ಆರ್ಥಿಕ ಬಿಕ್ಕಟ್ಟು ಜಗತ್ತನ್ನೇ ನಡುಗಿಸುತ್ತಿದ್ದರೂ, ಕತ್ತೆಗಳಿಗೆ ಇದೊಂದು ಕಾಲ. ಕತ್ತೆಗಳಿಗೆ ಭರ್ಜರಿ ಬೇಡಿಕೆ ಇದೆ ಎಂಬುದು ಮನದಟ್ಟಾಗಿದ್ದು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಕತ್ತೆಗಳ ಜಾತ್ರೆಯ ಆರಂಭದ ದಿನವೇ 2000 ಕತ್ತೆಗಳು, ಅದು ಕೂಡ ದಾಖಲೆ ಬೆಲೆಗೆ ಮಾರಾಟವಾದಾಗ!
ಈ ವರ್ಷ ಗಾರ್ದಭ ಬಜಾರ್‌ಗೆ ಹಿಂದೆಂದಿಗಿಂತಲೂ ಅದ್ಭುತ ಪ್ರತಿಕ್ರಿಯೆ ದೊರೆತಿದೆ. ಕಳೆದ ವರ್ಷಕ್ಕಿಂತ ಶೇ.50ರಷ್ಟು ಹೆಚ್ಚು ಅಂದರೆ ಪ್ರತಿ ಕತ್ತೆಗೆ 7000ದಿಂದ 15 ಸಾವಿರ ರೂ.ವರೆಗಿನ ಬೆಲೆ ಬಂದಿದೆ ಎಂದು ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ವರ್ಷ ಅಹ್ಮದ್‌ನಗರ ಜಿಲ್ಲೆಯ ಪಾಥರ್ಡಿ ಗ್ರಾಮದಲ್ಲಿ ನಡೆಯುವ ಈ ಜಾತ್ರೆಗೆ ಮಹಾರಾಷ್ಟ್ರ ಮಾತ್ರವಲ್ಲದೆ, ರಾಜಸ್ಥಾನ ಮತ್ತು ಗುಜರಾತ್‌ಗಳಿಂದಲೂ ವ್ಯಾಪಾರಿಗಳು ಬರುತ್ತಾರೆ. ಈ ಬಾರಿ ಕತ್ತೆ ಮಾರಾಟಗಾರರನ್ನು ಅಚ್ಚರಿಯಲ್ಲಿ ಮುಳುಗಿಸಿದ ಸಂಗತಿಯೆಂದರೆ ಬಿಲ್ಡರುಗಳು ಮತ್ತು ಅವರ ಏಜೆಂಟರೂ ಇದರಲ್ಲಿ ಭಾಗವಹಿಸಿ ಕತ್ತೆಗಳನ್ನು ಖರೀದಿಸಿದ್ದಾರೆ.
ಕಟ್ಟಡ ನಿರ್ಮಾಣ ಕಾಮಗಾರಿಗೆ ಕತ್ತೆಗಳನ್ನು ಬಳಸುವುದು ಮಿತವ್ಯಯಕಾರಿ ಎಂಬುದು ಈ ಬಿಲ್ಡರುಗಳ ಆಲೋಚನೆ.
ಕತ್ತೆಗಳಿಗೆ ಈ ಪರಿಯ ಬೇಡಿಕೆ ಬರಲು ಕಾರಣವೇನು? ಕಾರ್ಮಿಕರು ಮತ್ತು ವಿದ್ಯುತ್ ಕೊರತೆ ಎನ್ನುತ್ತಾರೆ ಈ ಕತ್ತೆ ಜಾತ್ರೆಗೆ ಸಂಬಂಧಿಸಿದ ಅಧಿಕಾರಿಗಳು. ಗ್ರಾಮೀಣ ಮತ್ತು ಪರ್ವತೀಯ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಹೆಚ್ಚು ಶ್ರಮದ ಅಗತ್ಯವಿದೆ. ಹೀಗಾಗಿ ಅತ್ತ ಕಡೆ ಬರಲು ಕಾರ್ಮಿಕರು ಸುಲಭವಾಗಿ ಒಪ್ಪುವುದಿಲ್ಲ, ಹೆಚ್ಚು ವೇತನ ಕೇಳುತ್ತಾರೆ. ಇದಕ್ಕೆ ಬಿಲ್ಡರುಗಳು ಕಂಡುಕೊಂಡ ಉಪಾಯವೇ ಕತ್ತೆ!
ಇಟ್ಟಿಗೆ, ಸಿಮೆಂಟು, ಕಬ್ಬಿಣ ಮತ್ತು ಮರಳು ಸಾಗಿಸಲು ಈ ಕತ್ತೆಗಳನ್ನು ಬಳಸಲಾಗುತ್ತದೆ. ಒಂದು ಕತ್ತೆ ಸರಿ ಸುಮಾರು ಆರೇಳು ಕಾರ್ಮಿಕರ ಕೆಲಸವನ್ನು ನಿಭಾಯಿಸಬಲ್ಲುದಂತೆ.
ಇದಕ್ಕೆ ಮತ್ತೊಂದು ಕಾರಣವೂ ಇದೆ. ಇತ್ತೀಚೆಗೆ ಮರಾಠೇತರರ ವಿರುದ್ಧ ಆ ರಾಜ್ಯದಲ್ಲಿ ರಾಜ್ ಠಾಕ್ರೆ ನೇತೃತ್ವದಲ್ಲಿ ಆಂದೋಲನವೊಂದು ನಡೆಯಿತು. ಹೀಗಾಗಿ ಹೊರ ರಾಜ್ಯಗಳಿಂದ ಬಂದ ಹೆಚ್ಚಿನ ಕಾರ್ಮಿಕರು ಬದುಕಿದರೆ ಬೇಡಿ ತಿಂದೇವು ಎಂದುಕೊಂಡು ರಾಜ್ಯದಿಂದ ಮರಳಿ ಹೋಗಿದ್ದರು. ಈ ಕಾರಣಕ್ಕೆ ವಲಸೆ ಕಾರ್ಮಿಕರ ಕೊರತೆ ಉದ್ಭವಿಸಿತು. ಕತ್ತೆಗಳಿಗಿದು ಕಾಲ. |