. ಇಲ್ಲಿ ಅಚ್ಚರಿಯ ವಿಷಯವೆಂದರೆ ನಕ್ಸಲರು ಬಂದು ಈ ನಾಟಕ ನೋಡಿದ್ದಾರೆ.