ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ
ಮುಖ್ಯ ಪುಟ ಮನರಂಜನೆ » ಸ್ಯಾಂಡಲ್ ವುಡ್ » ತಾರಾ ಪರಿಚಯ » ಕರೆಯೇ ಕೋಗಿಲೆ ಮಾಧವನಾ ಎನ್ನುತ್ತಿರುವ ಕೃಷ್ಣಾ ನಾಡಿಗ್
ತಾರಾ ಪರಿಚಯ
Feedback Print Bookmark and Share
 
ಮೊದಲನೇ ಚಿತ್ರದಲ್ಲಿ ಕ್ಲಾಪ್ ಬಾಯ್ ಆಗಿದ್ದು, ಎರಡನೇ ಚಿತ್ರದಲ್ಲಿ ಸಂಭಾಷಣೆಕಾರನಾಗುವವ ಮತ್ತೊಂದು ಚಿತ್ರ ಬರುವ ಹೊತ್ತಿಗೆ ಸಾಕ್ಷಾತ್ ಚಿತ್ರ ನಿರ್ದೇಶಕನೇ ಆಗಿ ಹೊರ ಹೊಮ್ಮುತ್ತಿರುವುದು ಕಾಲದ ಮಹಿಮೆಯಷ್ಟೇ ಅಲ್ಲ, ಈಗಿನ ಮಹಾತ್ಮೆ ಎನ್ನುವುದು ತಮಾಷೆಯ ಮಾತಾದರೂ ಅದೊಂಥರಾ ಕಹಿಸತ್ಯ.

ಆದ್ದರಿಂದಲೇ ಕೆಲ ಚಿತ್ರಗಳು ಬಂದಷ್ಟೇ ವೇಗವಾಗಿ ಚಿತ್ರಮಂದಿರದಿಂದ ಹೊರ ಹೋಗುತ್ತವೆ ಎಂಬುದೂ ಅಷ್ಟೇ ಸತ್ಯ. ಒಂದು ಚಿತ್ರವನ್ನು ಕಟ್ಟುವಾಗ ಏನೆಲ್ಲಾ ಹೋಮ್‌ವರ್ಕ್ ಮಾಡಿಕೊಳ್ಳಬೇಕು? ಅದಕ್ಕೆ ಸಿದ್ಧಸೂತ್ರಗಳು ಮಾತ್ರ ಇದ್ದರೆ ಸಾಕೇ? ಸಾಹಿತ್ಯವನ್ನು ಓದುವ ಅಭಿರುಚಿ ಇರಬೇಕಾಗುತ್ತದೆಯಲ್ಲವೇ? ಜೊತೆಗೆ ಒಂದಿಷ್ಟು ಜೀವನಾನುಭವವೂ ಬೇಕಲ್ಲವೇ? ತನ್ನ ಪಾಳಿ ಅಥವಾ ಸರದಿ ಬರುವವರೆಗೂ ತಾಳ್ಮೆಯಿಂದ ಕಾಯುವ ಹೃದಯವೂ ನಿರ್ದೇಶಕನಾಗುವವನಿಗೆ ಇರಬೇಕಲ್ಲವೇ? ಎಂಬ ಪ್ರಶ್ನೆಗಳು ಸದಭಿರುಚಿಯ ಚಿತ್ರಗಳ ಅಭಿಮಾನಿಗಳಲ್ಲಿ ಮೂಡುವುದು ಸಹಜ. ನಿರ್ದೇಶಕರಾಗ ಬಯಸುವ ಕೆಲವರು ತಾವು ಕ್ಯಾಪ್ಟನ್ ಆಫ್ ದ ಶಿಪ್ ಎಂದು ಭಾವಿಸಿ, ಆ ಕಲ್ಪನೆಯ ಹಡಗಿನಲ್ಲಿಯೇ ಪವಡಿಸುತ್ತಾರೆಯೇ ವಿನಃ, ಹಡಗಿನ ಕಪ್ತಾನಗಿರಿಯನ್ನು ಹೊರುವಷ್ಟರ ಮಟ್ಟಿಗಿನ ಅರ್ಹತೆ-ಸಿದ್ದಿ-ಸಾಧನೆ ತಮಗಿದೆಯೇ ಎಂದು ತಮ್ಮನ್ನೇ ಪ್ರಶ್ನಿಸಿಕೊಳ್ಳುವುದಿಲ್ಲ ಎಂಬುದೂ ಈಗ ಕಂಡು ಬರುತ್ತಿರುವ ಅಪ್ರಿಯ ಸತ್ಯ.

ಇಷ್ಟೆಲ್ಲಾ ಪೀಠಿಕೆ ನೀಡಬೇಕಾಗಿ ಬಂದಿದ್ದು ಕೃಷ್ಣಾ ನಾಡಿಗ್‌ಅವರನ್ನು ಕಂಡಾಗ. ಪ್ರಸ್ತುತ ಕರೆಯೇ ಕೋಗಿಲೆ ಮಾಧವನಾ ಎಂಬ ಚಿತ್ರವನ್ನು ನಾಡಿಗ್ ನಿರ್ದೇಶಿಸುತ್ತಿದ್ದಾರೆ. ನಾಡಿಗ್‌ಅವರಿಗಿದ್ದ ಪ್ರತಿಭೆಯ ಆಳವನ್ನು ಬಲ್ಲ ಅನೇಕರು ಇದು ಎಂದೋ ಆಗಬೇಕಿದ್ದ ಕೆಲಸ ಎಂದು ಹೇಳಿರುವುದು ಉತ್ಪ್ತ್ರೇಕ್ಷೆಯಲ್ಲ.

ಸುಮಾರು 35 ವರ್ಷಗಳಿಂದ ಚಿತ್ರೋದ್ಯಮದ ಒಂದಿಲ್ಲೊಂದು ವಲಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ನಾಡಿಗ್, ತಮ್ಮ ನಿರ್ದೇಶನದ ಮೊದಲ ಚಿತ್ರ ಪ್ರಾರಂಭವಾಗಲು ಇಷ್ಟು ವರ್ಷದ ತನಕ ಕಾಯಬೇಕಾಯಿತು. ಈ ಹಂತ ಮುಟ್ಟುವಲ್ಲಿ ಅವರ ವೃತ್ತಿಜೀವನದಲ್ಲಿ ಹಾದುಹೋದ ವೃತ್ತಿಗಳು ಒಂದೆರಡಲ್ಲ. ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕಿನ ಯಗಟಿ ಎಂಬ ಗ್ರಾಮವೊಂದರಿಂದ ಕನಸಿನ ಮೂಟೆ ಹೊತ್ತು ಬೆಂಗಳೂರಿಗೆ ಬಂದ ನಾಡಿಗರಿಗೆ ಮೊದಲು ಕೆಲಸ ಸಿಕ್ಕಿದ್ದು ಮಾರವಾಡಿಯೊಬ್ಬನ ಬಟ್ಟೆ ಅಂಗಡಿಯಲ್ಲಿ. ಆದರೆ ಕೇವಲ ಬಟ್ಟೆ ಅಳೆಯುವ ಕೆಲಸವನ್ನಷ್ಟೇ ಮಾಡಿಕೊಂಡಿದ್ದರೆ ಪ್ರಾಯಶಃ ಇಷ್ಟುಹೊತ್ತಿಗೆ ಅವರೂ ಒಂದು ಬಟ್ಟೆ ಅಂಗಡಿಯನ್ನಿಟ್ಟುಕೊಂಡಿರುತ್ತಿದ್ದರೇನೋ. ಆದರೆ ತಮ್ಮೊಳಗೆ ಅಡಗಿಕೊಂಡಿದ್ದ ವೀಕ್ಷಕನಿಗೆ, ವಿದ್ಯಾರ್ಥಿಗೆ, ಬೆಳೆಯಲು ಅವಕಾಶ ಮಾಡಿಕೊಟ್ಟ ನಾಡಿಗ್, ಇದರ ಜೊತೆ ಜೊತೆಗೇ ಲಾವಣ್ಯ ಎಂಬ ಚಲನಚಿತ್ರ ಪತ್ರಿಕೆಯಲ್ಲೂ ತಮ್ಮನ್ನು ತೊಡಗಿಸಿಕೊಂಡರು.

ಒಂದು ಹಂತಕ್ಕೆ ಚಿತ್ರೋದ್ಯಮದ ಪ್ರಾರಂಭಿಕ ಮಾಹಿತಿಗಳು ಇವರಿಗೆ ಲಭ್ಯವಾಗಿದ್ದು ಆಗಲೇ ಎನ್ನಬಹುದು. ತದನಂತರ ಎಚ್ಎಂವಿ ಧ್ವನಿಮುದ್ರಣ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಅಲ್ಲೊಂದಷ್ಟು ವರ್ಷ ಕಾಯಕ ಮುಂದುವರಿಸಿದರು. ಸಂಗೀತದೆಡೆಗೆ ಆಂತರ್ಯದಲ್ಲಿ ಅಪ್ಪ-ಅಮ್ಮ ಹುಟ್ಟು ಹಾಕಿದ್ದ ಬೀಜ ಹೆಮ್ಮರವಾಗಿದ್ದೇ ಪ್ರಾಯಶಃ ಇಲ್ಲಿ. ಕ್ರಮೇಣ ಒಂದೊಂದೇ ಹೆಜ್ಜೆಯಿಟ್ಟು ಚಿತ್ರರಂಗಕ್ಕೆ ಪಾದಾರ್ಪಣ ಮಾಡಿಯೇಬಿಟ್ಟರಲ್ಲ?! ಆದರೆ ಆಗ ಮಾಧ್ಯಮಗಳದ್ದು ಇಷ್ಟೊಂದು ಭರಾಟೆಯಿರಲಿಲ್ಲವಾದ್ದರಿಂದ ನಾಡಿಗ್ ಕೇವಲ ಸಾಗರಕ್ಕೆ ಸೇರುವ ಮತ್ತೊಂದು ನದಿಯಾದರೇ ವಿನಃ ಅದರ ವ್ಯಾಪ್ತಿ, ಆಳ ಇವುಗಳು ಹೊರ ಜಗತ್ತಿಗೆ ಗೊತ್ತಾಗಲಿಲ್ಲ.

ಚಲನಚಿತ್ರದ ನಿರ್ಮಾಣ ನಿರ್ವಾಹಕನಾಗಿ ತಮ್ಮನ್ನು ತೊಡಗಿಸಿಕೊಂಡ ನಾಡಿಗ್ ಚಲನಚಿತ್ರದ ಕಟ್ಟುವಿಕೆಯ ಸಾಧಕ ಬಾಧಕಗಳನ್ನು ತಮ್ಮ ಅರಿವಿಗೆ ತಂದುಕೊಳ್ಳುವ ಪ್ರಯತ್ನ ಮಾಡಿದರು. ಜೊತೆ ಜೊತೆಗೆ ಸಾಹಿತ್ಯ-ಸಂವಹನೆ-ಸಂಗೀತ-ಛಾಯಾಗ್ರಾಹಣ ಇವುಗಳ ಕುರಿತು ಒಂದಷ್ಟು ಇಣುಕು ನೋಟವೂ ಆಗಾಗ್ಗೆ ನಡೆಯುತ್ತಲೇ ಇತ್ತು. ಅನಂತ್‌ನಾಗ್, ಕಾಶೀನಾಥ್‌ರವರ ಬಹುತೇಕ ಚಿತ್ರಗಳಲ್ಲಿ ಹಾಗೂ ಕೆ.ವಿ.ಜಯರಾಂ, ಕೆ.ವಿ.ರಾಜು ಇವರೇ ಮೊದಲಾದವರ ಸಾಂಗತ್ಯದಲ್ಲಿ ಅಕ್ಷರಲೋಕಕ್ಕೂ ಪರಿಚಯ ಮಾಡಿಕೊಂಡರು.

ಸೀಳು ನಕ್ಷತ್ರ, ಒಲವೇ ಬದುಕು, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಪೂಜಾ, ಬಿಸಿಲು ಬೆಳದಿಂಗಳು, ಪಲ್ಲಕ್ಕಿ, ನಿಶ್ಚಿತಾರ್ಥ, ತೂಗುವೆ ಕೃಷ್ಣನಾ ಹೀಗೆ ಹಲವು ಚಿತ್ರಗಳಲ್ಲಿ, ಹಲವು ವಿಭಾಗಗಳಲ್ಲಿ ನಾಡಿಗ್ ದುಡಿದಿದ್ದಾರೆ. ಕೆಲವು ಚಿತ್ರಗಳಿಗೆ ಘೋಸ್ಟ್ ರೈಟರ್ ಆಗಿ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ನಾಡಿಗ್ ರಚಿಸಿಕೊಟ್ಟದ್ದೂ ಇದೆ. ಅವರ ಸೃಜನಶೀಲ ಸೃಷ್ಟಿ ಬೇರೆಯವರ ಹೆಸರಿನಲ್ಲಿ ತೆರೆಯ ಮೇಲೆ ಮೂಡಿಬಂದಾಗ, ಜೀವನದ ಅನಿವಾರ್ಯತೆ ಇದು ಎಂದು ತಮ್ಮ ಮನಸ್ಸಿಗೆ ತಾವೇ ಸಮಾಧಾನ ಹೇಳಿಕೊಂಡದ್ದೂ ಇದೆ.

ಹೀಗೆ ಚಿತ್ರ ನಿರ್ಮಾಣದ ಹಲವು ಮಜಲುಗಳನ್ನೆಲ್ಲಾ ತಮ್ಮ ಅನುಭವದ ತೆಕ್ಕೆಗೆ ತೆಗೆದುಕೊಂಡ ನಾಡಿಗ್‌ರವರ ತಾಳ್ಮೆ ಪ್ರಾಯಶಃ ಕಲಾ ಸರಸ್ವತಿಗೂ ಕಾಣಿಸಿತು ಎನಿಸುತ್ತದೆ. ಅವರ ಪ್ರತಿಭೆಯ ಕುರಿತು ಅರಿವಾದ ನಿರ್ಮಾಪಕ ವಿಜಯ್‌ಕು ಮಾರ್ ಅವರಿಗೊಂದು ಅವಕಾಶ ಕೊಟ್ಟಿದ್ದಾರೆ. ಕರೆಯೇ ಕೋಗಿಲೆ ಮಾಧವನಾ ಎಂಬ ಚಿತ್ರವನ್ನು ಈಗ ಅಧಿಕೃತವಾಗಿ ನಿರ್ದೇಶಿಸುತ್ತಿರುವ ನಾಡಿಗ್ ಸಂಪೂರ್ಣವಾಗಿ ಅದರಲ್ಲಿಯೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಮ್ಮ ಚಿತ್ರವು ಚಿತ್ರರಸಿಕರಿಗೆ ಒಂದು ರಮ್ಯ ಅನುಭವವನ್ನು ನೀಡಬೇಕೆಂದು ಬಯಸಿರುವ ನಾಡಿಗ್ ಈ ದೃಷ್ಟಿಯಿಂದ ಎಲ್ಲ ವಲಯಗಳ ಪ್ರತಿಭಾವಂತರನ್ನೇ ಒಟ್ಟುಗೂಡಿಸಿ ಚಿತ್ರ ಕಟ್ಟುತ್ತಿದ್ದಾರೆ. ನೀರಿನಲ್ಲಿ ಅಲೆಯ ಉಂಗುರದಂಥ ಹಲವು ಅಮರ-ಮಧುರ-ಪ್ರೇಮಗೀತೆಗಳನ್ನು ರಚಿಸಿಕೊಟ್ಟ ಖ್ಯಾತ ಸಾಹಿತಿ ಆರ್.ಎನ್.ಜಯಗೋಪಾಲ್ ಬಹಳ ದಿನಗಳ ನಂತರ ಅದ್ಬುತ ಗೀತೆಗಳನ್ನು ಕಟ್ಟಿಕೊಟ್ಟಿದ್ದಾರೆ ಎಂದು ಸುದ್ದಿ.

ಚಿತ್ರಗೀತೆಗಳಿಗೆ ನವಿಲುಗರಿಯ ಸ್ಪರ್ಶ ನೀಡಿದ ಜಯಂತ್ ಕಾಯ್ಕಿಣಿ ಹಾಗೂ ಚಿತ್ರಗೀತೆಗಳಲ್ಲಿ ಸಮಕಾಲೀನತೆಯನ್ನು ಬಿಂಬಿಸುವ ಸಾಹಿತಿ ಶಾಮಸುಂದರ ಕುಲಕರ್ಣಿಯವರೂ ಉಳಿದ ಗೀತೆಗಳಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರಂತೆ. ಗಾಳಿಪಟ ಖ್ಯಾತಿಯ ದಿಗಂತ್ ಈ ಚಿತ್ರದ ನಾಯಕ ಎಂಬುದಿಲ್ಲಿ ವಿಶೇಷ. ಹಿಂದೂಸ್ತಾನಿ ಸಂಗೀತವನ್ನು ಕೊಳಲು ವಾದನ ಹಾಗೂ ಗಾಯನ ಎರಡೂ ಪ್ರಕಾರಗಳಲ್ಲಿ ಅರೆದು ಕುಡಿದಿರುವ ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಗೋಡ್ಖಿಂಡಿಯವರು ಗೀತೆಗಳಿಗೆ ಸಂಗೀತ ಒದಗಿಸಿದ್ದು ಅವೀಗ ಮೆಚ್ಚುಗೆಗೆ ಪಾತ್ರವಾಗಿವೆ.

ಚಿತ್ರದ ಒಂದು ಹಂತದ ಚಿತ್ರೀಕರಣ ಈಗಾಗಲೇ ಕುಂದಾಪುರದ ಸುತ್ತಮುತ್ತವಿರುವ ರಮ್ಯ ತಾಣಗಳಲ್ಲಿ ನಡೆದಿದ್ದು ಅದು ಚೆನ್ನಾಗಿ ಮೂಡಿಬಂದಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಖ್ಯಾತ ಸಂಗೀತಗಾರ ವಿದ್ಯಾಭೂಷಣರ ಪತ್ನಿ ರಮಾ ವಿದ್ಯಾಭೂಷಣ ಅವರು ಈ ಚಿತ್ರದ ಪಾತ್ರವೊಂದರಲ್ಲಿ ನಟಿಸುತ್ತಿರುವುದು ಮತ್ತೊಂದು ವಿಶೇಷ.

ತಾಳ್ಮೆಯ ಪ್ರತಿರೂಪ ಕೃಷ್ಣಾ ನಾಡಿಗ್‌ರವರಿಗೆ ಬೆಸ್ಟ್ ಆಫ್ ಲಕ್ ಎಂದು ಹೇಳಲು ಇದು ಸಕಾಲವಲ್ಲವೇ?