ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗುಜರಾತಿಗೆ ಕೋಟಿ ಕೋಟಿ ತಂದುಕೊಟ್ಟ ಮೋದಿ (Vibrant Gujarat Global Investors Summit | Narendra Modi | Ambani)
Bookmark and Share Feedback Print
 
ಗಾಂಧಿ ನಗರ: ಯಾರೇನೇ ಕೂಗಾಡಿದರೂ ತಲೆಕೆಡಿಸಿಕೊಳ್ಳದೆ ಗುಜರಾತ್ ರಾಜ್ಯವನ್ನು ಅಭಿವೃದ್ಧಿಪಡಿಸುತ್ತಿರುವ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಡೆಸಿದ 'ವೈಬ್ರೆಂಟ್ ಗುಜರಾತ್' ಎಂಬ ಆರ್ಥಿಕ ಸಮ್ಮೇಳನದಲ್ಲಿ ಕೋಟಿ ಕೋಟಿ ರೂಪಾಯಿ ಬಂಡವಾಳವು ಹರಿದುಬರುತ್ತಿದ್ದು, ಅನಿಲ್ ಅಂಬಾನಿ ಅವರ ಸಂಸ್ಥೆಯು 50 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ಕಛ್, ಜೂನಾಗಢ ಮತ್ತು ಪೋರಬಂದರುಗಳಲ್ಲಿ ಸಿಮೆಂಟ್ ಕಾರ್ಖಾನೆ ಸ್ಥಾಪಿಸಲು ಈ ಹಣ ಹೂಡುತ್ತಿರುವುದಾಗಿ, ವಿದೇಶೀ ಕಂಪನಿಗಳು, ರತನ್ ಟಾಟಾ, ಅಂಬಾನಿ ಸಹೋದರರು, ಗೌಟಮ್ ಅಡಾನಿ, ಚಂದಾ ಕೋಚರ್, ಆದಿ ಗೋದ್ರೆಜ್, ಜಿವಿಕೆ ರೆಡ್ಡಿ, ಆರ್.ಎನ್.ಧೂತ್ ಮತ್ತು ಸುಭಾಷ್ ಚಂದ್ರ ಗೋಯಲ್ ಮುಂತಾದ ದೇಶೀ ಉದ್ಯಮಾಧಿಪತಿಗಳು ಭಾಗವಹಿಸಿದ್ದ ಸಮ್ಮೇಳನದಲ್ಲಿ ಅನಿಲ್ ಅಂಬಾನಿ ಘೋಷಿಸಿದರು.

ಐಸಿಐಸಿಐ ಬ್ಯಾಂಕಿನ ಸಿಇಒ ಚಂದಾ ಕೋಚರ್ ಅವರು ಕೂಡ, ರಾಜ್ಯದಲ್ಲಿ 2000 ಹಳ್ಳಿಗಳಲ್ಲಿ ಶಾಖೆಗಳನ್ನು ತೆರೆಯುವುದಾಗಿ ಹೇಳಿ, ಭರ್ಜರಿ ಉದ್ಯೋಗಾವಕಾಶವನ್ನು ಸೃಷ್ಟಿಸಿದರು.

ಈಗಾಗಲೇ ಕೌಶಲ್ಯ ವರ್ಧನೆ ಮತ್ತು ಶುಚೀಕರಣ ವ್ಯವಸ್ಥೆಗಾಗಿ ಗುಜರಾತ್ ಜತೆಗೆ ಕೈಜೋಡಿಸಿರುವ ಟಾಟಾ ಸಮೂಹವು, ಗ್ರಾಮೀಣ ಸಾರಿಗೆ ಸಂಬಂಧ ಹೊಸ ಒಪ್ಪಂದ ಮಾಡಿಕೊಳ್ಳಲಿದೆ ಎಂದರು ರತನ್ ಟಾಟಾ. ನ್ಯಾನೋ ಕಾರು ತಯಾರಿಕಾ ಸ್ಥಾವರನನ್ನು ಗುಜರಾತಿಗೆ ವರ್ಗಾಯಿಸಿರುವ ರತನ್ ಟಾಟಾ, ರಾಜ್ಯದಲ್ಲಿ 50 ಸಾವಿರ ಉದ್ಯೋಗಗಳನ್ನು ಸೃಷ್ಟಿಸಿ 30 ಸಾವಿರ ಕೋಟಿ ರೂಪಾಯಿ ಹಣವನ್ನು ಹೂಡಿದೆ. ಟಿಸಿಎಸ್, ಟಾಟಾ ಪವರ್, ಟಾಟಾ ಟೆಲಿ ಸರ್ವಸಸ್ ಮತ್ತು ಟಾಟಾ ಕೆಮಿಕಲ್ಸ್ ಈಗಾಗಲೇ ಗುಜರಾತಿನಲ್ಲಿ ಕಾರ್ಯಾಚರಿಸುತ್ತಿವೆ ಎಂದರು ರತನ್ ಟಾಟಾ.

ಉದ್ಯಮಿ ಮುಖೇಶ್ ಅಂಬಾನಿ ಕೂಡ ಹಿಂದುಳಿಯಲಿಲ್ಲ. ಗಾಂಧಿನಗರ ಮೂಲದ ದೀನದಯಾಳ್ ಪೆಟ್ರೋಲಿಯಂ ಯುನಿವರ್ಸಿಟಿಯನ್ನು ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸುವುದಾಗಿ ಅವರು ಘೋಷಿಸಿದರು.

ದಾಖಲೆಯ 182 ದಿನಗಳಲ್ಲಿ ಮಹಾತ್ಮ ಮಂದಿರ ಎಂಬ ಪ್ರದೇಶದಲ್ಲಿ ಸಮಾವೇಶದ ತಾಣವನ್ನು ರೂಪಿಸಿದ ಲಾರ್ಸನ್ ಆಂಡ್ ಟೂಬ್ರೋ ಗ್ರೂಪ್, ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ 15 ಸಾವಿರ ಕೋಟಿ ರೂ. ಹೂಡುವುದಾಗಿ ಘೋಷಿಸಿತು.

ಅಡಾನಿ ಗ್ರೂಪ್ 80 ಸಾವಿರ ಕೋಟಿ ರೂ. ಹೂಡಿಕೆ ನಡೆಸುವುದಾಗಿ ಪ್ರಕಟಿಸಿದರೆ, ಮಹೀಂದ್ರಾ ಗ್ರೂಪ್ 6 ಸಾವಿರ ಕೋಟಿ ರೂ.ಗಳ ಒಡಂಬಡಿಕೆ ಮಾಡಿಕೊಳ್ಳಲಿದೆ. ಅದೇ ರೀತಿ ಎಸ್ಸೆಲ್ ಗ್ರೂಪ್ ಕೂಡ ಒಳಚರಂಡಿಗೆ ಸಂಬಂಧಿಸಿದ ಪೈಲಟ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಮುಖ್ಯಸ್ಥ ಸುಭಾಷ್ ಚಂದ್ರ ಗೋಯಲ್ ಘೋಷಿಸಿದ್ದಾರೆ.

ಒಟ್ಟಿನಲ್ಲಿ ವೈಬ್ರೆಂಟ್ ಗುಜರಾತ್ ಹೂಡಿಕೆ ಸಮಾವೇಶವು, ದೇಶ ವಿದೇಶಗಳಿಂದ ಸಾಕಷ್ಟು ಹಣವನ್ನು ಗುಜರಾತ್‌ಗೆ ಹರಿಯುವಂತೆ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ