ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕತೆ ನಿಧಾನವಾಗಿ ಸಹಜತೆಯತ್ತ ಮರಳುತ್ತಿದೆ: ಪ್ರಧಾನಿ
(Manmohan Singh | Pranab Mukherjee | Sharad Pawar | Planning Commission)
ಜಾಗತಿಕ ಹಿಂಜರಿತದಿಂದ ಅರ್ಥವ್ಯವಸ್ಥೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
2008-09ರ ಕೊನೆಯ ತ್ರೈಮಾಸಿಕ ಅವಧಿಗಿಂತ ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಉತ್ಪಾದನಾ ಪ್ರಗತಿ ಸಾಧಿಸಿದ್ದನ್ನು (ಶೇ.6.1) ಸರಕಾರ ಸೋಮವಾರ ಬಿಡುಗಡೆ ಮಾಡಿತ್ತು. ಈ ಹಿನ್ನಲೆಯಲ್ಲಿ ಯೋಜನಾ ಆಯೋಗದ ಪೂರ್ಣ ಪ್ರಮಾಣದ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿಯವರು ಈ ಹೇಳಿಕೆ ನೀಡಿದ್ದಾರೆ.
ದೇಶವು ಜಾಗತಿಕ ಹಿಂಜರಿತ ಮತ್ತು ಮಳೆಯ ಅಭಾವದಿಂದಾಗಿ ಕಠಿಣ ವರ್ಷವನ್ನು ಎದುರಿಸುವಂತಾಗಿದೆ ಎಂದೂ ಸಿಂಗ್ ಇದೇ ಸಂದರ್ಭದಲ್ಲಿ ತಿಳಿಸಿದರು.
ನಾವು ಜಾಗತಿಕ ಆರ್ಥಿಕ ಹಿಂಜರಿತದಿಂದಾಗಿ ಒಂದು ವರ್ಷವನ್ನು ಕಠಿಣವಾಗಿ ಕಳೆದಿದ್ದೇವೆ. ಇದೀಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದ್ದು, ಮುಂದಿನ ಕೆಲವೇ ತಿಂಗಳುಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಯೋಜನಾ ಆಯೋಗವು ತನ್ನ ಸಚಿವ ಸದಸ್ಯರಿಗೆ ಸಲ್ಲಿಸಬೇಕಾಗಿರುವ ಆರ್ಥಿಕ ಪರಿಸ್ಥಿತಿಯ ಮೌಲ್ಯಮಾಪನ ನಡೆಸಲು ಇದರಿಂದಾಗಿ ಸಹಾಯವಾಗಬಹುದು ಎಂಬುದು ನನ್ನ ಅನಿಸಿಕೆ ಎಂದು ಆಯೋಗದ ಅಧ್ಯಕ್ಷರೂ ಆಗಿರುವ ಸಿಂಗ್ ನುಡಿದರು.
ಪ್ರಧಾನ ಮಂತ್ರಿಗಳು ಅಧ್ಯಕ್ಷತೆ ವಹಿಸಿದ್ದ ಈ ಸಭೆಯಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ, ಕೃಷಿ ಸಚಿವ ಶರದ್ ಪವಾರ್ ಹಾಗೂ ಇತರ ಸಂಪುಟ ಸಚಿವರು ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಭಾರತದ ಇಂಧನ ನೀತಿಗಳ ಕುರಿತು ವಿಮರ್ಶೆ ನಡೆಸಲಾಯಿತು. ಭಾರತದ ಆರ್ಥಿಕ ಪ್ರಗತಿಯಲ್ಲಿ ಇಂಧನವು ಪ್ರಮುಖ ಪಾತ್ರವಹಿಸುತ್ತಿದ್ದು, ಆರ್ಥಿಕ ಕೊರತೆ ಎದುರಾಗುವ ಕ್ಷೇತ್ರಗಳಲ್ಲಿ ಇದೂ ಒಂದು ಎಂದು ಪ್ರಧಾನಿಯವರು ತಿಳಿಸಿದರು.
ಪ್ರಸಕ್ತ ದೇಶವು ನಮಗೆ ಅಗತ್ಯವಿರುವ ಶೇ.70ರಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೆ ಕಲ್ಲಿದ್ದಲು ಕೂಡ ಕೊರತೆಯತ್ತ ಸಾಗುತ್ತಿದೆ ಎಂದು ಅವರು ವಿವರಣೆ ನೀಡಿದ್ದಾರೆ.