ಸತತವಾಗಿ 9ನೇ ವಾರಕ್ಕೆ ಇಳಿಮುಖವಾದ ಹಣದುಬ್ಬರವು, ಡಿಸೆಂಬರ್ 27ರಂದು ಕೊನೆಗೊಂಡ ವಾರದ ಹಣದುಬ್ಬರ ಪ್ರಮಾಣವು 10 ತಿಂಗಳಷ್ಟು ಹಿಂದಿನ ಶೇ.5.91ಕ್ಕೆ ಇಳಿಯಿತು. ಆಹಾರ ಮತ್ತು ಉತ್ಪನ್ನಗಳ ಬೆಲೆ ಇಳಿಕೆಯಾಗಿದ್ದೇ ಇದಕ್ಕೆ ಕಾರಣ.
ಸಗಟು ಬೆಲೆಯ ಏರಿಳಿತದ ಆಧಾರದಲ್ಲಿ ನಿರ್ಧರಿಸಲಾಗುವ ಹಣದುಬ್ಬರ ಪ್ರಮಾಣವು ಹಿಂದಿನ ವಾರದ ಶೇ.6.38ರಿಂದ ಶೇ.0.47ರಷ್ಟು ಇಳಿಕೆ ಕಂಡಿತು. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಅದು ಶೇ.3.83ರಷ್ಟಿತ್ತು.
ಜೋಳದ ಬೆಲೆ ಶೇ.5 ಹಾಗೂ ಹಣ್ಣು ಮತ್ತು ತರಕಾರಿಗಳ ಬೆಲೆಗಳು ಶೇ.3ರಷ್ಟು, ಮೊಟ್ಟೆ ಬೆಲೆ ಶೇ.1ರಷ್ಟು ಇಳಿಕೆ ಕಂಡ ಪರಿಣಾಮ ಆಹಾರ ಉತ್ಪನ್ನಗಳ ಸಮೂಹದ ಸೂಚ್ಯಂಕವು ಶೇ.0.7ರಷ್ಟು ಕುಸಿಯಿತು.
ಉತ್ಪಾದನಾ ವಲಯದ ಸರಕುಗಳಲ್ಲಿ, ಆಮದಿತ ಅಡುಗೆ ಎಣ್ಣೆಯು ಶೇ.1. ಪಾಲಿಯೆಸ್ಟರ್ ಫೈಬರ್ ಶೇ.2 ಹಾಗೂ ಮುದ್ರಣ ಕಾಗದ ಬೆಲೆಯು ಶೇ.1ರಷ್ಟು ಕೆಳಗಿಳಿದಿತ್ತು.
ಈ ವಾರದ ಅವಧಿಯಲ್ಲಿ ಸಿಮೆಂಟ್ ಮತ್ತು ಕಬ್ಬಿಣ ಹಾಗೂ ಉಕ್ಕಿನ ಬೆಲೆಯಲ್ಲಿ ಯಾವುದೇ ಏರಿಳಿತ ಕಾಣದ ಹಿನ್ನೆಸೆಯಲ್ಲಿ ತೈಲ ಕ್ಷೇತ್ರದ ಸೂಚ್ಯಂಕದಲ್ಲಿ ಯಾವುದೇ ಬದಲಾವಣೆ ದಾಖಲಾಗಲಿಲ್ಲ.
ಆದರೆ, ಡಿಸೆಂಬರ್ 27ಕ್ಕೆ ಕೊನೆಗೊಂಡ ವಾರದಲ್ಲಿ ರಿಫೈನ್ಡ್ ಆಗಿಲ್ಲದ ಎಣ್ಣೆ ಶೇ.14ರಷ್ಟು, ಖಂಡಸಾರಿ ಶೇ.2ರಷ್ಟು, ಶೇಂಗಾ ಎಣ್ಣೆ ಶೇ.2 ಹಾಗೂ ಸಂಬಾರ ಪದಾರ್ಥದ ಬೆಲೆ ಶೇ.1ರಷ್ಟು ಏರಿಕೆಯಾಗಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಶೇ.12.91ಕ್ಕೇರಿದ್ದ ಹಣದುಬ್ಬರ ಪ್ರಮಾಣವು, ಆ ಬಳಿಕ ಇಳಿಕೆ ಕಾಣತೊಡಗಿತ್ತು. |