ನ್ಯೂಯಾರ್ಕ್: ಸೊಳ್ಳೆಗಳು ತಂದೊಡ್ಡುವ ರೋಗ ಒಂದೋ.. ಎರಡೋ.. ಮನುಷ್ಯ ಆಧುನಿಕವಾಗಿ ಬದಲಾಗುತ್ತಿದ್ದಂತೆ ಸೊಳ್ಳೆಗಳಿಂದ ಬರುತ್ತಿರುವ ರೋಗಗಳೂ ಹೆಚ್ಚಾಗುತ್ತಿವೆ. ಜತೆಗೆ ಸೊಳ್ಳೆ ಕೊಲ್ಲುವ ಸಾಧನಗಳೂ! ಇದೀಗ ಹೊಸತೊಂದು ಸೊಳ್ಳೆ ಕೊಲ್ಲುವ ಸಾಧನ ಹೊರಬರುತ್ತಿದೆಯಂತೆ. ಅದು ಅಂತಿಂಥ ಸಾಧನವೆಲ್ಲ ಅಲ್ಲ. ಲೇಸರ್ ಗನ್!
ಅಮೆರಿಕದ ವಿಜ್ಞಾನಿಗಳು ಈಗ ಸ್ಟಾರ್ ವಾರ್ಸ್- ಆಂಟಿ ಮಿಸೈಲ್ ಪ್ರೋಗ್ರಾಮ್‌ನಡಿಯಲ್ಲಿ ಸೊಳ್ಳೆಗಳನ್ನು ಕೊಲ್ಲುವ ಲೇಸರ್ ತಂತ್ರಜ್ಞಾನವುಳ್ಳ ಗನ್ ತಯಾರಿಸುತ್ತಿದ್ದಾರಂತೆ. ಅಮೆರಿಕದ ನ್ಯೂಕ್ಲಿಯರ್ ಯುದ್ಧಕ್ಕೆ ವೈಜ್ಞಾನಿಕವಾಗಿ ಯೋಜನೆಗಳ ರೂಪುರೇಷೆ ತಯಾರಿಸಿದ ಲೋವೆಲ್ ವುಡ್ ಸಹಾಯದಿಂದಲೇ ಈ ಲೇಸರ್ ಗನ್‌ಗಳನ್ನು ತಯಾರಿಸಲಾಗುತ್ತಿದ್ದು, ಇದು ಏಕಕಾಲದಲ್ಲಿ ಸಾವಿರಾರು ಸೊಳ್ಳೆಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದುತ್ತದಂತೆ.
ಈ ವಿಶೇಷ ಗನ್ ಇದು ಸೊಳ್ಳೆಗಳಿಂದ ಬರುವ ಶಬ್ದಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿದ್ದು, ಆ ಶಬ್ಧದ ಆಧಾರದಲ್ಲಿ ಲೇಸರ್ ಕಿರಣಗಳನ್ನು ಬಿಡುಗಡೆ ಮಾಡುವ ಮೂಲಕ ಸೊಳ್ಳೆಗಳನ್ನು ಕೊಲ್ಲುತ್ತದೆ. ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಸಾವಿರಾರು ಸೊಳ್ಳೆಗಳನ್ನು ಈ ಗನ್ ಮೂಲಕ ಕೊಲ್ಲಬಹುದಂತೆ. ಅಂದಹಾಗೆ, ಈ ಸಂಶೋಧನೆಯನ್ನು ಬೆಂಬಲಿಸಿದ್ದು ಮೈಕ್ರೋಸಾಫ್ಟ್ ಬಿಲಿಯನೇರ್ ಬಿಲ್ ಗೇಟ್ಸ್. |