ಜೂನ್ 30ರಂದು ಉದ್ಘಾಟನೆಗೊಳ್ಳಲಿರುವ ಬಾಂದ್ರಾ - ವೋರ್ಲಿ ನಡುವಿನ ಅಭೂತಪೂರ್ವ ಸಂಪರ್ಕ ಸೇತುವೆ ನಿರ್ವಹಣೆ ಮಾಡಲು ದಿನಕ್ಕೆ 1,000 ಕಿಲೋ ವ್ಯಾಟ್ ವಿದ್ಯುತ್ ಬೇಕಂತೆ -- ಅಂದರೆ ಸುಮಾರು 100 ಮನೆಗಳಿಗೆ ಬಳಸುವಷ್ಟು.5.6 ಕಿಲೋ ಮೀಟರ್ ಉದ್ದದ ಈ ಸೇತುವೆ ನಿರ್ಮಾಣಗೊಂಡಿರುವುದು ಸಮುದ್ರದ ಮೇಲೆ ಎಂಬುದು ವಿಶೇಷ. ಸಮುದ್ರಕ್ಕೂ ಸೇತುವೇನಾ, ಆಕಾಶಕ್ಕೇ ಏಣಿನಾ ಅಂತೆಲ್ಲ ಪ್ರಶ್ನೆ ಮಾಡೋರಿಗೆ ಉತ್ತರಿಸುವ ರೀತಿಯಲ್ಲೀಗ ಸೇತುವೆ ಎದ್ದು ನಿಂತಿದೆ. ಇದರಿಂದ ಸಂಚಾರದಟ್ಟಣೆಯನ್ನು ಕಡಿಮೆ ಮಾಡುವ ಜತೆಗೆ ಸಮಯವನ್ನೂ ಉಳಿಸಬಹುದು ಎಂಬುದು ಸರಕಾರದ ಲೆಕ್ಕಾಚಾರ." ನಾವಿಲ್ಲಿ 1,000 ಕೆವಿಎ ಸಾಮರ್ಥ್ಯದ ಟ್ರಾನ್ಸ್‌ಮೀಟರ್ ಅಳವಡಿಸಿದ್ದೇವೆ. ಬೇಡಿಕೆಯನ್ನು ಅಂದಾಜಿಸಿಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ" ಎಂದು ಬಜಾಜ್ ಎಲೆಕ್ಟ್ರಿಕಲ್ಸ್‌ನ ಲಲಿತ್ ಮೆಹ್ತಾ ಹೇಳುತ್ತಾರೆ.ಕೆವಿಎಯು ಬೇಡಿಕೆಯ ಪ್ರಮಾಣವನ್ನು ಗುರುತಿಸಿದರೆ, ಕೆಡಬ್ಲ್ಯೂಎಚ್ ಬಳಕೆಯನ್ನು ಅಳತೆ ಮಾಡುತ್ತದೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ವಿದ್ಯುತ್ ಬಳಕೆಯ ಪ್ರಮಾಣ 750 ಕೆಡಬ್ಲ್ಯೂಎಚ್ ಅಥವಾ 750 ಯೂನಿಟ್‌ಗಳು. ಅದೇ ವಿಶ್ವದ ಒಂದು ವರ್ಷದ ವಿದ್ಯುತ್ ಬಳಕೆಯ ಸರಾಸರಿ 1000 ಕೆಡಬ್ಲ್ಯೂಎಚ್. ಒಂದು 40W ಟ್ಯೂಬ್ ಲೈಟ್ 250 ಗಂಟೆಗಳಷ್ಟು ಸಮಯ ಉರಿದರೆ ಒಂದು ಕೆಡಬ್ಲ್ಯೂಎಚ್ ವಿದ್ಯುತ್ ಬೇಕಾಗುತ್ತದೆ.ದ್ವೀಪ ನಗರದ ಪ್ರಮುಖ ಪ್ರವಾಸಿ ಕೇಂದ್ರವಾಗುತ್ತಿರುವ ಈ ಸುದೀರ್ಘ ಸೇತುವೆಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ಬಜಾಜ್ ಎಲೆಕ್ಟ್ರಿಕಲ್ಸ್ 9 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ.ಸೇತುವೆಗೆ ವಿದ್ಯುತ್ ಪೂರೈಸುವ ಜವಾಬ್ದಾರಿಯನ್ನು ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್‌ಪೋರ್ಟ್ (ಬೆಸ್ಟ್) ಹಾಗೂ ರಿಲಯೆನ್ಸ್ ಪವರ್‌ಗಳು ವಹಿಸಿಕೊಳ್ಳಲಿವೆ.ಈ 5.6 ಕಿಲೋ ಮೀಟರ್ ಉದ್ದದ ಸೇತುವೆಯ ಎತ್ತರ ಕುತುಬ್ ಮಿನಾರ್‌ನ 63 ಪಟ್ಟು. ಸೇತುವೆ ನಿರ್ಮಾಣಕ್ಕಾಗಿ 90,000 ಟನ್ ಸಿಮೆಂಟ್ ಬಳಸಲಾಗಿದೆ. ಕೇವಲ ವಿದ್ಯುತ್ ದೀಪಗಳ ಅಳವಡಿಕೆಗೆ ಒಂಬತ್ತು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.43 ಮಹಡಿಗಳ ಕಟ್ಟಡದಷ್ಟು ಎತ್ತರದವರೆಗೆ ಇಲ್ಲಿ ಕೇಬಲ್‌ಗಳ ಮೂಲಕ ಸೇತುವೆಗೆ ಆಧಾರ ನೀಡಲಾಗಿದೆ. ಲೆಕ್ಕಾಚಾರಗಳ ಪ್ರಕಾರ ಈ ಎಂಟು ಸಾಲುಗಳ ಸೇತುವೆಯಿಂದಾಗಿ 60ರಿಂದ 90 ನಿಮಿಷಗಳಷ್ಟು ಅಗತ್ಯವಿದ್ದ ಪ್ರಯಾಣದ ಸಮಯವನ್ನು ಕೇವಲ ಆರರಿಂದ ಎಂಟು ನಿಮಿಷಗಳಿಗೆ ಇಳಿಸಲಿದೆ. ಅಲ್ಲದೆ ವಾರ್ಷಿಕ 100 ಕೋಟಿ ರೂಪಾಯಿಗಳ ಉಳಿತಾಯ ವಾಹನ ಮಾಲಿಕರಿಗಾಗಲಿದೆಯಂತೆ. |