ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಡಾ| ವಿಠ್ಠಲ್‌ರಾವ್
ತಾರಾ ಪರಿಚಯ
Feedback Print Bookmark and Share
 
ಕಿರುತೆರೆಯಲ್ಲಿ ಡಾ| ವಿಠ್ಠಲ್‌ರಾವ್ ಎಂದೇ ಖ್ಯಾತರಾದ ರವಿಶಂಕರ್ ಹಾಡುಗಾರನಾಗಿ ಬಣ್ಣದ ಬದುಕಿಗೆ ಪ್ರವೇಶಿಸಿದರಾದರೂ ಕೊನೆಗೆ ಅಪ್ಪಿಕೊಂಡದ್ದು ಅಭಿನಯ ಕ್ಷೇತ್ರವನ್ನು.

ಮಂಜುಳಾ ಗುರುರಾಜ್‌ರವರ ಸಾಧನಾ ಸಂಗೀತ ಶಾಲೆಯಿಂದ ಪ್ರಾರಂಭವಾದ ಅವರ ಪಯಣ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ತೊಡಗಿಸಿಕೊಂಡು, ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ ಡಾ|ವಿಠ್ಠಲ್‌ರಾವ್ ಪಾತ್ರದ ಮೂಲಕ ಖ್ಯಾತಿ ಗಳಿಸಿ, ಈಗ ಪಯಣ ಚಿತ್ರದ ನಾಯಕನಾಗುವವರೆಗೆ ಸಾಗಿದೆ. ರವಿಶಂಕರ್ ಜೊತೆ ನಡೆಸಿದ ಸಂದರ್ಶನದ ಒಂದು ಝಲಕ್ ಇಲ್ಲಿದೆ:

ಕಿರುತೆರೆಯ ಖ್ಯಾತಿ ಬೆನ್ನಿಗಿರುವಾಗಲೇ ಚಿತ್ರರಂಗಕ್ಕೆ ಬಂದಿದ್ದೀರಿ. ಒಮ್ಮೆ ಹಿಂತಿರುಗಿ ನೋಡಿದಾಗ ಕಿರುತೆರೆಯಲ್ಲಿ ನಟಿಸಿದ್ದಕ್ಕೆ ವಿಷಾದವಾಗುತ್ತಿದೆಯೇ?

ಖಂಡಿತಾ ಇಲ್ಲ. ಕಿರುತೆರೆಯನ್ನು ನಾನು ಮರೆಯಲಿಕ್ಕೇ ಸಾಧ್ಯವಿಲ್ಲ. ನನ್ನ ನಟನಾ ಬದುಕಿಗೆ ಭದ್ರ ಬುನಾದಿಯನ್ನು ಹಾಕಿದ್ದೇ ಕಿರುತೆರೆ. ಹಾಗಾಗಿ ಈ ಕುರಿತು ನನಗೆ ವಿಷಾದವಿಲ್ಲ.

ಅಲ್ಲಿನ ಪಾತ್ರದ ನಿರ್ವಹಣೆಗೂ ಇಲ್ಲಿನದಕ್ಕೂ ನೀವು ಕಂಡುಕೊಂಡ ವ್ಯತ್ಯಾಸವೇನು?

ಅಭಿನಯ ಎಲ್ಲಿ ಹೋದರೂ ಅಭಿನಯವೇ. ಅದಕ್ಕೆ ಕಿರುತೆರೆ-ಹಿರಿತೆರೆ ಎಂಬ ವ್ಯತ್ಯಾಸವಿರುವುದಿಲ್ಲ. ಹ್ಞಾಂ, ಒಂದು ವಿಷಯ ಹೇಳಬೇಕೆಂದರೆ, ನಿರಂತರ 4 ವರ್ಷಗಳ ಕಾಲ ಸಿಲ್ಲಿಲಲ್ಲಿ ಧಾರಾವಾಹಿಯಲ್ಲಿ ನಟಿಸಿದ್ದು ಬೋರ್ ಆಗಿತ್ತು. ನನಗೂ ಸ್ವಲ್ಪ ಬದಲಾವಣೆ ಬೇಕಿತ್ತು. ಅದಿಲ್ಲಿ ಸಿಕ್ಕಿದೆ.

ಹಾಗಾದರೆ ಕಿರುತೆರೆಯಲ್ಲಿ ವೈವಿಧ್ಯಮಯ ಪಾತ್ರಕ್ಕೆ ಅವಕಾಶವಿಲ್ಲ ಎಂದು ನಿಮ್ಮಭಿಪ್ರಾಯವೇ?

ಛೇ! ನಾನು ಹಾಗೆ ಹೇಳಲಿಲ್ಲ. ದಿನಂಪ್ರತಿ ಪ್ರಸಾರವಾಗುವ ಧಾರಾವಾಹಿಯಲ್ಲಿ, ಅದರಲ್ಲೂ ಹಾಸ್ಯ ಧಾರಾವಾಹಿಯಲ್ಲಿ ನನ್ನ ಪಾತ್ರದ ಸಾಧ್ಯತೆಗಳ ಕುರಿತು ವೀಕ್ಷಕರಿಗೆ ಗೊತ್ತಾಗಿ ಹೋಗಿರುತ್ತದೆ. ಮತ್ತೊಂದು ಧಾರಾವಾಹಿ ಸಿಗುವ ತನಕ ವೈವಿಧ್ಯತೆಗೆ ಅವಕಾಶವಿರುವುದಿಲ್ಲ. ಆದರೆ ಸಿನಿಮಾದಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿದೆ.

ಪಯಣ ಚಿತ್ರದ ಕುರಿತು ಒಂದಷ್ಟು ಹೇಳಿ?

ಇದರಲ್ಲಿ ನನ್ನದು ಕಾರಿನ ಚಾಲಕನ ಪಾತ್ರ. ಕಣ್ಣುಗಳಲ್ಲಿ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಜೀವನ ಸಾಗಿಸುವ ನಾಯಕನ ಕಥೆ ಇದರಲ್ಲಿದೆ. ಕನಸು ನನಸಾಗುತ್ತದೆಯೇ ಇಲ್ಲವೇ ಎಂಬುದನ್ನು ಚಿತ್ರ ನೋಡಿಯೇ ತಿಳಿಯಬೇಕು. ಈಗಾಗಲೇ ಶೇಕಡಾ 60ರಷ್ಟು ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ.

ರವಿಶಂಕರ್ ಅಪ್ಪಟ ಪ್ರತಿಭಾವಂತ. ಪಯಣ ಚಿತ್ರದ ನಾಯಕನಂತೆಯೇ ಅಪರಿಮಿತ ಕನಸುಗಳನ್ನು ಹೊತ್ತು ಚಿತ್ರರಂಗ ಪ್ರವೇಶಿಸಿದ್ದಾರೆ. ಚಿತ್ರದ ನಾಯಕನ ಕನಸುಗಳು ನನಸಾಗಲಿ ಬಿಡಲಿ, ರವಿಶಂಕರ್ ಕನಸುಗಳು ನನಸಾಗಲಿ ಮತ್ತು ಡಾ| ವಿಠ್ಠಲ್‌ರಾವ್ ಪಾತ್ರವನ್ನು ಮರೆಸುವಂತಹ ಅಭಿನಯ ಪಯಣ ಚಿತ್ರದಲ್ಲಿ ಹೊರಹೊಮ್ಮಲಿ ಎಂದು ಆಶಿಸೋಣ